Homeರಾಷ್ಟ್ರೀಯಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Mallikarjun Kharge attacks PM Modi

ನವದೆಹಲಿ, ಜು.23- ದೇಶದ ಶಿಕ್ಷಣ ವ್ಯವಸ್ಥೆ ನಿಮ್ಮ ಆಡಳಿತದಲ್ಲಿ ಸಂಪೂರ್ಣವಾಗಿ ಕುಸಿದಿದೆ. ಕೇವಲ ಘೋಷಣೆಗಳು ಅಥವಾ ತುಣುಕು ಕ್ರಮಗಳು ಸಾಕಾಗುವುದಿಲ್ಲ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಪ್ರತಿಭಟನೆಯಲ್ಲಿ ತೊಡಗಿದ್ದ ಯುವಕರ ಮೇಲೆ ಲಾಠಿಚಾರ್ಜ್‌, ಪೆಲೆಟ್‌ ಗನ್‌, ಶಾಕ್‌ ಬ್ಯಾಟನ್‌ಗಳ ಬಳಕೆ ಸೇರಿದಂತೆ ಕ್ರೂರ ಕ್ರಮಗಳನ್ನು ಸರ್ಕಾರ ಅನುಸರಿಸಿದೆ ಎಂದು ಆರೋಪಿಸಿದರು. ಇವರು ನಮ್ಮದೇ ಮಕ್ಕಳು ಎಂಬುದನ್ನು ಮರೆತು ಸರ್ಕಾರ ಅಮಾನವೀಯವಾಗಿ ವರ್ತಿಸಿದೆ. ಹವಾನಿಯಂತ್ರಿತ ಕಟ್ಟಡಗಳಿಂದ ಹೊರಬಂದು, ನಿಮ್ಮ ಸರ್ವಾಽಕಾರಿ ಆಡಳಿತದ ವಿರುದ್ಧ ಹೋರಾಡಿ ರಸ್ತೆಯಲ್ಲಿ ರಕ್ತ ಹರಿಸಿದ ಯುವಕರು ಮತ್ತು ಯುವತಿಯರ ಕಣ್ಣಲ್ಲಿ ಒಮ್ಮೆ ನೋಡಿ ಎಂದು ಪ್ರಧಾನಿ ಮೋದಿಗೆ ಖರ್ಗೆ ಸವಾಲು ಹಾಕಿದ್ದಾರೆ.

ಯುವಕರು ಸರ್ಕಾರದ ಮುಂದೆ ಮೂರು ಸರಳ ಬೇಡಿಕೆಗಳನ್ನು ಮಾತ್ರ ಇಟ್ಟಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ತಕ್ಷಣ ವಜಾಗೊಳಿಸಬೇಕು, ಪ್ರತಿಭಟನಾಕಾರರ ವಿರುದ್ಧ ನಡೆದ ದೌರ್ಜನ್ಯ ಮತ್ತು ಶಿಕ್ಷಾತ್ಮಕ ಕ್ರಮಕ್ಕೆ ಸರ್ಕಾರ ಕ್ಷಮೆ ಕೇಳಬೇಕು. ಯುವ ಜನರಿಗೆ ನ್ಯಾಯ ಒದಗಿಸಬೇಕು ಎಂಬುದು ಪ್ರಮುಖ ಆಗ್ರಹಗಳಾಗಿವೆ.

ಆರ್‌ಎಸ್‌ಎಸ್‌ ದೇಶದ ಶಿಕ್ಷಣ ವ್ಯವಸ್ಥೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಆರೋಪಿಸಿರುವ ಖರ್ಗೆ, ಯುವ ನಿರುದ್ಯೋಗ ಪ್ರಮಾಣವು ಅಂಕಿಅಂಶಗಳ ಪ್ರಕಾರ ಶೇ.29ಕ್ಕೆ ಏರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಲಯದಲ್ಲಿ ಉದ್ಯೋಗಗಳ ಕೊರತೆ, ಶಾಶ್ವತ ಸರ್ಕಾರಿ ಉದ್ಯೋಗಗಳು ಅತೀ ಕಡಿಮೆ, ಗುತ್ತಿಗೆ ಆಧಾರಿತ ನೇಮಕಾತಿ ಹೆಚ್ಚುತ್ತಿರುವುದರಿಂದ ಯುವಕರ ಭವಿಷ್ಯ ಕತ್ತಲೆಯಲ್ಲಿದೆ ಎಂದು ಅವರು ಆರೋಪಿಸಿದರು. ಭವಿಷ್ಯಕ್ಕಾಗಿ ಹೋರಾಡಲು ಯುವಕರು ಇನ್ನೆಲ್ಲಿ ಹೋಗಬೇಕು? ಎಂದು ಪ್ರಶ್ನಿಸಿರುವ ಖರ್ಗೆ, ಕೇಂದ್ರ ಸರ್ಕಾರ ಯುವಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

Latest News