ಬೆಂಗಳೂರು,ಜು.27- ಬಿಡದಿಯ ಉಪನಗರ ಯೋಜನೆ ವಿರೋಧಿಸಿ ಪ್ರತಿಭಟನೆ ಮಾಡಿದ್ದ 11 ರೈತರು ಹಾಗೂ ನಿವಾಸಿಗಳಿಗೆ ರಾಮನಗರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ನಮ್ಮ ಕಾನೂನು ಹೋರಾಟಕ್ಕೆ ಸಿಕ್ಕ ದೊಡ್ಡ ಜಯ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬಿಡದಿಯ ರಾಜಕೀಯ ಪ್ರೇರಿತ ಸುಳ್ಳು ಎಫ್‌ಐಆರ್ ಪ್ರಕರಣದಲ್ಲಿ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ಸತ್ಯಕ್ಕೆ ಸಂದ ಜಯವಾಗಿದೆ ಎಂದಿದ್ದಾರೆ.
ತಮ ಭೂಮಿ ಮತ್ತು ಜೀವನೋಪಾಯಕ್ಕಾಗಿ ಧ್ವನಿ ಎತ್ತುವವರನ್ನು ಅಧಿಕಾರ ಬಲದಿಂದ ಹತ್ತಿಕ್ಕಲು ಸಾಧ್ಯವಿಲ್ಲ. ವಕೀಲ ಪ್ರದೀಪ್ ಅವರ ನೇತೃತ್ವದ ನಮ ವಕೀಲರ ತಂಡವು ಕಾನೂನು ಹೋರಾಟವನ್ನು ಮುಂದುವರೆಸಲಿದೆ. ಇಲ್ಲಿಗೆ ಕಾನೂನು ಸಮರ ಮುಗಿಯುವುದಿಲ್ಲ ಎಂದು ಹೇಳಿದ್ದಾರೆ.
ರೈತರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೂ ನಮ ಹೋರಾಟ ಮುಂದುವರೆಯಲಿದೆ. ಬಿಡದಿ ಜನರ ಪರವಾಗಿ ನಾವು ನೆಲದಲ್ಲೂ ನಿಂತಿದ್ದೇವೆ, ನ್ಯಾಯಾಲಯದಲ್ಲೂ ನಿಂತಿದ್ದೇವೆ. ಸಂಪೂರ್ಣ ನ್ಯಾಯ ಸಿಗುವವರೆಗೂ ಅವರ ಪರವಾಗಿ ಹೋರಾಡಲಿದ್ದೇವೆ ಎಂದಿದ್ದಾರೆ.
