ಯಾಮೆ,ಜುಲೈ 29-ಜಪಾನ್‌ನ ನೈಋತ್ಯ ಭಾಗದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ನಾಪತ್ತೆಯಾದವರಿಗಾಗಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಜಪಾನ್ ಪ್ರಧಾನಿ ಸನಾಏ ಟಕೈಚಿ ತಿಳಿಸಿದ್ದಾರೆ.ನಿನ್ನ ಸಂಜೆ ಜಪಾನ್‌ನ ದಕ್ಷಿಣ ಭಾಗದ ಪ್ರಮುಖ ದ್ವೀಪ ಕ್ಯೂಶುವಿನ ಕುಮಮೊಟೊ ಪ್ರದೇಶದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಇನ್ನೂ ಹಲವರು ರಕ್ಷಣೆಗಾಗಿ ಕಾಯುತ್ತಿದ್ದಾರೆ. ಇದು ಸಮಯದ ವಿರುದ್ಧದ ಹೋರಾಟವಾಗಿದೆ. ಸಾಧ್ಯವಾದಷ್ಟು ಹೆಚ್ಚು ಜನರನ್ನು ಪತ್ತೆಹಚ್ಚಿ ರಕ್ಷಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಟಕೈಚಿ ಹೇಳಿದ್ದಾರೆ.ಮೃತರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದು, ಭೂಕಂಪದಿಂದ ತೊಂದರೆಗೊಳಗಾದ ಜನರು ತೀವ್ರ ಬಿಸಿಲಿನ ನಡುವೆಯೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಜಪಾನ್‌ನ ಸ್ವಯಂ ರಕ್ಷಣಾ ಪಡೆ, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಸೇರಿ ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೆ, ಸಂತ್ರಸ್ತರಿಗೆ ಕುಡಿಯುವ ನೀರು, ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.
ಕುಮಮೊಟೊ ಪ್ರಾಂತ್ಯದ ಕಾಶಿಮಾ ಪಟ್ಟಣದಲ್ಲಿರುವ ಏಯಾನ್ ಮಾಲ್‌ನ ಎರಡನೇ ಮಹಡಿ ಕುಸಿದ ಪರಿಣಾಮ ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಇದೇ ವೇಳೆ, ನಿಪ್ಪಾನ್ ಪೇಪರ್ ಇಂಡಸ್ಟ್ರೀಸ್ ಕಂಪನಿಯ ಯಾತ್ಸುಶಿರೊ ಕಾರ್ಖಾನೆಯ ಚಿಮಣಿ ಕುಸಿದು, ಅದರಡಿ ಹಲವರು ಸಿಲುಕಿರುವುದಾಗಿ ತುರ್ತು ಸೇವಾ ತಂಡಗಳು ತಿಳಿಸಿವೆ.
ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, ಪ್ರಮುಖ ಸಾರ್ವಜನಿಕ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿಲ್ಲ. ಅಲ್ಲದೆ, ಸಮೀಪದ ಮೂರು ಅಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂದು ಅಣು ನಿಯಂತ್ರಣ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ರೈಲು,ವಿಮಾನ ನಿಲ್ದಾಣ ಬಂದ್:
ಜಪಾನ್‌ನ ಕ್ಯೋಡೊ ಸುದ್ದಿ ಸಂಸ್ಥೆಯ ಪ್ರಕಾರ, ಯಾತ್ಸುಶಿರೊ ನಗರದ ಆಸ್ಪತ್ರೆಗೆ ಸುಮಾರು 40 ಗಾಯಾಳುಗಳನ್ನು ದಾಖಲಿಸಲಾಗಿದ್ದು, ಇನ್ನೂ ಸುಮಾರು 50 ಮಂದಿಯನ್ನು ಕುಮಮೊಟೊ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.ರೈಲು ಸಂಚಾರ ವ್ಯತ್ಯಯವಾಗಿದ್ದು ,ಕೆಲವು ವಿಮಾನ ನಿಲ್ದಾಣ ಮುಚ್ಚಲಾಗಿದೆ
