ಬೆಂಗಳೂರು,ಮಾ.1- ರಾಜ್ಯದ ಬರ ನಿರ್ವಹಣೆಯಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾಸಿಕ ಸಭೆ ನಡೆಸಿದ ಅವರು, ಕುಡಿಯುವ ನೀರಿನ ಸಮಸ್ಯೆಯನ್ನು ಕಡೆಗಣಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಯೊಂದು ಜಿಲ್ಲೆಯಲ್ಲೂ ಬರ ಪರಿಸ್ಥಿತಿ, ಬೆಳೆನಷ್ಟ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ, ಉದ್ಯೋಗ ಸೃಜನೆ ಸೇರಿದಂತೆ ಹಲವು ವಿಚಾರಗಳಲ್ಲಿ ಜಿಲ್ಲಾಡಳಿತಗಳು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಸಚಿವರು ಮಾಹಿತಿ ಪಡೆದುಕೊಂಡರು. ಕೆಲವು ಜಿಲ್ಲೆಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮತ್ತಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು. ಕಲಬುರಗಿ, ರಾಯಚೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜನ ಗಂಭೀರ ಸಮಸ್ಯೆ ಅನುಭವಿಸುತ್ತಿರುವುದು ವರದಿಯಾಗಿದೆ. ತಾಲ್ಲೂಕು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಮುಂಚಿತವಾಗಿಯೇ ಗುರುತಿಸಿ ಜನರಿಗೆ ನೆರವಾಗಲು ಕ್ರಮ ಕೈಗೊಳ್ಳುವಂತೆ ಸಚಿವರು ತಾಕೀತು ಮಾಡಿದ್ದಾರೆ.
ಫೆ. 28ರವರೆಗಿನ ಮಾಹಿತಿ ಪ್ರಕಾರ, 117 ಗ್ರಾಮಗಳಿಗೆ 181 ಟ್ಯಾಂಕರ್ ಮೂಲಕ ಹಾಗೂ 354 ಗ್ರಾಮಗಳಿಗೆ 419 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಸಲಾಗುತ್ತಿದೆ. 9 ನಗರ ಸ್ಥಳೀಯ ಸಂಸ್ಥೆಗಳಲ್ಲಿನ 57 ವಾರ್ಡ್‍ಗಳಿಗೆ 17 ಟ್ಯಾಂಕರ್‍ಗಳ ಮೂಲಕ ಹಾಗೂ 29 ವಾರ್ಡ್‍ಗಳಿಗೆ 17 ಖಾಸಗಿ ಬೋರ್‍ವೆಲ್‍ಗಳ ಮೂಲಕ ತುರ್ತು ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಒಟ್ಟು 7,412 ಗ್ರಾಮಗಳನ್ನು ಹಾಗೂ 1,115 ವಾರ್ಡ್‍ಗಳನ್ನು ಗುರುತಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಟ್ಟು 7108 ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಲಾಗಿದೆ.
ಪ್ರಸಕ್ತ ಸಾಲಿನ ಪ್ರಕೃತಿ ವಿಕೋಪ ಪರಿಹಾರ ನಿಯಡಿ ರೂ.930.14 ಕೋಟಿ ಹಂಚಿಕೆಯಾಗಿದ್ದು, ಇದರ ಪೈಕಿ ಕೇಂದ್ರದ ಪಾಲು 697.60 ಕೋಟಿ ರೂ. ಹಾಗೂ ರಾಜ್ಯದ ಪಾಲು 232.54 ಕೋಟಿ ರೂ. ಇರುತ್ತದೆ. ಈ ಅನುದಾನದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ 885.67 ಕೋಟಿ ರೂ. ಸೇರಿದಂತೆ ಒಟ್ಟು 1810.81 ಕೋಟಿ ರೂ. ಸಂಪೂರ್ಣ ಅನುದಾನವನ್ನು ಬಿಡುಗಡೆಗೊಳಿಸಲು ಆರ್ಥಿಕ ಇಲಾಖೆ ಸಹಮತ ನೀಡಿದ್ದು, ಈವರೆಗೆ 1602.45 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಜಿಲ್ಲಾಧಿಕಾರಿಗಳ ಖಾತೆಯಲ್ಲಿ 725.92 ಕೋಟಿ ರೂ. ಹಾಗೂ ತಹಸೀಲ್ದಾರ್ ಖಾತೆಯಲ್ಲಿ 135.40 ಕೋಟಿ ರೂ. ಸೇರಿದಂತೆ ಒಟ್ಟು 861.32 ಕೋಟಿ ರೂ. ಅನುದಾನವು ಬರ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಲಭ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.
ಬರ ಘೋಷಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಮತ್ತು ಮೇವು ಒದಗಿಸಲು ಶಾಸಕರ ಅಧ್ಯಕ್ಷತೆಯಲ್ಲಿ 15 ದಿನಗಳಿಗೊಮ್ಮೆ ಟಾಸ್ಕ್‍ಫೋರ್ಸ್ ಸಭೆ ನಡೆಸಲಾಗುತ್ತಿದ್ದು, ಈವರೆಗೆ ತಾಲ್ಲೂಕು ಮಟ್ಟದ 566 ಟಾಸ್ಕ್‍ಫೋರ್ಸ್ ಸಭೆಗಳನ್ನು ನಡೆಸಲಾಗಿದೆ. ಪ್ರಕೃತಿ ವಿಕೋಪ ನಿವಾರಣೆಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಸಭೆಯನ್ನು 15 ದಿನಗಳಿಗೊಮ್ಮೆ ನಡೆಸಲಾಗುತ್ತಿದ್ದು, ಈವರೆಗೆ 262 ಸಭೆಗಳನ್ನು ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಭೂಮಿ ತಂತ್ರಾಂಶಗಳ ದತ್ತಾಂಶ, ಬೆಳೆ ಸಮೀಕ್ಷೆಯ ದತ್ತಾಂಶವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಪ್ರಕಾರ 33.25 ಲಕ್ಷ ರೈತರಿಗೆ 631.12 ಕೋಟಿ ರೂ. ಮೊದಲ ಕಂತಿನ ಪರಿಹಾರವನ್ನು ನೇರವಾಗಿ ಖಾತೆಗೆ ವರ್ಗಾಯಿಸಲಾಗಿದೆ ಎಂದು ವಿವರಿಸಿದ್ದಾರೆ.
ಅಂತರರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಿ ನವೆಂಬರ್ 22ರಂದೇ ಆದೇಶ ಹೊರಡಿಸಲಾಗಿದೆ. ಮೇವಿನ ಕಿಟ್ ಖರೀದಿಸಲು ಎಸ್‍ಡಿಆರ್‍ಎಫ್ ಅಡಿ ಪಶುಸಂಗೋಪನೆ ಇಲಾಖೆಗೆ 20 ಕೋಟಿ ರೂ. ನೀಡಲಾಗಿದ್ದು, 7.62 ಲಕ್ಷ ಮಿನಿ ಕಿಟ್‍ಗಳನ್ನು ಖರೀದಿಸಲಾಗಿದೆ. ಈ ಕಿಟ್‍ಗಳನ್ನು 4.19 ಲಕ್ಷ ರೈತರಿಗೆ ಉಚಿತವಾಗಿ ನೀಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 144 ಲಕ್ಷ ಟನ್ ಮೇವು ಲಭ್ಯವಿದ್ದು ಮುಂದಿನ 27 ವಾರಗಳ ಬಳಕೆಗೆ ಸಾಕಾಗುತ್ತದೆ. ಗೋಶಾಲೆ ಹಾಗೂ ಮೇವಿನ ಬ್ಯಾಂಕ್‍ಗಳನ್ನು ಎಸ್‍ಡಿಆರ್‍ಎಫ್‍ಮಾರ್ಗಸೂಚಿಯ ಪ್ರಕಾರ ಅರ್ಹತೆಯಂತೆ ಸ್ಥಾಪಿಸಲು ಡಿ.4 ರಂದು ಸುತ್ತೋಲೆ ಹೊರಡಿಸಲಾಗಿದೆ.
ಟ್ಯಾಂಕರ್ ಹಾಗೂ ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಸಲು ಹಾಗೂ 15 ದಿನಗಳಲ್ಲಿ ಬಿಲ್ ಪಾವತಿಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.