ಚಿಕ್ಕಮಗಳೂರು,ಜು.22- ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಮುಂದುವರೆದಿದ್ದು, 15 ದಿನಗಳ ಅಂತರದಲ್ಲೇ ಕಾಡುಕೋಣ ದಾಳಿಗೆ ಮತ್ತೊಂದು ಬಲಿಯಾಗಿದೆ. ಕಾಡುಕೋಣ ದಾಳಿಗೆ ಕೊಪ್ಪ ತಾಲೂಕಿನ ದೋಣಿಹಡ್ಲು ಗ್ರಾಮದ ಮಂಜುನಾಥ್ (45) ಮೃತಪಟ್ಟಿದ್ದಾರೆ .
ಜುಲೈ 7ರಂದು ಕಳಸದಲ್ಲಿ ಶೀಲಾ(52) ಕಾಡುಕೋಣ ದಾಳಿಗೆ ಬಲಿಯಾಗಿದ್ದರು. ಇದೀಗ ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ದೋಣಿಹಡ್ಲು ಗ್ರಾಮದಲ್ಲಿ ಮನೆಯಿಂದ ತೋಟಕ್ಕೆ ಹೋಗುವಾಗ ಹಳ್ಳಿರಸ್ತೆಯಲ್ಲೇ ದಾಳಿ ಮಾಡಿ ತಿವಿದು ಸಾಯಿಸಿದೆ.
ಗಂಭೀರಗೊಂಡಿದ್ದ ಮಂಜುನಾಥ್ರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವಪ್ಪಿದ್ದಾರೆ.ನಿರಂತರ ಕಾಡುಕೋಣ ದಾಳಿಯಿಂದ ಜನ ಹೈರಾಣಾಗಿದ್ದಾರೆ.ಕಾಡು ಪ್ರಾಣಿ ಮಾನವ ಸಂಘರ್ಷದಿಂದ ಮಲೆನಾಡಿಗರಿಗೆ ನೆಮದಿಯ ಜೀವನ ಇಲ್ಲವಾಗಿದೆ ಎಂದು ಸ್ಥಳೀಯರು ಆರೋಪಿಸಿ ಅರಣ್ಯ ಇಲಾಖೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ.ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
