ಬೆಂಗಳೂರು, ಜು.27- ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ.ಕೇಂದ್ರದಿಂದ ಹೆಚ್ಚಿನ ನೆರವು ಕೊಡಿಸಲು ರಾಜ್ಯವನ್ನು ಪ್ರತಿನಿಧಿಸುವ ಸಂಸದರಲ್ಲಿ ಮನವಿ ಮಾಡುವುದಾಗಿ ಉಪ ಮುಖ್ಯಮಂತ್ರಿಗಳು, ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಚರ್ಚಿಸಲು ಮುಖ್ಯಮಂತ್ರಿಗಳು ಇಂದು ಸಂಜೆ 6 ಗಂಟೆಗೆ ದೆಹಲಿಯಲ್ಲಿ ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರನ್ನು ಸಭೆ ಕರೆದಿದ್ದಾರೆ ಎಂದರು.
ಬರ ಪರಿಸ್ಥಿತಿಯ ಸಮರ್ಥ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರವು ಈಗಾಗಲೇ ಅನೇಕ ಚರ್ಚೆಗಳನ್ನು ಮಾಡಿದೆ. ಈ ಮಧ್ಯೆ ಪ್ರಧಾನಮಂತ್ರಿಗಳು, ಗೃಹ ಸಚಿವರು ಮತ್ತು ಕೃಷಿ ಸಚಿವರಿಗೆ ನಾನು ಪತ್ರವನ್ನು ಬರೆದಿದ್ದೇನೆ. ಮುಖ್ಯಮಂತ್ರಿಗಳು ಕೂಡ ಪ್ರಧಾನಿಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ರಾಜ್ಯದ ಅನೇಕ ಯೋಜನೆಗಳ ಬಗ್ಗೆಯೂ ಪ್ರಸ್ತಾವನೆಗಳು ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಅದರ ಬಗ್ಗೆಯೂ ನಮ ರಾಜ್ಯದ ಪ್ರತಿನಿಧಿಗಳಲ್ಲಿ ಚರ್ಚೆ ಮಾಡಿ, ಸಂಬಂಧಪಟ್ಟ ಸಚಿವರುಗಳಲ್ಲಿ ಮಾತನಾಡಿ ಮಂಜೂರು ಮಾಡಿಸಿಕೊಡಲು ಪ್ರಯತ್ನಿಸುವ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮಾಹಿತಿ ನೀಡಿದರು.
ನಾನು ಮತ್ತು ಮುಖ್ಯಮಂತ್ರಿಗಳು ಈಗಾಗಲೇ ನಮ ರಾಜ್ಯದಿಂದ ಹೋಗಿರುವ ಅಧಿಕಾರಗಳನ್ನು ದೆಹಲಿಯಲ್ಲಿ ಭೇಟಿಯಾಗಿ ಸಭೆ ನಡೆಸಿ ಚರ್ಚಿಸಿದ್ದೇವೆ. ಅವಶ್ಯ ಬಿದ್ದಲ್ಲಿ ಅವರ ಸಹಾಯವನ್ನು ಪಡೆದುಕೊಳ್ಳುತ್ತೇವೆ ಎಂದರು.
ಇದರ ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಅನುಮತಿ ಸಿಕ್ಕಿದರೆ ಸಚಿವ ಸಂಪುಟ ವಿಸ್ತರಣೆಯಾಗಬಹುದು ಎಂದು ಈ ವೇಳೆ ತಿಳಿಸಿದರು. ಸಂಸತ್ತಿನಲ್ಲಿ ಬರದ ಬಗ್ಗೆ ಪ್ರಸ್ತಾಪಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸುತ್ತೀರ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಖಂಡಿತವಾಗಿ ಮನವಿ ಮಾಡುತ್ತೇವೆ.
ಸಂಸತ್ತಿನಲ್ಲಿ ಅಥವಾ ಗೃಹ ಸಚಿವರು ಅಥವಾ ಕೃಷಿ ಸಚಿವರಲ್ಲಿ ಪ್ರತ್ಯೇಕವಾಗಿ ಅವರು ಮಾತನಾಡಬಹುದು. ಒಟ್ಟಾರೆಯಾಗಿ ರಾಜ್ಯಕ್ಕೆ ಸಹಾಯ ಹಸ್ತ ಚಾಚುವಂತೆ ಕೇಂದ್ರಕ್ಕೆ ಪ್ರಸ್ತಾಪ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
