Homeರಾಷ್ಟ್ರೀಯಉಪವಾಸ ಅಂತ್ಯಗೊಳಿಸಿದ್ದಕ್ಕೆ ಟೀಕೆ : 'ಸರ್ಕಾರದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿಲ್ಲ ಎಂದ ಸೋನಂ

ಉಪವಾಸ ಅಂತ್ಯಗೊಳಿಸಿದ್ದಕ್ಕೆ ಟೀಕೆ : ‘ಸರ್ಕಾರದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿಲ್ಲ ಎಂದ ಸೋನಂ

Sonam Wangchuk slams critics, explains ending hunger strike

ನವದೆಹಲಿ,ಜು.25- ಲಡಾಖ್‌‍ನ ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್‌‍ ಅವರು ಇತ್ತೀಚೆಗೆ ನಡೆಸಿದ ಸುದೀರ್ಘ ಉಪವಾಸ ಸತ್ಯಾಗ್ರಹ ಮತ್ತು ಅದರ ಅಂತ್ಯದ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿವೆ. 26 ದಿನಗಳ ಕಾಲ ಕಠಿಣ ಉಪವಾಸ ಸತ್ಯಾಗ್ರಹ ಕೈಗೊಂಡು, ಸರ್ಕಾರದೊಂದಿಗೆ ಯಾವುದೇ ರಹಸ್ಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನೀಟ್‌‍ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಹಾಗೂ ಲಡಾಖ್‌‍ಗೆ ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೇದದಡಿ ರಕ್ಷಣೆ ಕೋರಿ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ದೆಹಲಿಯಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದರು. ಈ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸೋನಂ ವಾಂಗ್ಚುಕ್‌‍ ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ಹಮಿಕೊಂಡಿದ್ದರು.

ಬಿಸಿಲು ಹಾಗೂ ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ 26 ದಿನಗಳ ಕಾಲ ಅವರು ನಡೆಸಿದ ಈ ಅಹಿಂಸಾತಕ ಹೋರಾಟ ದೇಶಾದ್ಯಂತ ವ್ಯಾಪಕ ಗಮನ ಸೆಳೆದಿತ್ತು.ವಾಂಗ್ಚುಕ್‌‍ ಅವರು ತಮ ಉಪವಾಸವನ್ನು ಹಠಾತ್ತನೆ ಅಂತ್ಯಗೊಳಿಸಿದ ಬಳಿಕ, ವಿರೋಧ ಪಕ್ಷಗಳ ಮುಖಂಡರಿಂದ ತೀವ್ರ ಟೀಕೆಗಳು ಕೇಳಿಬಂದವು.

ಕಾಂಗ್ರೆಸ್‌‍ ಸಂಸದ ಇಮ್ರಾನ್‌‍ ಮಸೂದ್‌‍ ಅವರು ವಾಂಗ್ಚುಕ್‌‍ ಅವರನ್ನು ಅಣ್ಣಾ ಹಜಾರೆ ಭಾಗ-2 ಎಂದು ವ್ಯಂಗ್ಯವಾಡಿದ್ದರು. ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿರಲಿಲ್ಲ, ಬದಲಿಗೆ ಲಡಾಖ್‌‍ನ ಕೆಲವೇ ಕೆಲವು ಪ್ರತಿನಿಧಿಗಳು ಮಾತ್ರ ಉಪಸ್ಥಿತರಿದ್ದರು.

ಇದು ಸರ್ಕಾರದೊಂದಿಗೆ ಮಾಡಿಕೊಂಡ ವೈಯಕ್ತಿಕ ಒಪ್ಪಂದ ಹೊರತುಪಡಿಸಿ ಬೇರೇನೂ ಅಲ್ಲ ಎಂದು ಮಸೂದ್‌‍ ಗಂಭೀರ ಆರೋಪ ಮಾಡಿದ್ದರು. ಸೋನಂ ವಾಂಗ್ಚುಕ್‌‍ ತಿರುಗೇಟು ನೀಡಿ ತಮ ಮೇಲಿನ ಆರೋಪಗಳನ್ನು ತಳ್ಳಿಹಾಕಿ ಸಾಮಾಜಿಕ ಜಾಲತಾಣ ಎಕ್ಸ್‌ಮೂಲಕ ವಿಡಿಯೊ ಸಂದೇಶ ಬಿಡುಗಡೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

26 ದಿನಗಳ ಉಪವಾಸ ಸತ್ಯವೆಂದು ಸಾಬೀತುಪಡಿಸಲು ನನಗೆ ಚಾರಿತ್ರ್ಯ ಪ್ರಮಾಣಪತ್ರ ಬೇಕೇ? ಎಂದು ಪ್ರಶ್ನಿಸಿದ ಅವರು, ತನ್ನ ಪ್ರಾಮಾಣಿಕತೆಯನ್ನು ಪದೇ ಪದೇ ಸಾಬೀತುಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು. ಒಪ್ಪಂದವೇ ಮಾಡಿಕೊಳ್ಳುವುದಾಗಿದ್ದರೆ, ದೆಹಲಿಯ ಸುಡುಬಿಸಿಲಿನಲ್ಲಿ ರಸ್ತೆ ಬದಿಯಲ್ಲಿ 26 ದಿನಗಳ ಕಾಲ ಕುಳಿತುಕೊಳ್ಳುವ ಅಗತ್ಯವಿರಲಿಲ್ಲ. ಯಾರಾದರೂ ಒಪ್ಪಂದ ಮಾಡಿಕೊಳ್ಳಬೇಕಿದ್ದರೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಂಡೇ ಮಾಡಬಹುದಿತ್ತು ಎಂದು ತಿರುಗೇಟು ನೀಡಿದ್ದಾರೆ.

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಜನಪರ ಹೋರಾಟಗಳು ಮತ್ತು ಸತ್ಯಾಗ್ರಹಗಳು ಸರ್ಕಾರದೊಂದಿಗೆ ರಾಜಿ ಮಾಡಿಕೊಳ್ಳುತ್ತವೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಸಹಜವಾಗಿ ಮೂಡುವುದುಂಟು. ಹಿಂದೆ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿಯ ಸಂದರ್ಭದಲ್ಲೂ ಇದೇ ರೀತಿಯ ಟೀಕೆಗಳು ಕೇಳಿಬಂದಿದ್ದವು.

ಅದೇ ಮಾದರಿಯಲ್ಲಿ ಈಗ ಸೋನಂ ವಾಂಗ್ಚುಕ್‌‍ ಅವರ ಹೋರಾಟದ ಅಂತ್ಯದ ಬಗ್ಗೆಯೂ ರಾಜಕೀಯ ನಾಯಕರಿಂದ ಅಪಸ್ವರಗಳು ಕೇಳಿಬಂದಿದ್ದು, ಹೋರಾಟದ ನೈತಿಕತೆ ಹಾಗೂ ಸರ್ಕಾರದೊಂದಿಗಿನ ತೆರೆಮರೆಯ ಮಾತುಕತೆಗಳ ಬಗ್ಗೆ ಚರ್ಚೆಗಳು ಮುಂದುವರಿದಿವೆ.

RELATED ARTICLES

Latest News