ಬೆಂಗಳೂರು, ಜು.23– ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ನಡುವೆಯೇ ಎರಡು ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆ ಹಾಗೂ ವಿಧಾನಸಭಾಧ್ಯಕ್ಷರ ಆಯ್ಕೆ ಬಗ್ಗೆ ಕೂಡ ಚರ್ಚೆಗಳು ಶುರುವಾಗಿವೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಮೊದಲ ಬಾರಿ ಸಂಪುಟ ವಿಸ್ತರಣೆ ಕುರಿತು ದೆಹಲಿಗೆ ಭೇಟಿ ನೀಡಿದ ವೇಳೆಯಲ್ಲೇ ನೂತನ ಸಚಿವರ ಆಯ್ಕೆ ಹಾಗೂ ವಿಧಾನಸಭಾಧ್ಯಕ್ಷರ ಕುರಿತು ಚರ್ಚಿಸಲಾಗಿತ್ತು ಎಂದು ಹೇಳಲಾಗಿದೆ.
ಕಾಂಗ್ರೆಸ್‌ನಲ್ಲಿ ಅತ್ಯಂತ ಹಿರಿಯ ಶಾಸಕರಾಗಿರುವ ಆರ್.ವಿ.ದೇಶಪಾಂಡೆ ಅವರನ್ನು ವಿಧಾನ ಸಭಾಧ್ಯಕ್ಷರನ್ನಾಗಲು ಮನವಿ ಮಾಡಲಾಗಿತ್ತು. ಆದರೆ 9 ಬಾರಿ ಗೆಲುವು ಕಂಡಿರುವ ತಾವು ಈ ಬಾರಿ ಸಚಿವರಾಗಲೇ ಬೇಕೆಂದು ದೇಶಪಾಂಡೆ ಪಟ್ಟು ಹಿಡಿದಿದ್ದಾರೆ. ಜೊತೆಗೆ ವಿಧಾನ ಸಭಾಧ್ಯಕ್ಷರಾಗಲು ನಿರಾಕರಿಸಿದ್ದಾರೆ. ಅವರ ಬಳಿಕ ದಿನೇಶ್ ಗುಂಡೂರಾವ್ ಅವರ ಹೆಸರನ್ನು ವಿಧಾನ ಸಭಾಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದೆ. ಇದು ಚರ್ಚೆಯ ಹಂತದಲ್ಲಿದೆ. ದಿನೇಶ್ ಗುಂಡೂರಾವ್ ಕೂಡ ವಿಧಾನ ಸಭಾಧ್ಯಕ್ಷರಾಗಲು ಒಲ್ಲೆ ಎನ್ನುತ್ತಿದ್ದಾರೆ ಎಂಬ ಅಭಿಪ್ರಾಯಗಳಿವೆ.
ಉಳಿದಂತೆ ಹಿರಿಯರಾದ ಎಚ್.ಕೆ.ಪಾಟೀಲ್ ಅವರನ್ನು ಒಪ್ಪಿಸಲು ಕಾಂಗ್ರೆಸ್ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಯಲಬುರ್ಗದ ಶಾಸಕ ಬಸವರಾಜ ರಾಯರೆಡ್ಡಿ, ಶಿರಾ ಕ್ಷೇತ್ರದ ಟಿ.ಬಿ.ಜಯಚಂದ್ರ, ಮಧುಗಿರಿ ಕ್ಷೇತ್ರದ ಕೆ.ಎನ್.ರಾಜಣ್ಣ, ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಅವರ ಹೆಸರುಗಳ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಚರ್ಚೆಯಲ್ಲಿವೆ.
ಬಹುತೇಕ ಎಚ್.ಕೆ.ಪಾಟೀಲ್ ಅವರನ್ನು ಒಪ್ಪಿಸುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರ ಹುದ್ದೆಗೆ ವಿಜಯಾನಂದ ಕಾಶಪ್ಪನವರ್, ಎನ್.ಎಚ್.ಕೋನರೆಡ್ಡಿ, ಪ್ರಕಾಶ್ ಕೋಳಿವಾಡ, ಎನ್.ಟಿ.ಶ್ರೀನಿವಾಸ್, ಬಸವರಾಜ್ ಶಿವಗಂಗ, ಎಚ್.ಡಿ.ರಂಗನಾಥ್, ರಿಜ್ವಾನ್ ಅರ್ಷದ್‌ಅವರ ಹೆಸರುಗಳು ಚರ್ಚೆಯಲ್ಲಿವೆ.
ಸಂಪುಟ ವಿಸ್ತರಣೆಗೆ ಎರಡು, ಮೂರು ಬಾರಿ ಮುಹೂರ್ತ ಮುಂದೂಡಿಕೆಯಾಗಿದೆ. ಬಹುತೇಕ ವಾರಾಂತ್ಯದಲ್ಲಿ ಹೈಕಮಾಂಡ್ ನಾಯಕರು ಬುಲಾವ್ ನೀಡಬಹುದು, ದೆಹಲಿಯಲ್ಲಿ ನಡೆಯುವ ಚರ್ಚೆಯ ವೇಳೆ ಸಚಿವರ ಜೊತೆಗೆ ವಿಧಾನಸಭಾಧ್ಯಕ್ಷರ ನೇಮಕಾತಿಯೂ
ಆಖೈರುಗೊಳ್ಳುವ ಸಾಧ್ಯತೆ ಇದೆ.
ಹಿಂದಿನ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದಾರೆ. ಅವರಿಂದ ತೆರವಾಗಿದ್ದ ಸ್ಥಾನ ಖಾಲಿಯಿದೆ. ವಿಧಾನಸಭೆಯ ಉಪಾಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
ಈ ನಡುವೆ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತು ವ್ಯಾಪಕ ಚರ್ಚೆಗಳಾಗುತ್ತಿವೆ. ಪರಿಶಿಷ್ಟ ಪಂಗಡದಿಂದ ಸತೀಶ್ ಜಾರಕಿಹೊಳಿ, ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್ ಮತ್ತು ಈಶ್ವರ್ ಖಂಡ್ರೆ ಪ್ರಬಲ ರೇಸ್‌ನಲ್ಲಿದ್ದಾರೆ.
