ಬೆಂಗಳೂರು, ಜು.27- ಬರುವ ಆಗಸ್ಟ್ 1ರಿಂದ ವಿವಿಧ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಬೆಲೆಗಳನ್ನು ಹೆಚ್ಚಿಸಲು ಮುಂದಾಗಿದ್ದು, ಜುಲೈ ಅಂತ್ಯದೊಳಗೆ ವಾಹನ ಖರೀದಿ ಮಾಡಿದರೆ ಬೆಲೆ ಏರಿಕೆಯ ಹೆಚ್ಚುವರಿ ಹೊರೆ ತಪ್ಪಿಸಿಕೊಳ್ಳಬಹುದಾಗಿದೆ.
ಹಲವು ಪ್ರಮುಖ ವಾಹನ ತಯಾರಕರು ಉತ್ಪಾದನಾ ವೆಚ್ಚದ ಏರಿಕೆ, ಕಚ್ಚಾ ವಸ್ತುಗಳ ದುಬಾರಿ, ಹೊಸ ಸುರಕ್ಷತಾ ಮಾನದಂಡಗಳು ಹಾಗೂ ಮಾಲಿನ್ಯ ನಿಯಂತ್ರಣ ನಿಯಮಗಳಿಂದ ವಾಹನಗಳ ಬೆಲೆ ಪರಿಷ್ಕರಣೆ ಮಾಡುವುದಾಗಿ ಘೋಷಿಸಿವೆ. ಇತರ ವಾಹನ ತಯಾರಕರೂ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ.
ಉಕ್ಕು, ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಚಿಪ್ಗಳು, ಬ್ಯಾಟರಿಗಳು ಮತ್ತು ಬಿಡಿಭಾಗಗಳ ಬೆಲೆ ಏರಿಕೆ, ಜಾಗತಿಕ ಸರಬರಾಜು ಸರಪಳಿಯ ವ್ಯತ್ಯಯ, ಸಾಗಣೆ ವೆಚ್ಚ ಹಾಗೂ ಹಣದುಬ್ಬರದಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಅದರ ಪರಿಣಾಮವನ್ನು ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತಿದೆ.
ಹೊಸ ಕಾರು ಅಥವಾ ವಾಣಿಜ್ಯ ವಾಹನ ಖರೀದಿಸಲು ಯೋಜಿಸಿರುವ ಕುಟುಂಬಗಳಿಗೆ ಈ ಬೆಲೆ ಏರಿಕೆ ಆರ್ಥಿಕ ಹೊರೆ ಹೆಚ್ಚಿಸಲಿದೆ. ಈಗಾಗಲೇ ವಾಹನ ಸಾಲದ ಬಡ್ಡಿ, ವಿಮೆ, ರಸ್ತೆ ತೆರಿಗೆ, ನೋಂದಣಿ ಶುಲ್ಕ, ಟೋಲ್ ಹಾಗೂ ಇಂಧನ ವೆಚ್ಚ ಹೆಚ್ಚಿರುವ ಸಂದರ್ಭದಲ್ಲಿ ವಾಹನಗಳ ದರ ಏರಿಕೆ ಮತ್ತಷ್ಟು ಸಂಕಷ್ಟ ಉಂಟುಮಾಡಲಿದೆ.
ಟ್ರಾವೆಲ್ಸ್ ಉದ್ಯಮಕ್ಕೂ ಸಂಕಷ್ಟ:ಈ ಬೆಳವಣಿಗೆಯಿಂದ ಟ್ಯಾಕ್ಸಿ ಚಾಲಕರು, ಟ್ರಾವೆಲ್ಸ್ ಸಂಸ್ಥೆಗಳು, ಕಾರು ಬಾಡಿಗೆ ಕಂಪನಿಗಳು, ಟೂರ್ ಆಪರೇಟರ್ಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹೊಸ ವಾಹನಗಳ ಖರೀದಿ ವೆಚ್ಚ ಹೆಚ್ಚಾಗುವುದರಿಂದ ವಾಹನಗಳ ನವೀಕರಣ ನಿಧಾನವಾಗಬಹುದು.
ಇದರ ಜೊತೆಗೆ ಈಗಾಗಲೇ ಇಂಧನ ದರ, ಟೋಲ್, ವಿಮೆ, ರಸ್ತೆ ತೆರಿಗೆ, ನಿರ್ವಹಣಾ ವೆಚ್ಚ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಟ್ರಾವೆಲ್್ಸ ಸಂಸ್ಥೆಗಳು ಪ್ರಯಾಣ ದರವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಿಸಬಹುದು. ಇದರ ಹೊರೆ ಅಂತಿಮವಾಗಿ ಪ್ರಯಾಣಿಕರ ಮೇಲೇ ಬೀಳುವ ಸಾಧ್ಯತೆ ಇದೆ.
ಜಾಗತಿಕ ಬೆಳವಣಿಗೆಗಳ ಪರಿಣಾಮ:ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ, ಕಚ್ಚಾ ತೈಲದ ಬೆಲೆ ಏರಿಳಿತ, ರೂಪಾಯಿ ವೌಲ್ಯದ ವ್ಯತ್ಯಾಸ ಹಾಗೂ ಜಾಗತಿಕ ಸಾಗಣೆ ವೆಚ್ಚ ಹೆಚ್ಚಳದಿಂದ ವಾಹನ ಉತ್ಪಾದನಾ ವೆಚ್ಚವೂ ಏರಿಕೆಯಾಗಿದೆ. ಇದೂ ದರ ಪರಿಷ್ಕರಣೆಗೆ ಪ್ರಮುಖ ಕಾರಣವಾಗಿದೆ. ಮತ್ತು 20 ಸವಾಲುದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು ಹಾಗೂ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದರೂ ಬ್ಯಾಟರಿ ವೆಚ್ಚ, ಲಿಥಿಯಂ ಆಮದು ಮತ್ತು ಚಾರ್ಜಿಂಗ್ ಮೂಲಸೌಕರ್ಯದ ಕೊರತೆ ಇನ್ನೂ ಸವಾಲಾಗಿದೆ. ಮತ್ತೊಂದೆಡೆ 20 ಇಂಧನ ಬಳಕೆಗೆ ಹೊಸ ವಾಹನಗಳು ಹೊಂದಿಕೆಯಾಗುತ್ತಿದ್ದರೂ, ಹಳೆಯ ವಾಹನಗಳ ಮಾಲೀಕರಲ್ಲಿ ಹಲವು ಅನುಮಾನಗಳು ಮುಂದುವರಿದಿವೆ.
ಸರ್ಕಾರದಿಂದ ನೆರವಿನ ನಿರೀಕ್ಷೆ:ವಾಹನ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಕೈಗಾರಿಕಾ ನೀತಿಗಳ ಸುಧಾರಣೆ, ದೇಶೀಯ ಬಿಡಿಭಾಗ ಉತ್ಪಾದನೆಗೆ ಉತ್ತೇಜನ, ಚಾರ್ಜಿಂಗ್ ಜಾಲ ವಿಸ್ತರಣೆ, ಸುಲಭ ವಾಹನ ಸಾಲ ಸೌಲಭ್ಯ ಹಾಗೂ ಟ್ಯಾಕ್ಸಿ ಮತ್ತು ಟ್ರಾವೆಲ್ಸ್ ಉದ್ಯಮಕ್ಕೆ ವಿಶೇಷ ಪ್ರೋತ್ಸಾಹ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಆಗಸ್ಟ್ 1ರಿಂದ ಜಾರಿಗೆ ಬರುವ ವಾಹನಗಳ ಬೆಲೆ ಏರಿಕೆಯು ಸಾಮಾನ್ಯ ಗ್ರಾಹಕರು ಮಾತ್ರವಲ್ಲದೆ ಟ್ಯಾಕ್ಸಿ, ಟ್ರಾವೆಲ್ಸ್ ಮತ್ತು ಪ್ರವಾಸೋದ್ಯಮ ವಲಯದ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೊಸ ವಾಹನ ಖರೀದಿಸುವವರು ಜುಲೈ ಅಂತ್ಯದೊಳಗೆ ನಿರ್ಧಾರ ಕೈಗೊಂಡರೆ ಬೆಲೆ ಏರಿಕೆಯ ಹೊರೆಯಿಂದ ತಪ್ಪಿಸಿಕೊಳ್ಳಬಹುದು.
