ನವದೆಹಲಿ,ಆ.7- ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಅಂತ್ಯಗೊಳಿಸಿ ಪ್ರಮುಖ ಶಾಸನಗಳನ್ನು ಅಂಗೀಕರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತಿರುವ ಮಧ್ಯೆ, ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026 ಅನ್ನು ಆ.12ರಂದು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಈ ಮಾಹಿತಿ ನೀಡಿದ್ದು, ಮಸೂದೆಯನ್ನು ಪೂರ್ವಾನ್ವಯವಾಗಿ ಜಾರಿಗೆ ತರಲಾಗುವುದಿಲ್ಲ ಎಂಬ ಭರವಸೆಯನ್ನು ಗೃಹ ಸಚಿವರು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಷಯವು ವಿಶೇಷವಾಗಿ ಮಿಜೋರಾಂ ಸೇರಿದಂತೆ ವಿದೇಶಿ ನೆರವಿನ ಮೇಲೆ ಅವಲಂಬಿತವಾಗಿರುವ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳ ಆತಂಕವನ್ನು ತಗ್ಗಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. 2026ರ ಮಾರ್ಚ್ 25ರಂದು ಲೋಕಸಭೆಯಲ್ಲಿ ಪರಿಚಯಿಸಲಾದ ಈ ತಿದ್ದುಪಡಿ ಮಸೂದೆ, ವಿದೇಶಿ ಅನುದಾನ ಪಡೆಯುವ ಸಂಸ್ಥೆಗಳ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
ಮಸೂದೆಯ ಪ್ರಮುಖ ಅಂಶಗಳು :
FCRA ನೋಂದಣಿ ರದ್ದಾದ, ಶರಣಾದ ಅಥವಾ ಅಮಾನತುಗೊಂಡ ಸಂಸ್ಥೆಗಳ ವಿದೇಶಿ ನಿಧಿ ಮತ್ತು ಆಸ್ತಿಗಳನ್ನು ತಾತ್ಕಾಲಿಕವಾಗಿ ಗೊತ್ತುಪಡಿಸಿದ ಪ್ರಾಧಿಕಾರದ ವಶಕ್ಕೆ ನೀಡುವುದು. ನಿಗದಿತ ಅವಧಿಯೊಳಗೆ ಸಂಸ್ಥೆಗೆ ಮರು ನೋಂದಣಿ ದೊರೆಯದಿದ್ದರೆ, ಆ ಆಸ್ತಿಗಳನ್ನು ಶಾಶ್ವತವಾಗಿ ಸರ್ಕಾರದ ಅಧೀನಕ್ಕೆ ವರ್ಗಾಯಿಸುವ ವ್ಯವಸ್ಥೆ. ವಿದೇಶಿ ನೆರವಿನ ದುರುಪಯೋಗ, ಹಣದ ಅಕ್ರಮ ವರ್ಗಾವಣೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಪಾಯಗಳನ್ನು ತಡೆಯಲು ಕಠಿಣ ಮೇಲ್ವಿಚಾರಣೆ.
ಮಿಜೋರಾಂ ಚರ್ಚ್ಗಳ ಆತಂಕ :
ಮಿಜೋರಾಂ ಕೊಹ್ರಾನ್ ಹೃಯಿತು ಸಮಿತಿ ಹಾಗೂ ಮಿಜೋರಾಂ ಕೌನ್ಸಿಲ್ ಆಫ್ ಚರ್ಚ್ಗಳ ಪ್ರತಿನಿಧಿಗಳೊಂದಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಲಾಲ್ದುಹೋಮಾ, ಕಾನೂನನ್ನು ಹಿಂದಿನ ದಿನಾಂಕದಿಂದ ಜಾರಿಗೆ ತರಬಾರದು ಎಂದು ಮನವಿ ಸಲ್ಲಿಸಿದರು. ಅವರ ಅಭಿಪ್ರಾಯದಂತೆ, ಪೂರ್ವಾನ್ವಯವಾಗಿ ಕಾನೂನು ಜಾರಿಯಾದರೆ ಹಿಂದೆ ನಡೆದ ಆಡಳಿತಾತಕ ಅಥವಾ ತಾಂತ್ರಿಕ ಲೋಪಗಳಿಗಾಗಿ ನೈಜ ಸೇವಾ ಸಂಸ್ಥೆಗಳು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಭರವಸೆ ಮಹತ್ವದ್ದಾಗಿದೆ.
ಹಿಂದಿನ FCRA ತಿದ್ದುಪಡಿಗಳ ಹಿನ್ನೆಲೆ :
FCRA ಕಾಯ್ದೆ ಮೊದಲ ಬಾರಿಗೆ 1976ರಲ್ಲಿ ಜಾರಿಗೆ ಬಂದಿದ್ದು, ವಿದೇಶಿ ನೆರವು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲ್ಪಡದಂತೆ ನಿಯಂತ್ರಿಸುವುದು ಇದರ ಉದ್ದೇಶವಾಗಿತ್ತು. ನಂತರ 2010ರಲ್ಲಿ ಹೊಸ FCRA ಕಾಯ್ದೆ ಜಾರಿಗೆ ಬಂದು ನೋಂದಣಿ, ಲೆಕ್ಕಪತ್ರ ಮತ್ತು ಮೇಲ್ವಿಚಾರಣೆಯ ನಿಯಮಗಳನ್ನು ಕಠಿಣಗೊಳಿಸಲಾಯಿತು. 2020ರ ತಿದ್ದುಪಡಿ ಮೂಲಕ ಆಡಳಿತ ವೆಚ್ಚದ ಮಿತಿಯನ್ನು ಶೇ.50ರಿಂದ ಶೇ.20ಕ್ಕೆ ಇಳಿಸಲಾಯಿತು. ಮತ್ತೊಂದು NGOಗೆ ವಿದೇಶಿ ಅನುದಾನ ವರ್ಗಾಯಿಸುವುದನ್ನು ನಿಷೇಧಿಸಲಾಯಿತು.
ಎಲ್ಲಾ FCRA ಖಾತೆಗಳನ್ನು ನವದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಗದಿತ ಶಾಖೆಯಲ್ಲಿ ತೆರೆಯುವುದು ಕಡ್ಡಾಯವಾಯಿತು. ಪದಾಧಿಕಾರಿಗಳ ಆಧಾರ್ ಗುರುತಿನ ದಾಖಲೆ ಕಡ್ಡಾಯಗೊಳಿಸಲಾಯಿತು.
ಈ ಕ್ರಮಗಳ ವಿರುದ್ಧ ಅನೇಕ ಸ್ವಯಂಸೇವಾ ಸಂಸ್ಥೆಗಳು ಮತ್ತು ಮಾನವ ಹಕ್ಕು ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದರೂ, ಸರ್ಕಾರವು ಪಾರದರ್ಶಕತೆ ಮತ್ತು ರಾಷ್ಟ್ರೀಯ ಭದ್ರತೆಯ ದಷ್ಟಿಯಿಂದ ಅವು ಅಗತ್ಯವೆಂದು ಸಮರ್ಥಿಸಿತ್ತು. FCRA ಮಸೂದೆ ಮಾತ್ರವಲ್ಲದೆ, ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಮಹತ್ವದ ಶಾಸನಗಳನ್ನೂ ಮುಂದಿನ ದಿನಗಳಲ್ಲಿ ಚರ್ಚೆಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ.
