ಬೆಂಗಳೂರು,ಜು.23-ಅನಾರೋಗ್ಯದಿಂದ ನೊಂದಿದ್ದ ವೃದ್ಧ ದಂಪತಿ ತಂಪು ಪಾನೀಯದಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಂಜುನಾಥನಗರದ ನಿವಾಸಿಗಳಾದ ಈಶ್ವರ್ ಆಚಾರಿ (73) ಮತ್ತು ಗೌರಿ (60) ಆತಹತ್ಯೆ ಮಾಡಿಕೊಂಡಿರುವ ವೃದ್ಧ ದಂಪತಿ.
ಈಶ್ವರ್ ಆಚಾರಿ ಅವರು ಈ ಹಿಂದೆ ಚಿನ್ನ-ಬೆಳ್ಳಿ ಕೆಲಸ ಮಾಡಿಕೊಂಡಿದ್ದರು. ಕಳೆದ 10 ವರ್ಷಗಳಿಂದ ಯಾವುದೇ ಕೆಲಸ ಮಾಡುತ್ತಿರಲಿಲ್ಲ.ಮಂಜುನಾಥನಗರದಲ್ಲಿ ಮನೆ ಲೀಜ್ಗೆ ಹಾಕಿಸಿಕೊಂಡು ದಂಪತಿ ವಾಸವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆಯಾಗಿದೆ. ಅವರು ಬೇರೆ ಕಡೆ ನೆಲೆಸಿದ್ದು, ಆಗಾಗ್ಗೆ ಅಪ್ಪ-ಅಮನನ್ನು ಮಾತನಾಡಿಸಲು ಬರುತ್ತಿದ್ದರು.
ಈ ನಡುವೆ ದಂಪತಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು. ಬಿಪಿ,ಶುಗರ್ನಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಇವರ ಕಷ್ಟ-ಸುಖವನ್ನು ಹೆಣ್ಣು ಮಕ್ಕಳೇ ನೋಡಿಕೊಳ್ಳುತ್ತಿದ್ದರು. ಆದರೆ ದಂಪತಿ ಯಾವ ಕಾರಣಕ್ಕೆ ಸಾಯುವ ನಿರ್ಧಾರ ತೆಗೆದುಕೊಂಡರೋ ಗೊತ್ತಿಲ್ಲ. ಗಟ್ಟಿ ಮನಸ್ಸು ಮಾಡಿ ರಾತ್ರಿ ತಂಪು ಪಾನೀಯದೊಳಗೆ ಯಾವುದೋ ಕ್ರಿಮಿನಾಶಕ ಔಷಧಿ ಬೆರೆಸಿ ಇಬ್ಬರೂ ಸೇವಿಸಿ ಮಲಗಿದ್ದಾರೆ.
ಇಂದು ಬೆಳಗ್ಗೆ ಎಂದಿನಂತೆ ಮಗಳು ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಹಲವು ಭಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಗಾಬರಿಗೊಂಡು ಮಗಳು ಮನೆ ಬಳಿ ಹೋಗಿ ನೋಡಿದಾಗ ಅಪ್ಪ- ಅಮ್ಮ ಆತಹತ್ಯೆ ಮಾಡಿಕೊಂಡಿರುವುದು ಕಂಡು ಕಣ್ಣೀರು ಹಾಕಿದ್ದಾರೆ.
ಹಲವು ದಶಕಗಳ ಕಾಲ ಒಟ್ಟಿಗೆ ಬದುಕಿದ್ದ ಈ ದಂಪತಿ ಒಟ್ಟಾಗಿ ಸಾವನ್ನಪ್ಪಿರುವುದು ದುರ್ದೈವ. ಸುದ್ದಿ ತಿಳಿದು ಬಸವೇಶ್ವರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
