Homeರಾಜ್ಯಪೊಲೀಸರ ವಿಚಾರಣೆಗೆ ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು : ಹರಿಪ್ರಸಾದ್‌

ಪೊಲೀಸರ ವಿಚಾರಣೆಗೆ ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು : ಹರಿಪ್ರಸಾದ್‌

Case should be registered against those who obstructed police investigation: Hariprasad

ಬೆಂಗಳೂರು, ಜು.27- ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಸೇರಿದಂತೆ ಯಾವುದೇ ನಾಯಕರು ಪೊಲೀಸರ ವಿಚಾರಣೆಗೆ ಅಡ್ಡಿ ಪಡಿಸಿದರೆ ಅಂತಹವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಇಲ್ಲದೇ ಹೋದರೆ ಪೊಲೀಸರ ವಿರುದ್ದ ತಾವು ಹೋರಾಟ ಮಾಡುವುದಾಗಿ ಬಿ.ಕೆ.ಹರಿಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈದ್ಧಾಂತಿಕ ನಿಲುವುಗಳಿಗೆ ಬದ್ಧರಾಗಿದ್ದರೆ, ಪ್ರಕರಣಗಳಿಗೆ ಹೆದರಿ ಹಿಂದೇಟು ಹಾಕಬಾರದು, ಪೊಲೀಸರ ವಿಚಾರಣೆ ಸೇರಿದಂತೆ ಯಾವುದೇ ಕ್ರಮಗಳನ್ನಾದರೂ ಎದುರಿಸಿ ನಿಲ್ಲಬೇಕು ಎಂದರು.

ಸಿ.ಟಿ.ರವಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಹೆದರಿದ್ದಾರೆ. ಕೇಂದ್ರದಲ್ಲಿ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಯ ಬಳಿಕ ಬಿಜೆಪಿಯವರಿಗೆ ಭಯ ಬಂದಿದೆ. ಎಫ್‌ಐಆರ್‌ ಆಧರಿಸಿ ಕ್ರಮ ಕೈಗೊಳ್ಳಲು ಹೋದಾಗ ಗುಂಪು ಸೇರಿ ಅಡ್ಡಿ ಪಡಿಸಿದರೆ, ಅದಕ್ಕೂ ಒಂದು ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.

ಪೊಲೀಸರು ಸೇರಿದಂತೆ ಸರ್ಕಾರದ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಅಡ್ಡಿ ಪಡಿಸುವುದು ಕಾನೂನು ಪ್ರಕಾರ ಅಪರಾಧ. ಈ ವಿಚಾರದಲ್ಲಿ ಮೃದುಧೋರಣೆಯನ್ನು ಅನುಸರಿಸಿದರೆ ಪೊಲೀಸರು ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪೊಲೀಸರ ವಿರುದ್ಧ ನಾನೇ ಹೋರಾಟ ನಡೆಸುತ್ತೇನೆ ಎಂದರು.

ಇದು ಭಾರತ. ಗುಂಪು ಸೇರಿಸಿ ಗಲಾಟೆ ಮಾಡಿ ತಪ್ಪಿಸಿಕೊಳ್ಳಲು ಇದು ಆಫ್ರಿಕಾ ಅಥವಾ ಉತ್ತರ ಕೊರಿಯಾ ಅಲ್ಲ. ಅಯೋಧ್ಯೆ ವಿಚಾರವಾಗಿ ಈಗಲೂ ಅಡ್ವಾಣಿ, ಮುರಳಿ ಮನೋಹರ್‌ ಜೋಷಿ, ಉಮಾ ಭಾರತಿ ಅವರ ವಿರುದ್ಧ ಪ್ರಕರಣ ಬಾಕಿ ಇವೆ. ಸೈದ್ಧಾಂತಿಕವಾಗಿ ಗಟ್ಟಿತನವಿದ್ದರೆ ಎಫ್‌ಐಆರ್‌ಗಳನ್ನು ಎದುರಿಸಲು ಸಿದ್ಧರಾಗುತ್ತಾರೆ ಎಂದರು.

ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಸೃಷ್ಟಿಸುವ ಜನ. ಅವರು ಸಂವಿಧಾನಕ್ಕಿಂತಲೂ ಮೇಲಿನವರೇನೂ ಅಲ್ಲ. ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಎಂದರು. ಬಿಜೆಪಿಯವರಿಗೆ ಮುಸ್ಲಿಂ, ಮಾಂಗಲ್ಯ, ಹಿಜಾಬ್‌ನಂತಹ ವಿಚಾರಗಳನ್ನು ಬಿಟ್ಟರೆ ಬೇರೆ ಗತಿಯಿಲ್ಲ. ರಾಜ್ಯ ದೇಶದ ಅಭಿವೃದ್ಧಿಯ ವಿಚಾರಗಳ ಬಗ್ಗೆ ಅವರಿಗೆ ತಿಳಿವಳಿಕೆ ಇಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆಯ ಕುರಿತು ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲದ ರಾಜಕಾರಣದಿಂದ ನಿವೃತ್ತರಾಗುವುದಾಗಿ ಹೇಳಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ಅವರು ಮುಂದುವರೆಯುತ್ತಾರೆ. ರಾಜಕೀಯ ನಿವೃತ್ತಿಗೆ ಅವರು ನೀಡಿರುವ ಕಾರಣಗಳು ಚರ್ಚೆಯಾಗಬೇಕು. ಪ್ರಸ್ತುತ ದಿನಗಳಲ್ಲಿ ತೋಳ್ಬಲ, ಹಣಬಲವೇ ಬಹುಮುಖ್ಯ ಎಂಬಂತಹ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

Latest News