ನವದೆಹಲಿ,ಆ.7- ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಡಿಲಿಮಿಟೇಶನ್ (ಕ್ಷೇತ್ರ ಪುನರ್‌ವಿಂಗಡಣೆ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ದಕ್ಷಿಣ ಭಾರತದ ಪ್ರಮುಖ ಪ್ರಾದೇಶಿಕ ಪಕ್ಷವಾದ ತಮಿಳುನಾಡಿನ ಡಿಎಂಕೆ ಪಕ್ಷವು ಈ ಮಸೂದೆಗೆ ಬೆಂಬಲ ಸೂಚಿಸಲು ಕೇಂದ್ರ ಸರ್ಕಾರದ ಮುಂದೆ ಮೂರು ಪ್ರಮುಖ ಷರತ್ತುಗಳನ್ನು ವಿಧಿಸಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಸೀಟುಗಳ ಸ್ಥಗಿತ ವಿಸ್ತರಣೆ : 1971ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಸ್ಥಗಿತಗೊಳಿಸುವ ವ್ಯವಸ್ಥೆಯು 2027ಕ್ಕೆ ಕೊನೆಗೊಳ್ಳಲಿದೆ. ಸಾಂವಿಧಾನಿಕ ತಿದ್ದುಪಡಿ ತರುವ ಮೂಲಕ ಈ ಸ್ಥಗಿತಗೊಳಿಸುವಿಕೆಯನ್ನು ಮತ್ತಷ್ಟು 25 ವರ್ಷಗಳ ಕಾಲ ವಿಸ್ತರಿಸಬೇಕು ಎಂಬುದು ಡಿಎಂಕೆ ಮೊದಲ ಬೇಡಿಕೆಯಾಗಿದೆ.
ಶೇ. 50 ರಷ್ಟು ಸಂಪೂರ್ಣ ಸೀಟು ಹೆಚ್ಚಳ :
ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳಲ್ಲಿ ಶೇಕಡಾ 50 ರಷ್ಟು ಸಂಪೂರ್ಣ ಹೆಚ್ಚಳ ಮಾಡಬೇಕೆಂದು ಎಂ.ಕೆ.ಸ್ಟಾಲಿನ್ ನೇತತ್ವದ ಪಕ್ಷ ಒತ್ತಾಯಿಸಿದೆ. ಏಪ್ರಿಲ್‌ನಲ್ಲಿ ಕೆಳಮನೆಯಲ್ಲಿ ಮಸೂದೆ ಮಂಡನೆಯಾದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕುರಿತು ಮೌಖಿಕ ಭರವಸೆ ನೀಡಿದ್ದರು.
ಕ್ಷೇತ್ರಗಳ ಪರಿಷ್ಕೃತ ಪಟ್ಟಿ ಪ್ರಕಟಣೆ :
ಹೊಸ ಶಾಸನದ ಜತೆಗೆ, ಎಲ್ಲಾ ರಾಜ್ಯಗಳ ಪರಿಷ್ಕೃತ ಲೋಕಸಭಾ ಕ್ಷೇತ್ರಗಳ ಸಂಪೂರ್ಣ ಪಟ್ಟಿಯನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ಮುಂಚಿತವಾಗಿ ಪ್ರಕಟಿಸಬೇಕು. ಕೇಂದ್ರ ಸರ್ಕಾರವು ಈ ಮೂರು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದರೆ, ಮಸೂದೆಯ ಅಂತಿಮ ಕರಡನ್ನು ಪರಿಶೀಲಿಸಿ ಡಿಲಿಮಿಟೇಶನ್ ಮಸೂದೆಯನ್ನು ಬೆಂಬಲಿಸಲು ಡಿಎಂಕೆ ಸಿದ್ಧವಿದೆ ಎಂದು ವರದಿಯಾಗಿದೆ. ಮಹಿಳಾ ಮೀಸಲಾತಿ ಕಾನೂನನ್ನು ಕಾರ್ಯಗತಗೊಳಿಸಲು ಲೋಕಸಭಾ ಸ್ಥಾನಗಳನ್ನು 543 ರಿಂದ 816 ಕ್ಕೆ ಹೆಚ್ಚಿಸಲಿರುವ ಈ ಮಸೂದೆಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ (ಅಂದರೆ ಸುಮಾರು 360 ಮತಗಳು) ಅಗತ್ಯವಿದೆ. ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಪ್ರಸ್ತುತ 319 ಸದಸ್ಯರ ಬಲವನ್ನು ಹೊಂದಿದೆ.
ಡಿಎಂಕೆ ಪಕ್ಷವು ಹೊಂದಿರುವ 22 ಲೋಕಸಭಾ ಸದಸ್ಯರ ಬೆಂಬಲವು ಸಿಕ್ಕರೆ, ಎನ್‌ಡಿಎಯ ಒಟ್ಟು ಬಲ 341ಕ್ಕೆ ಏರಲಿದೆ. ಇದರೊಂದಿಗೆ ವೈಎಸ್‌ಆರ್‌ಸಿಪಿ ಮತ್ತು ಇ ಅಹ ಇತರೆ ಸಣ್ಣ ಪಕ್ಷಗಳ ಬೆಂಬಲವನ್ನು ಕ್ರೂಢೀಕರಿಸಲು ಎನ್‌ಡಿಎಗೆ ಇದು ಸಹಕಾರಿಯಾಗಲಿದೆ. ಹಿಂದೆ ಡಿಎಂಕೆ ಪಕ್ಷವು ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿ ಡಿಲಿಮಿಟೇಶನ್ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತ ಬಂದಿತ್ತು. ಆದರೆ, ತಮಿಳುನಾಡಿನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿಯಲ್ಲಿ ಉಂಟಾದ ಬದಲಾವಣೆಗಳು ಮತ್ತು ಹೊಸ ರಾಜಕೀಯ ಸಮೀಕರಣಗಳ ಹಿನ್ನೆಲೆಯಲ್ಲಿ ಸ್ಟಾಲಿನ್ ಅವರ ಪಕ್ಷದ ಈ ನಿಲುವು ಮಹತ್ವ ಪಡೆದುಕೊಂಡಿದೆ.
ಮತ್ತೊಂದೆಡೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಹಿಂದೆ ವಾಗ್ದಾನ ಮಾಡಿದಂತೆ ಆಗಸ್ಟ್ 16 ರಿಂದ 18 ರವರೆಗೆ ಡಿಲಿಮಿಟೇಶನ್ ಮಸೂದೆಗಾಗಿ ಯಾವುದೇ ವಿಶೇಷ ಅಧಿವೇಶನ ಕರೆಯುವ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಸಂಸತ್ತಿನ ಮಳೆಗಾಲದ ಅಧಿವೇಶನ ಮುಕ್ತಾಯದ ಹಂತ ತಲುಪಿದ್ದು, ಮುಂಬರುವ ದಿನಗಳಲ್ಲಿ ಈ ಮಸೂದೆ ಮತ್ತು ಡಿಎಂಕೆ ಷರತ್ತುಗಳ ಕುರಿತು ಯಾವ ರೀತಿಯ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ.
