Homeಅಂತಾರಾಷ್ಟ್ರೀಯಪಿಒಕೆನಲ್ಲಿ ಪಾಕ್ ಭದ್ರತಾ ಪಡೆಗಳ ಅಟ್ಟಹಾಸ, 30ಕ್ಕೂ ಹೆಚ್ಚು ಪ್ರತಿಭಟನಾಕಾರ ಹತ್ಯೆ

ಪಿಒಕೆನಲ್ಲಿ ಪಾಕ್ ಭದ್ರತಾ ಪಡೆಗಳ ಅಟ್ಟಹಾಸ, 30ಕ್ಕೂ ಹೆಚ್ಚು ಪ್ರತಿಭಟನಾಕಾರ ಹತ್ಯೆ

PoK unrest: Over 30 civilians killed in brutal crackdown by Pakistani forces

ಇಸ್ಲಾಮಾಬಾದ್‌/ಮುಜಫರಾಬಾದ್‌ಮ ಜು.30- ಪಾಕ್‌ ಆಕ್ರಮಿತ ಕಾಶೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರದ ವಿರುದ್ಧದ ಸಾರ್ವಜನಿಕ ಆಕ್ರೋಶವು ಹಿಂಸಾಸ್ವರೂಪ ಪಡೆದುಕೊಂಡಿದ್ದು, ಸ್ಥಳೀಯ ಅಸೆಂಬ್ಲಿ ಚುನಾವಣೆಯ ಮೊದಲ ಹಂತದ ಮತದಾನದ ಸಂದರ್ಭದಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ 30ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪ್ರದೇಶದಲ್ಲಿ ತೀವ್ರಗೊಂಡಿರುವ ದಮನಕಾರಿ ಕಾರ್ಯಚರಣೆ ಹಾಗೂ ಸಂಘರ್ಷದಿಂದಾಗಿ ಪಿಒಕೆಯಾದ್ಯಂತ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಪಿಒಕೆಯಲ್ಲಿ ವಿವಾದಿತ ಸ್ಥಳೀಯ ಸಂಸ್ಥೆಗಳ ಹಾಗೂ ಶಾಸಕಾಂಗ ಅಸೆಂಬ್ಲಿ ಚುನಾವಣೆಯ ಮೂರು ಹಂತಗಳ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಇದರ ಮೊದಲ ಹಂತದ ಮತದಾನದ ದಿನವಾದ ಜುಲೈ 27 ರಂದು ಮೀರ್ಪುರ್‌, ಕೋಟ್ಲಿ ಮತ್ತು ಭಿಂಬರ್‌ ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಘರ್ಷಣೆಗಳು ನಡೆದಿವೆ.

ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ (ಪಿಎಂಎಲ್‌-ಎನ್‌) ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನಡುವಿನ ರಾಜಕೀಯ ತಿಕ್ಕಾಟ ಹಾಗೂ ಸಶಸ್ತ್ರ ಭದ್ರತಾ ಪಡೆಗಳ ದಮನಕಾರಿ ನೀತಿಯಿಂದಾಗಿ ಪರಿಸ್ಥಿತಿ ಕೈಮೀರಿದೆ. ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷ ಈ ಚುನಾವಣೆಯನ್ನು ಬಹಷ್ಕರಿಸಿದೆ.

ಅಶಾಂತಿಯನ್ನು ಹತ್ತಿಕ್ಕುವ ಹೆಸರಿನಲ್ಲಿ ಪಾಕಿಸ್ತಾನ ಸರ್ಕಾರವು ಜೆಎಎಸಿ ಸಂಘಟನೆಯನ್ನು ಉಗ್ರಗಾಮಿ ಸಂಘಟನೆ ಎಂದು ನಿಷೇಧಿಸಿದೆ. ಅಲ್ಲದೆ, ಪ್ರದೇಶದಲ್ಲಿ ಸಂಪೂರ್ಣ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಹೊರಗಿನ ಜಗತ್ತಿಗೆ ಮಾಹಿತಿ ಸಿಗದಂತೆ ಮಾಡಲಾಗಿದೆ. ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್‌ ಹಾಗೂ ವಿಶೇಷ ಸಲಹೆಗಾರ ರಾಣಾ ಸನಾವುಲ್ಲಾ ಅವರು ಪ್ರತಿಭಟನಾಕಾರರನ್ನು ಶತ್ರುಗಳು ಎಂದು ಜಿಜ್ಞಾಸೆಗೊಳಪಡಿಸಿ, ಉಗ್ರ ಮಟ್ಟದ ಬಲಪ್ರಯೋಗ ಮಾಡುವುದಾಗಿ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.

ಕಳೆದ ಜೂನ್‌ ತಿಂಗಳಿನಿಂದಲೂ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೇತೃತ್ವದಲ್ಲಿ ಪಿಒಕೆಯಲ್ಲಿ ಬೃಹತ್‌ ಪ್ರತಿಭಟನೆಗಳು ಮುಂದುವರಿದಿವೆ. ಜಮು ಮತ್ತು ಕಶ್ಮೀರದಿಂದ ಬಂದು ನೆಲೆಸಿರುವ ನಿರಾಶ್ರಿತರಿಗಾಗಿ ಅಸೆಂಬ್ಲಿಯಲ್ಲಿ ಮೀಸಲಿಡಲಾಗಿರುವ 12 ಸ್ಥಾನಗಳು ಪಾಕಿಸ್ತಾನ ಸರ್ಕಾರದ ರಾಜಕೀಯ ಕುಶಲತೆಗೆ ಬಳಕೆಯಾಗುತ್ತಿವೆ ಎಂಬುದು ಜನರ ಪ್ರಮುಖ ಆರೋಪ.

ಈ ಸ್ಥಾನಗಳನ್ನು ರದ್ದುಗೊಳಿಸಬೇಕೆಂದು ಜೆಎಎಸಿ ಆಗ್ರಹಿಸಿದೆ. ಆರ್ಥಿಕ ಶೋಷಣೆ ಹಾಗೂ ಹಕ್ಕುಗಳ ಉಲ್ಲಂಘನೆ ತೀವ್ರ ಹಣದುಬ್ಬರ, ಮೂಲಭೂತ ಸೌಕರ್ಯಗಳ ಕೊರತೆ, ಆಡಳಿತಾತಕ ನಿರ್ಲಕ್ಷ್ಯ ಹಾಗೂ ಪ್ರಜಾಸತ್ತಾತಕ ಹಕ್ಕುಗಳ ದಮನದ ವಿರುದ್ಧ ಸ್ಥಳೀಯರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ.

ಪಿಒಕೆಯಲ್ಲಿ ನಡೆಯುತ್ತಿರುವ ನರಮೇಧ ಹಾಗೂ ದಮನದ ಕುರಿತು ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಾಕಿಸ್ತಾನವು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಆರ್ಥಿಕ ಶೋಷಣೆ ಹಾಗೂ ಮೂಲಭೂತ ಹಕ್ಕುಗಳ ನಿರಾಕರಣೆಯ ನೇರಫಲವೇ ಇಂದಿನ ಪಿಒಕೆ ಅಶಾಂತಿಯಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ಮತ್ತೊಂದೆಡೆ, ನ್ಯಾಷನಲ್‌ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರು ಮಾತನಾಡಿ, ಪಿಒಕೆಯಲ್ಲಿ ಹದಗೆಡುತ್ತಿರುವ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ವಿಶ್ವಸಂಸ್ಥೆ ಹಾಗೂ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಈ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಆಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

RELATED ARTICLES

Latest News