Homeರಾಜ್ಯರಾಜಕೀಯ ಆರಂಭಿಸಿ 25 ವರ್ಷಗಳ ಬಳಿಕ ಮಂತ್ರಿಯಾದ ಕೆ.ಎಂ. ಶಿವಲಿಂಗೇಗೌಡ

ರಾಜಕೀಯ ಆರಂಭಿಸಿ 25 ವರ್ಷಗಳ ಬಳಿಕ ಮಂತ್ರಿಯಾದ ಕೆ.ಎಂ. ಶಿವಲಿಂಗೇಗೌಡ

ಹಾಸನ, ಆ.4- ಸುಮಾರು 25 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಬಳಿಕ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮೊದಲ ಬಾರಿಗೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸಚಿವರಾದ ಮೊದಲ ಶಾಸಕರಾಗಿ ಇತಿಹಾಸ ನಿರ್ಮಿಸಿದ್ದಾರೆ.

1958ರ ಫೆಬ್ರವರಿ 14ರಂದು ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಶಿವಲಿಂಗೇಗೌಡ ಅವರು ಹಾಸನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿದ್ದಾರೆ. ಕೃಷಿಯನ್ನು ಮುಖ್ಯ ವೃತ್ತಿಯಾಗಿಸಿಕೊಂಡಿರುವ ಅವರು, ಜೆಡಿಎಸ್‌‍ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿ 2001ರಿಂದ 2006ರವರೆಗೆ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

2004ರ ವಿಧಾನಸಭೆ ಚುನಾವಣೆಯಲ್ಲಿ ಆಗಿನ ಗಂಡಸಿ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌‍ ಅಭ್ಯರ್ಥಿ ಬಿ.ಶಿವರಾಂ ವಿರುದ್ಧ ಕೇವಲ 18 ಮತಗಳ ಅಂತರದಿಂದ ಸೋತಿದ್ದ ಅವರು, ಕ್ಷೇತ್ರ ಪುನರ್‌ವಿಂಗಡಣೆ ಬಳಿಕ 2008ರಲ್ಲಿ ಅರಸೀಕೆರೆಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ 2013, 2018 ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲೂ ಸತತವಾಗಿ ಗೆಲುವು ಸಾಧಿಸಿ ಕ್ಷೇತ್ರದ ಅಜೇಯ ನಾಯಕರಾಗಿ ಹೊರಹೊಮಿದರು.

2023ರ ಚುನಾವಣೆಗೆ ಮುನ್ನ ಕಾಂಗ್ರೆಸ್‌‍ ಪಕ್ಷಕ್ಕೆ ಸೇರ್ಪಡೆಯಾದ ಶಿವಲಿಂಗೇಗೌಡ ಅವರು ಹೊಸ ಪಕ್ಷದಲ್ಲಿಯೂ ಗೆಲುವು ದಾಖಲಿಸಿ ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಇದೀಗ ಸಚಿವ ಸ್ಥಾನ ಅಲಂಕರಿಸಿದ್ದು, ಅವರ ನೇಮಕಾತಿ ಅರಸೀಕೆರೆ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸಚಿವ ಸ್ಥಾನದಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

RELATED ARTICLES
spot_img

Latest News