ಬೆಂಗಳೂರು, ಆ.6- ಸಚಿವ ಸ್ಥಾನ ವಂಚಿತರ ಆಕ್ರೋಶ ಒಂದೆಡೆಯಾದರೆ, ಮತ್ತೊಂದೆಡೆ ಖಾತೆ ಹಂಚಿಕೆಯ ಕಗ್ಗಂಟು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರನ್ನು ಕಾಡುತ್ತಿದೆ. ಸಚಿವ ಸ್ಥಾನ ಸಿಗದ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಎಂ.ಕೃಷ್ಣಪ್ಪ, ಕೋಲಾರದಲ್ಲಿ ಎಸ್.ಎನ್.ನಾರಾಯಣ ಸ್ವಾಮಿ, ಕೆ.ವೈ.ನಂಜೇಗೌಡ, ಚಿಕ್ಕಬಳ್ಳಾಪುರದಲ್ಲಿ ಎಸ್.ಎನ್.ಸುಬ್ಬಾರೆಡ್ಡಿ, ರಾಯಚೂರಿನಲ್ಲಿ ಹಂಪನಗೌಡ ಬಾದರ್ಲಿ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಬಾಗಲಕೋಟೆಯಲ್ಲಿ ಆರ್.ಬಿ.ತಿಮಾಪೂರ್ ಸೇರಿದಂತೆ ಹಲವರ ಸಿಟ್ಟು ತಣ್ಣಗಾಗಿಲ್ಲ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ್‌ಖುದ್ದು ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿಯವರ ಜೊತೆ ಸೇರಿ ಅತೃಪ್ತ ಹಿರಿಯ ಶಾಸಕರ ಮನೆಗಳಿಗೆ ಭೇಟಿ ನೀಡಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೂಡ ಅಖಾಡಕ್ಕಿಳಿದಿದ್ದಾರೆ.
ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೂ ಭಿನ್ನಮತ ಚಟುವಟಿಕೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಮೈಸೂರಿಗೆ ತೆರಳಿರುವುದು ಅಚ್ಚರಿ ಮೂಡಿಸಿದೆ.
ನಿನ್ನೆ ತಡ ರಾತ್ರಿಯವರೆಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಕೆಲವು ಶಾದಕರ ಜೊತೆ ನಿರಂತರವಾಗಿ ಮಾತುಕತೆ ನಡೆಸಿದ್ದಾರೆ.
ಪ್ರಮುಖವಾಗಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಮತ್ತು ಗೋವಿಂದರಾಜ್ ನಗರ ಶಾಸಕ ಪ್ರಿಯಾಕೃಷ್ಣ ಅವರ ಮನೆಗಳಿಗೆ ಡಿ.ಕೆ.ಶಿವಕುಮಾರ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ನೀಡಿದ್ದರು.
ಮಾತುಕತೆ ವೇಳೆ ನಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಮುಖ್ಯಮಂತ್ರಿ ಕ್ಷಮೆ ಕೇಳಿ, ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.
ಇಲ್ಲಿ ಸಚಿವ ಸ್ಥಾನದ ಪ್ರಶ್ನೆ ಮುಖ್ಯ ಅಲ್ಲ. ನಾವು ಅರ್ಹರಿದ್ದೇವೆ. ಹಿರಿಯ ನಾಯಕರು ಮನೆಗೆ ಬಂದು, ತಪ್ಪಾಗಿದೆ ಎಂದು ಹೇಳಿದ ಮೇಲೆ ಅದನ್ನು ಪರಿಗಣಿಸಬೇಕಾಗಿರುವುದು ನಮ ಕರ್ತವ್ಯ ಎಂದು ಹೇಳುವ ಮೂಲಕ ಕೃಷ್ಣಪ್ಪ ಸಮಾಧಾನಗೊಂಡಿದ್ದಾರೆ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.
ಈಗಾಗಲೇ ಯಶವಂತಗೌಡ ರಾಯಪಾಟೀಲ್ ಅವರ ಜೊತೆ ಮುಖ್ಯಮಂತ್ರಿ ಮಾತುಕತೆ ನಡೆಸಿದ್ದರಿಂದ ಅವರು ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಶಿರಾ ಕ್ಷೇತ್ರದ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರ ಮನೆಗೆ ಬಿ.ಕೆ.ಹರಿಪ್ರಸಾದ್ ಭೇಟಿ ನೀಡಿದ್ದರು. ಅಲ್ಲಿ ಬೆಳಗಾವಿಯ ರಾಮದುರ್ಗ ಶಾಸಕ ಪಿ.ಎಂ.ಅಶೋಕ್ ಕೂಡ ಹಾಜರಿದ್ದರು.
ಮಾತುಕತೆ ಸಂದರ್ಭದಲ್ಲಿ ಜಯಚಂದ್ರ ತಮ ಆಕ್ರೋಶ ಹೊರ ಹಾಕಿದ್ದಾರೆ. ನಿನ್ನೆ, ಮೊನ್ನೆ ಕಾಂಗ್ರೆಸ್‌ಗೆ ಬಂದವರನ್ನು ಸಚಿವರನ್ನಾಗಿ ಮಾಡಲಾಗಿದೆ. 60 ವರ್ಷಗಳಿಂದಲೂ ಪಕ್ಷದಲ್ಲೇ ಇರುವ ತಮ ನಿಷ್ಠೆಯನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ತಮಗೆ ಸಚಿವ ಸ್ಥಾನ ಬಿಟ್ಟು ಬೇರೆ ಯಾವುದೇ ಹುದ್ದೆಗಳು ಬೇಡ ಎಂದು ಜಯಚಂದ್ರ ಕೂಡ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನಲ್ಲಿ ಸೂಟ್‌ಕೇಸ್ ಕೊಟ್ಟು ಸಚಿವ ಸ್ಥಾನ ಪಡೆಯಲಾಗಿದೆ ಎಂಬ ಆರೋಪಕ್ಕೆ ತಾವು ಪ್ರತಿಕ್ರಿಯಿಸಲ್ಲ, ರಾಜಕೀಯವಾಗಿ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರಿಸಬೇಕಾದವರು ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರು. ಈ ವಿಷಯದಲ್ಲಿ ನಾನು ಯಾವುದೇ ಆಕ್ಷೇಪಗಳನ್ನು ವ್ಯಕ್ತಪಡಿಸಲು ಬಯಸುವುದಿಲ್ಲ ಎಂದು ಹೇಳಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಎಸ್.ಎನ್.ನಾರಾಯಣಸ್ವಾಮಿ ಅವರ ಸಿಟ್ಟು ಇನ್ನೂ ತಣ್ಣಗಾಗಿಲ್ಲ, ಅವರ ಬೆಂಬಲಿಗರು ಇಂದು ಕೋಲಾರದಲ್ಲಿ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಇದರ ಜೊತೆಗೆ ಹರಿಪ್ರಸಾದ್ ಕೂಡ ನಾರಾಯಣಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್ ಅವರ ಜೊತೆಗೂ ಹರಿಪ್ರಸಾದ್ ಚರ್ಚೆ ನಡೆಸಿದ್ದಾರೆ.
ಒಂದೆಡೆ ಅತೃಪ್ತರನ್ನು ಸಮಾಧಾನ ಪಡಿಸುವ ಪ್ರಕ್ರಿಯೆಗಳು ಬಿರುಸಿನಿಂದ ನಡೆಯುತ್ತಿದ್ದರೆ, ಮತ್ತೊಂದೆಡೆ ಖಾತೆ ಹಂಚಿಕೆ ಕುರಿತ ಕಗ್ಗಂಟು ಬಿಗಿಯಾಗುತ್ತಿದೆ. ಬಹಳಷ್ಟು ಮಂದಿ ಹಿರಿಯ ಶಾಸಕರು ತಮಗೆ ಪ್ರಮುಖ ಖಾತೆಗಳೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮೊದಲ ಹಂತದಲ್ಲಿ ಸಂಪುಟ ಸೇರಿದವರಿಗೆ ಅದೃಷ್ಟ ಎಂಬಂತೆ ಪ್ರಮುಖ ಖಾತೆಗಳು ಹಂಚಿಕೆಯಾಗಿವೆ.
ಬಾಕಿ ಉಳಿದಂತೆ ಸಮಾಜ ಕಲ್ಯಾಣ, ಕನ್ನಡ ಸಂಸ್ಕೃತಿ, ವಸತಿ, ಕೃಷಿ, ಅರಣ್ಯ, ಅಬಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ, ಶಿಕ್ಷಣ, ಸಣ್ಣ ನೀರಾವರಿ ಸೇರಿದಂತೆ ಹಲವು ಪ್ರಮುಖ ಖಾತೆಗಳ ಮೇಲೆ ನೂತನ ಸಚಿವರು ಕಣ್ಣಿಟ್ಟಿದ್ದಾರೆ. ಈ ಮೊದಲಿನ ಖಾತೆ ಹಂಚಿಕೆಯಲ್ಲಿ ಕೆ.ಎಚ್.ಮುನಿಯಪ್ಪ ಮತ್ತು ರಾಮಲಿಂಗಾರೆಡ್ಡಿ ಖಾತೆಗಳ ತಗಾದೆ ತೆಗೆದಿದ್ದರು. ಈ ಬಾರಿ ಖಾತೆ ಹಂಚಿಕೆಯಲ್ಲಿ ಬೇರೆ ಯಾರೆಲ್ಲಾ ಆಕ್ಷೇಪ ವ್ಯಕ್ತಪಡಿಸಬಹುದು ಎಂಬ ಕುತೂಹಲ ಹೆಚ್ಚಾಗಿದೆ.
