ಕ್ಯಾಲಿಫೋರ್ನಿಯಾ,ಆ.7- ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಏಕಾಂಗಿ ಪಾದಯಾತ್ರೆಗೆ ತೆರಳಿದ್ದ ಭಾರತೀಯ ಮೂಲದ ಪಿಎಚ್ಡಿ ವಿದ್ಯಾರ್ಥಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಯುಸಿ ಸಾಂತಾ ಬಾರ್ಬರಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಡಾಕ್ಟರೇಟ್ ಅಭ್ಯರ್ಥಿಯಾಗಿದ್ದ ವಿಕ್ರಮ್ ಮುಬಾಯಿ ಮೃತ ದುರ್ದೈವಿ. ವಿಕ್ರಮ್ ಮುಬಾಯಿ ಅವರು ವಾರಾಂತ್ಯದಲ್ಲಿ ಕ್ಯಾಲಿಫೋರ್ನಿಯಾದ ಪೂರ್ವ ಸಿಯೆರಾ ನೆವಾಡಾದ ಬಿಗ್ ಪೈನ್ ಲೇಕ್ಸ್ ಪ್ರದೇಶದಲ್ಲಿ ಏಕಾಂಗಿ ಪಾದಯಾತ್ರೆಗೆ ತೆರಳಿದ್ದರು. ಆ.1ರ ಶನಿವಾರ ರಾತ್ರಿ 8.30ರ ಸುಮಾರಿಗೆ ಕೊನೆಯ ಬಾರಿಗೆ ತಮ ಕುಟುಂಬವನ್ನು ಸಂಪರ್ಕಿಸಿದ್ದ ಅವರು, ತಾವು ಹಾದಿಯಲ್ಲಿದ್ದ ಸ್ಥಳದ ಜಿಪಿಎಸ್ ನಿರ್ದೇಶಾಂಕಗಳನ್ನು ಹಂಚಿಕೊಂಡಿದ್ದರು.
ಆದರೆ, ನಿಗದಿತ ಸಮಯಕ್ಕೆ ವಾಪಸ್ಸಾಗದೆ ಹಾಗೂ ಯಾವುದೇ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಸ್ಥಳೀಯ ಅಧಿಕಾರಿಗಳಿಗೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಆಡಳಿತ ಮತ್ತು ಶೋಧನಾ ತಂಡಗಳು ಹುಡುಕಾಟ ನಡೆಸಿದಾಗ, ಬಿಗ್ ಪೈನ್ ಲೇಕ್ಸ್ ಪ್ರದೇಶದಲ್ಲಿ ವಿಕ್ರಮ್ ಅವರ ಮೃತದೇಹ ಪತ್ತೆಯಾಗಿದೆ. ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತದೇಹದ ಮೇಲಿರುವ ಪರಿಸ್ಥಿತಿಯಲ್ಲಿ ಯಾವುದೇ ದುಷ್ಕೃತ್ಯದ ಸೂಚನೆಗಳು ಕಂಡುಬಂದಿಲ್ಲ. ಆದಾಗ್ಯೂ, ಸಾವಿನ ನಿಖರವಾದ ಕಾರಣ ಮತ್ತು ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ.
ವಿಕ್ರಮ್ ಪತ್ತೆಯಾಗದಿದ್ದಾಗ ಅವರ ಕುಟುಂಬವು ರೆಡ್ಡಿಟ್ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರ ಸಹಾಯ ಕೋರಿತ್ತು. ಅನುಭವಿ ಪಾದಯಾತ್ರಿಯಾಗಿರುವ ವಿಕ್ರಮ್ ಸುಲಭವಾದ ಹಾದಿಯಲ್ಲಿದ್ದರು ಎಂದು ಕುಟುಂಬದವರು ಆಶಿಸಿದ್ದರು. ಆದರೆ ಶೋಧನಾ ತಂಡವು ಅವರು ಮತಪಟ್ಟಿರುವುದನ್ನು ದೃಢಪಡಿಸಿತು. ಹಾಂಗ್ ಕಾಂಗ್ನಲ್ಲಿ ಹುಟ್ಟಿ ಬೆಳೆದ ವಿಕ್ರಮ್ ಮುಬಾಯಿ, 2022ರಲ್ಲಿ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ರಾಸಾಯನಿಕ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದರು. ಪ್ರಕೃತಿ ಪ್ರೇಮಿಯಾಗಿದ್ದ ಅವರು ಕ್ರೀಡೆ ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು ಎಂದು ತಿಳಿದುಬಂದಿದೆ.
