ಚಿಕ್ಕಮಗಳೂರು,ಆ.2-ದ್ವೇಷ ಭಾಷಣಗಳ ಮೂಲಕವೇ ಬಿಜೆಪಿ ತನ್ನ ಸಂಘಟನೆಯನ್ನು ಬಲಪಡಿಸಲು ಯತ್ನಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮೂರೊಳ್ಳಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹಾಗೂ ಬೆದರಿಕೆ ಹಾಕುವ ರೀತಿಯ ಹೇಳಿಕೆ ನೀಡಿರುವುದನ್ನು ಖಂಡಿಸಿದರು.
ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿದ ನಟ ಪ್ರಕಾಶ್ ರೈ ಹಾಗೂ ಮಣಿಪಾಲದ ವಿದ್ಯಾರ್ಥಿ-ಪ್ರಾಧ್ಯಾಪಕರ ವಿರುದ್ಧವೂ ಕೀಳುಮಟ್ಟದ ಹೇಳಿಕೆಗಳನ್ನು ನೀಡಿರುವುದು ಉಡುಪಿ ಜನತೆಗೆ ಮಾಡಿದ ಅಪಮಾನ ಎಂದು ಹೇಳಿದರು.
ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಜಾತ್ಯಾತೀತ ಹೋರಾಟವಾಗಿದ್ದರೂ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅದನ್ನು ಅನುಮಾನಿಸಿ ಮುಸ್ಲಿಮರನ್ನು ಎಳೆದು ತರುವುದು ಅವರ ಅವಿವೇಕವನ್ನು ತೋರಿಸುತ್ತದೆ ಎಂದು ಟೀಕಿಸಿದರು. ಕೇರಳದ ಹಳೆಯ ವಿಡಿಯೊವನ್ನು ದೆಹಲಿಯ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರದರ್ಶಿಸಿರುವುದು ಅವರ ಘನತೆಗೆ ಶೋಭೆಯಲ್ಲ ಎಂದರು.
ಸಿ.ಟಿ. ರವಿ ಈ ಹಿಂದೆಯೂ ಹಲವು ಬಾರಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸಮಾಜದಲ್ಲಿ ದ್ವೇಷ ಹರಡುವ ಬದಲು ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು. ಯಶ್ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲಿಸಲು ಹೋದ ಪೊಲೀಸ್ ಅಧಿಕಾರಿಯೊಬ್ಬರು ಅವರಿಗೆ ಸೆಲ್ಯೂಟ್ ಹೊಡೆದಿರುವುದು ಖಂಡನೀಯ. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಮೀಸಲಾತಿ ವಿರೋಧಿ ಅಭಿಯಾನ ನಡೆಸುವ ಮೊದಲು ಸಮಾಜದ ಎಲ್ಲ ವರ್ಗಗಳೂ ಅದರ ಫಲಾನುಭವಿಗಳಾಗಿರುವುದನ್ನು ಅರಿಯಬೇಕು ಎಂದ ಅವರು, ಬಿಜೆಪಿ ಮತ್ತು ಸಂಘ ಪರಿವಾರ ಮೀಸಲಾತಿ ವಿರೋಧಿ ನಿಲುವು ಹೊಂದಿವೆ ಎಂದು ಆರೋಪಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿನ ಅಕ್ರಮಗಳ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
