Homeಅಂತಾರಾಷ್ಟ್ರೀಯಅಮೆರಿಕ ಸೆನೆಟ್‌ನಲ್ಲಿ ರಷ್ಯಾ ನಿರ್ಬಂಧ ಮಸೂದೆ : ಭಾರತ-ಚೀನಾಗೆ ಶೇ.100ರಷ್ಟು ಸುಂಕದ ಭೀತಿ

ಅಮೆರಿಕ ಸೆನೆಟ್‌ನಲ್ಲಿ ರಷ್ಯಾ ನಿರ್ಬಂಧ ಮಸೂದೆ : ಭಾರತ-ಚೀನಾಗೆ ಶೇ.100ರಷ್ಟು ಸುಂಕದ ಭೀತಿ

India, others face 100% tariff threat as US Senate to vote on Russia sanctions

ವಾಷಿಂಗ್ಟನ್‌,ಜು.29- ಉಕ್ರೇನ್‌ ಮೇಲಿನ ಯುದ್ಧವನ್ನು ಮುಂದುವರಿಸಿರುವ ರಷ್ಯಾದ ಆರ್ಥಿಕತೆಯ ಮೇಲೆ ಬಿಗಿಹಿಡಿತ ಸಾಧಿಸಲು ಅಮೆರಿಕ ಸೆನೆಟ್‌ ಮುಂದಾಗಿದೆ. ರಷ್ಯಾ ಮತ್ತು ಇರಾನ್‌ ವಿರುದ್ಧ ಜಾರಿಗೆ ತರಲು ಉದ್ದೇಶಿಸಿರುವ ನೂತನ ಹಾಗೂ ಕಠಿಣ ನಿರ್ಬಂಧಗಳ ಮಸೂದೆಯ ಮೇಲೆ ಯುಎಸ್‌‍ ಸೆನೆಟ್‌ ಪ್ರಮುಖ ಕಾರ್ಯವಿಧಾನದ ಮತದಾನವನ್ನು ಆರಂಭಿಸಲು ಸಜ್ಜಾಗಿದೆ.

ಈ ಮಸೂದೆಯು ಕಾನೂನಾದರೆ, ರಷ್ಯಾದ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿರುವ ಭಾರತ ಮತ್ತು ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ಶೇ.100ರವರೆಗೆ ಆಮದು ಸುಂಕ ವಿಧಿಸುವ ಅಧಿಕಾರ ಅಮೆರಿಕ ಅಧ್ಯಕ್ಷರಿಗೆ ಲಭ್ಯವಾಗಲಿದೆ.
ರಷ್ಯಾದ ತೈಲ ಮತ್ತು ಅನಿಲವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ಶೇ. 100ರವರೆಗೆ ಸುಂಕ ವಿಧಿಸುವ ವಿಶೇಷ ಅಧಿಕಾರವನ್ನು ಈ ಮಸೂದೆಯು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರಿಗೆ ನೀಡುತ್ತದೆ.

ರಷ್ಯಾದ ಇಂಧನದ ಪ್ರಮುಖ ಗ್ರಾಹಕರಾಗಿರುವ ಭಾರತ, ಚೀನಾ, ಜಪಾನ್‌ ಮತ್ತು ಕೆಲವು ಯುರೋಪಿಯನ್‌ ಒಕ್ಕೂಟದ ದೇಶಗಳು ಈ ಶಾಸನದ ಪರಿಧಿಗೆ ಬರಲಿವೆ.
ದಿವಂಗತ ಸೆನೆಟರ್‌ ಲಿಂಡ್ಸೆ ಗ್ರಹಾಂ ಅವರ ಸರಣಾರ್ಥ ಈ ಶಾಸನವನ್ನು ಲಿಂಡ್ಸೆ ಒ. ಗ್ರಹಾಂ ರಷ್ಯಾ ಮತ್ತು ಇರಾನ್‌ ಮೇಲೆ 2026 ರ ನಿರ್ಬಂಧ ಹೇರುವ ಕಾಯ್ದೆ ಎಂದು ಮರುನಾಮಕರಣ ಮಾಡಲಾಗಿದೆ. ರಷ್ಯಾದ ಜತೆಗೆ ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಭಯೋತ್ಪಾದನಾ ಚಟುವಟಿಕೆಗಳನ್ನೂ ಈ ಮಸೂದೆ ಗುರಿಯಾಗಿಸಿದೆ.

2022ರಲ್ಲಿ ಉಕ್ರೇನ್‌ ಯುದ್ಧ ಆರಂಭವಾದಾಗಿನಿಂದ ಜಾಗತಿಕ ಇಂಧನ ಮಾರುಕಟ್ಟೆಯ ಸಮೀಕರಣಗಳು ಸಂಪೂರ್ಣವಾಗಿ ಬದಲಾಗಿವೆ. ಪಾಶ್ಚಿಮಾತ್ಯ ದೇಶಗಳ ಕಠಿಣ ನಿರ್ಬಂಧಗಳ ಹೊರತಾಗಿಯೂ, ಭಾರತವು ರಿಯಾಯಿತಿ ದರದಲ್ಲಿ ಲಭ್ಯವಿರುವ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಖರೀದಿದಾರರಲ್ಲಿ ಒಂದಾಗಿ ಹೊರಹೊಮಿದೆ.ರಷ್ಯಾದಿಂದ ಸಿಕ್ಕ ರಿಯಾಯಿತಿ ದರದ ತೈಲವು ಭಾರತೀಯ ಸಂಸ್ಕರಣಾಗಾರಗಳಿಗೆ ಇಂಧನ ಪೂರೈಕೆಯನ್ನು ಸುಸ್ಥಿರವಾಗಿಡಲು ಮತ್ತು ಸಂಸ್ಕರಣಾ ಲಾಭವನ್ನು ಹೆಚ್ಚಿಸಲು ಬಹಳಷ್ಟು ನೆರವಾಗಿದೆ.

ಒಂದು ವೇಳೆ ಈ ಪ್ರಸ್ತಾವಿತ ಮಸೂದೆಯು ಉಭಯ ಸದನಗಳಲ್ಲಿ ಅನುಮೋದನೆಗೊಂಡು ಅಂತಿಮವಾಗಿ ಕಾನೂನಾದರೆ, ಅದು ರಷ್ಯಾದೊಂದಿಗೆ ಭಾರತ ಹೊಂದಿರುವ ಇಂಧನ ವ್ಯಾಪಾರವನ್ನು ಸಂಕೀರ್ಣಗೊಳಿಸಬಹುದು. ಅಲ್ಲದೆ, ನವದೆಹಲಿ ಮತ್ತು ವಾಷಿಂಗ್ಟನ್‌ ನಡುವಿನ ದ್ವಿಪಕ್ಷೀಯ ವ್ಯಾಪಾರ ಚರ್ಚೆಗಳ ಮೇಲೂ ಇದು ಪರಿಣಾಮ ಬೀರಬಹುದು.ಈ ಶಾಸನವು ತಕ್ಷಣವೇ ಜಾರಿಗೆ ಬರುವುದಿಲ್ಲ ಮತ್ತು ಇದು ಕಾನೂನಾಗಲು ಇನ್ನೂ ಹಲವು ಹಂತಗಳನ್ನು ದಾಟಬೇಕಿದೆ.

ಇದು ಸೆನೆಟ್‌ನಲ್ಲಿ ಆರಂಭಿಕ ಹಂತದ ಮತದಾನವಾಗಿದ್ದು, ಟ್ರಂಪ್‌ ಅವರ ಮೇಜು ತಲುಪುವ ಮೊದಲು ಸೆನೆಟ್‌ ಮತ್ತು ಪ್ರತಿನಿಧಿಗಳ ಸಭೆ ಎರಡರಲ್ಲೂ ಅಂಗೀಕಾರಗೊಳ್ಳಬೇಕು.
ಮಸೂದೆ ಪಾಸ್‌‍ ಆದರೂ ಕೂಡ ಸುಂಕಗಳು ಸ್ವಯಂಚಾಲಿತವಾಗಿ ಜಾರಿಗೆ ಬರುವುದಿಲ್ಲ. ಅವುಗಳನ್ನು ಯಾವಾಗ ವಿಧಿಸಬೇಕು ಅಥವಾ ವಿನಾಯಿತಿ ನೀಡಬೇಕು ಎಂಬುದನ್ನು ನಿರ್ಧರಿಸುವ ಸಂಪೂರ್ಣ ವಿವೇಚನಾ ಅಧಿಕಾರ ಅಮೆರಿಕ ಅಧ್ಯಕ್ಷರಿಗೆ ಇರುತ್ತದೆ.

ಈ ಮಸೂದೆಯು ಅಧ್ಯಕ್ಷರಿಗೆ ಅತಿಯಾದ ಸುಂಕದ ಅಧಿಕಾರವನ್ನು ನೀಡುತ್ತದೆ ಮತ್ತು ಇದು ಅಮೆರಿಕದ ಮಿತ್ರರಾಷ್ಟ್ರಗಳ ಜತೆಗೆ ಬಾಂಧವ್ಯ ಹದಗೆಡಿಸುವುದಲ್ಲದೆ, ಅಮೆರಿಕದ ಗ್ರಾಹಕರಿಗೂ ಬೆಲೆ ಏರಿಕೆಯ ಹೊರೆ ಹೊರಿಸಲಿದೆ ಎಂದು ಕೆಲವು ಡೆಮಾಕ್ರಟಿಕ್‌ ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನ ಪ್ರಬಲ ಬೆಂಬಲಿಗರಾಗಿದ್ದ ದಿವಂಗತ ಸೆನೆಟರ್‌ ಲಿಂಡ್ಸೆ ಗ್ರಹಾಂ ಅವರ ಅಂತ್ಯಕ್ರಿಯೆಯ ದಿನದಂದೇ ಈ ಮಹತ್ವದ ಬೆಳವಣಿಗೆ ನಡೆಯುತ್ತಿರುವುದು ವಿಶೇಷ. ಉಕ್ರೇನಿಯನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಅಮೆರಿಕದ ಶಾಸಕರು ಹಾಗೂ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರನ್ನು ಭೇಟಿ ಮಾಡಲು ವಾಷಿಂಗ್ಟನ್‌ನಲ್ಲಿದ್ದಾರೆ. ಇರಾನ್‌ಗೆ ಸಂಬಂಧಿಸಿದ ಕಠಿಣ ಕ್ರಮಗಳನ್ನು ಸೇರಿಸುವ ಷರತ್ತಿನ ಮೇಲೆ ಡೊನಾಲ್‌್ಡ ಟ್ರಂಪ್‌ ಈ ಮಸೂದೆಗೆ ಬೆಂಬಲ ಸೂಚಿಸಿದ್ದರೂ, ಕಾಂಗ್ರೆಸ್‌‍ನಲ್ಲಿ ಇದಕ್ಕೆ ಸಿಗುವ ರಾಜಕೀಯ ಬೆಂಬಲದ ಮೇಲೆಯೇ ಇದರ ಭವಿಷ್ಯಾವಳಿಗಳು ನಿಂತಿವೆ.

RELATED ARTICLES

Latest News