Homeರಾಷ್ಟ್ರೀಯಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕುವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ

ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕುವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ,ಆ.1- ದೇಶಾದ್ಯಂತ ಸ್ಪರ್ಧಾತಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ (ಪೇಪರ್‌ ಲೀಕ್‌) ಹಾಗೂ ವ್ಯಾಪಕ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಂದಿರುವ ಸಾರ್ವಜನಿಕ ಪರೀಕ್ಷಾ (ಅನುಚಿತ ಮಾರ್ಗಗಳ ತಡೆ) ತಿದ್ದುಪಡಿ ಕಾಯ್ದೆ-2026 (Public Examinations Prevention of Unfair Means Amendment Act, 2026) ಗೆ ರಾಷ್ಟ್ರಪತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕೃತ ಅಂಕಿತ ಮುದ್ರೆ ಹಾಕಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ಪಡೆದ ಈ ಐತಿಹಾಸಿಕ ಕಾನೂನು ಈಗ ಅಧಿಕೃತವಾಗಿ ಜಾರಿಗೆ ಬಂದಿದ್ದು, ಪರೀಕ್ಷಾ ಮಾಫಿಯಾಗೆ ನಡುಕ ಹುಟ್ಟಿಸಿದೆ. ಪರೀಕ್ಷೆಗಳಲ್ಲಿ ಅಕ್ರಮ ಎಸಗುವ ವ್ಯಕ್ತಿಗಳಿಗೆ ಕನಿಷ್ಠ ಶಿಕ್ಷೆಯನ್ನು 3 ರಿಂದ 5 ವರ್ಷಗಳಿಗೆ ಏರಿಸಲಾಗಿದ್ದು, ಗರಿಷ್ಠ ಶಿಕ್ಷೆಯನ್ನು 10 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ ದಂಡದ ಮೊತ್ತವನ್ನು 50 ಲಕ್ಷದವರೆಗೆ ಹೆಚ್ಚಿಸಲಾಗಿದೆ.

ಪರೀಕ್ಷಾ ವಂಚನೆಯಲ್ಲಿ ತೊಡಗುವ ಸಂಘಟಿತ ಗ್ಯಾಂಗ್‌ಗಳು ಅಥವಾ ಜಾಲಗಳಿಗೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ 10 ಕೋಟಿ ರೂ.ವರೆಗೆ ಭಾರಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಲೋಪವೆಸಗುವ ಅಥವಾ ಭಾಗಿಯಾಗುವ ಸೇವಾ ಪೂರೈಕೆದಾರ ಸಂಸ್ಥೆಗಳಿಗೆ 5 ಕೋಟಿ ರೂ.ವರೆಗೆ ದಂಡ ವಿಧಿಸುವುದಲ್ಲದೆ, ಅಂತಹ ಸಂಸ್ಥೆಗಳನ್ನು 8 ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

ಪ್ರಕರಣಗಳ ಕಾಲಮಿತಿಯೊಳಗೆ ವಿಲೇವಾರಿಗಾಗಿ ವಿಶೇಷ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. ತನಿಖೆಯನ್ನು ಕೇವಲ 2 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಮತ್ತು ಚಾರ್ಜ್‌ಶೀಟ್‌ ಸಲ್ಲಿಕೆಯಾದ 3 ತಿಂಗಳಲ್ಲಿ ವಿಚಾರಣೆ ಮುಗಿಯಬೇಕೆಂಬ ಕಟ್ಟುನಿಟ್ಟಿನ ನಿಯಮ ತರಲಾಗಿದೆ.

ಅಂತರರಾಜ್ಯ ಅಥವಾ ದೊಡ್ಡ ಮಟ್ಟದ ಜಾಲಗಳನ್ನು ಭೇದಿಸಲು ಕೇಂದ್ರ ಸರ್ಕಾರವು ವಿಶೇಷ ಕಾರ್ಯಪಡೆಯನ್ನು ರಚಿಸಲು ಹೊಸ ಕಾಯ್ದೆಯಲ್ಲಿ ಅಧಿಕಾರ ನೀಡಲಾಗಿದೆ.ಕಳೆದ ಕೆಲವು ವರ್ಷಗಳಿಂದ ಹಾಗೂ ಪ್ರಸಕ್ತ ವರ್ಷದಲ್ಲಿ ನಡೆದ ಪ್ರತಿಷ್ಠಿತ ನೀಟ್‌ ಮುಂತಾದ ಪ್ರಮುಖ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದ್ದರಿಂದ ದೇಶಾದ್ಯಂತ ವಿದ್ಯಾರ್ಥಿ ಸಂಘಟನೆಗಳು ಮತ್ತು ಯುವಜನರಿಂದ ತೀವ್ರ ಪ್ರತಿಭಟನೆಗಳು ವ್ಯಕ್ತವಾಗಿದ್ದವು.
ಈ ಹಿಂದಿನ 2024ರ ಮೂಲ ಕಾಯ್ದೆಯಲ್ಲಿದ್ದ ಕೆಲ ಲೋಪಗಳನ್ನು ಸರಿಪಡಿಸಿ, ಅಪರಾಧಿಗಳಿಗೆ ಯಾವುದೇ ರೀತಿಯಲ್ಲಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅವಕಾಶವಿಲ್ಲದಂತೆ ಅತ್ಯಂತ ಕಠಿಣ ನಿಬಂಧನೆಗಳೊಂದಿಗೆ ಈ 2026ರ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಈ ಕಾಯ್ದೆಯಿಂದಾಗಿ ಯುಪಿಎಸ್‌‍ಸಿ, ಎಸ್‌‍ಎಸ್‌‍ಸಿ, ರೈಲ್ವೆ ನೇಮಕಾತಿ ಮಂಡಳಿ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಎಲ್ಲಾ ಕೇಂದ್ರ ಮಟ್ಟದ ಪರೀಕ್ಷೆಗಳು ಮತ್ತಷ್ಟು ಪಾರದರ್ಶಕಗೊಳ್ಳಲಿದ್ದು, ಕಷ್ಟಪಟ್ಟು ಓದುವ ಪ್ರಾಮಾಣಿಕ ವಿದ್ಯಾರ್ಥಿಗಳ ಆಕಾಂಕ್ಷೆಗಳಿಗೆ ದೊಡ್ಡ ಮಟ್ಟದ ರಕ್ಷಣೆ ಸಿಕ್ಕಂತಾಗಿದೆ.

RELATED ARTICLES

Latest News