ಬೆಂಗಳೂರು, ಜು.26- ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ತಾವು ಬೇಡಿಕೆ ಇಟ್ಟಿಲ್ಲ, ಹೈಕಮಾಂಡ್ ಮಟ್ಟದಲ್ಲಿ ಆ ಚರ್ಚೆಯ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಇನ್ನೊಂದು ಎರಡು, ಮೂರು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ಆ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕೆಂದು ತಾವು ಮನವಿ ಮಾಡಿದ್ದೇನೆ. ಆದರೆ ಸಚಿವರಾಗುವ ಪೈಪೋಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನ ಇರುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಸಿಗುವುದು ಅಗತ್ಯ ಇದೆ ಎಂದರು.
ಇಡೀ ದೇಶದಲ್ಲೇ ಬರದ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳನ್ನು ಘೋಷಿಸುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆ. ಮಾನದಂಡಗಳ ಅನುಸಾರ ಅಗಸ್ಟ್‌ವರೆಗೂ ಬರ ಪೀಡಿತ ತಾಲ್ಲೂಕುಗಳನ್ನು ಗುರುತಿಸಲಾಗುವುದಿಲ್ಲ. ಆದರೆ ಅನಂತರ ನಷ್ಟ ಅಂದಾಜು ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಈಗಾಗಲೇ ಮೊದಲ ಸಲ ಮಾಡಿದ ಬಿತ್ತನೆ ಬೆಳೆ ಒಣಗಿ ಹೋಗಿದೆ. ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಮೊತ್ತವೂ ದೊರೆಯುತ್ತಿಲ್ಲ. ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದರು.
ದೆಹಲಿಯಲ್ಲಿ 47ದಿನ ವಿದ್ಯಾರ್ಥಿಗಳು ನಿರಂತರವಾಗಿ ಪ್ರತಿಭಟನೆ ನಡೆಸಲು ನೀಟ್ ಹಗರಣದಿಂದಾಗಿ 20 ಮಕ್ಕಳು ಜೀವ ಕಳೆದುಕೊಂಡರು. ಮಾನಸಿಕ ಒತ್ತಡದಿಂದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದರು. ಇದು ನಾಚಿಕೆ ಪಡುವ ವಿಚಾರ. ಪ್ರಧಾನಿಯವರು ಹಗರಣ ಬೆಳಕಿಗೆ ಬಂದ 24 ಗಂಟೆಯ ಒಳಗಾಗಿ ಸಚಿವರ ರಾಜೀನಾಮೆ ಪಡೆಯಬೇಕಿತ್ತು. ಆದರೆ ಪ್ರತಿಭಟನೆ ತೀವ್ರವಾದ ಬಳಿಕ ಅನಿವಾರ್ಯವಾಗಿ ಸಚಿವರಿಂದ ರಾಜೀನಾಮೆ ಪಡೆದಿದ್ದಾರೆ. ಇದು ತೀರ ತಡವಾಗಿದೆ ಎಂದರು.
ಒಳ್ಳೆಯ ದಿನ ಬರುತ್ತದೆ ಎಂದು ನಂಬಿಸಿ ಮಾಡಿದ ವಂಚನೆಗಳಿಗೆ ಜನ ಇನ್ನು ಕಿವಿಗೊಡುವುದಿಲ್ಲ. ಮೋದಿಯ ಯುಗ ಅಂತ್ಯವಾಗುತ್ತಾ ಬರುತ್ತಿದೆ. ದೇಶದಲ್ಲಿ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಎಲ್ಲವುಗಳಿಂದಲೂ ಜನ ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು. ಧರ್ಮೇಂದ್ರ ಪ್ರಧಾನ್ ಬಳಿಕ ಎಥೆನಾಲ್ ನೀತಿಯ ಹಗರಣದ ವಿರುದ್ಧ ಹೋರಾಟ ನಡೆಯಲಿದೆ. ಇ-20ಯ ಕುರಿತು ವೈಜ್ಞಾನಿಕ ಪರೀಕ್ಷೆ ನಡೆದಿಲ್ಲ, ಜನರ ವಿಶ್ವಾಸ ಪಡೆದಿಲ್ಲ, ಬೇರೆ ಬೇರೆ ದೇಶಗಳಲ್ಲಾದ ನೀತಿಗಳ ಅಧ್ಯಯನ ಮಾಡಿಲ್ಲ. ಎಥೆನಾಲ್ ಮಿಶ್ರಣದಿಂದ ವಾಹನದ ಎಂಜಿನ್ ಮೇಲಾಗುವ ಪರಿಣಾಮ ಯಾವುದನ್ನು ಪರಿಶೀಲನೆ ಮಾಡದೇ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಜೆಪಿ ಆಡಳಿತವೇ ಈ ರೀತಿ ಅದ್ವಾನದಿಂದ ಕೂಡಿದೆ ಎಂದರು.
ಮನಮೋಹನ್ ಸಿಂಗ್ ಸೇರಿದಂತೆ ಎಲ್ಲರ ಆಡಳಿತದಲ್ಲೂ ದೇಶದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಯಲ್ಲಿ ದಕ್ಷತೆ ಇತ್ತು. ಈಗ ಮೋದಿಯವರ ಸರ್ಕಾರ ಎಲ್ಲವನ್ನೂ ಹಾಳು ಮಾಡಿದೆ ಎಂದು ಆರೋಪಿಸಿದರು.
No demand for DCM post MB Patil
