ಬೆಂಗಳೂರು, ಜು.30- ಕಳೆದ 20 ದಿನಗಳ ಹಿಂದೆ ಆರಂಭಿಸಲಾಗಿರುವ ಫುಟ್ಪಾತ್ ತೆರವು ವಿಶೇಷ ಅಭಿಯಾನದಲ್ಲಿ ಇದುವರೆಗೆ ಒಟ್ಟು 691 ಕಿಲೋಮೀಟರ್ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ.
ನಗರದ ವಿವಿಧ ಭಾಗಗಳಲ್ಲಿ ಫುಟ್ಪಾತ್ಗಳ ಮೇಲೆ ಅಂಗಡಿಗಳು, ತಾತ್ಕಾಲಿಕ ಶೆಡ್ಗಳು, ಮೆಟ್ಟಿಲುಗಳು, ಬೀದಿ ಬದಿ ವ್ಯಾಪಾರ ಹಾಗೂ ಇತರೆ ಅಕ್ರಮ ನಿರ್ಮಾಣಗಳಿಂದ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಈ ಕುರಿತು ಸಾರ್ವಜನಿಕರಿಂದ ಜಿಬಿಎಗೆ ನಿರಂತರ ದೂರುಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಐದು ನಗರಪಾಲಿಕೆ ಆಯುಕ್ತರಿಗೆ ಫುಟ್ಪಾತ್ಗಳ ಮೇಲಿನ ಎಲ್ಲ ರೀತಿಯ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರು.
ಅದರಂತೆ ನಗರಪಾಲಿಕೆಗಳು ಜುಲೈ 10ರಿಂದ ಸಮನ್ವಯದೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸುತ್ತಿವೆ.ಕಾರ್ಯಾಚರಣೆಯಲ್ಲಿ ಅಂಗಡಿಗಳ ಮುಂದೆ ನಿರ್ಮಿಸಲಾಗಿದ್ದ ಮೆಟ್ಟಿಲುಗಳು, ತಾತ್ಕಾಲಿಕ ಶೆಡ್ಗಳು, ಬೀದಿ ಬದಿ ವ್ಯಾಪಾರಿಗಳ ಅಕ್ರಮ ಆಕ್ರಮಣಗಳು ಹಾಗೂ ಕೆಲವೆಡೆ ನಿರ್ಮಿಸಲಾಗಿದ್ದ ಪಿಲ್ಲರ್ಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಗರಪಾಲಿಕೆವಾರು ತೆರವುಗೊಂಡ ಫುಟ್ಪಾತ್ ವಿವರ:
ಬೆಂಗಳೂರು ಉತ್ತರ: 168.55 ಕಿ.ಮೀ, ಬೆಂಗಳೂರು ಪಶ್ಚಿಮ: 161.62 ಕಿ.ಮೀ., ಬೆಂಗಳೂರು ಪೂರ್ವ: 114.95 ಕಿ.ಮೀ., ಬೆಂಗಳೂರು ಕೇಂದ್ರ: 114.10 ಕಿ.ಮೀ ಹಾಗೂ ಬೆಂಗಳೂರು ದಕ್ಷಿಣ: 107.21 ಕಿ.ಮೀ ಮಾರ್ಗಗಳು ಸೇರಿದಂತೆ ಒಟ್ಟು: 691 ಕಿಲೋಮೀಟರ್ ಫುಟ್ಪಾತ್ಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.
ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಅಡೆತಡೆರಹಿತ ಸಂಚಾರ ಕಲ್ಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ಈ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
