ಬೆಂಗಳೂರು, ಆ.8- ಸಚಿವ ಸಂಪುಟ ವಿಸ್ತರಣೆಯ ಬಳಿಕ ಸಚಿವರಿಗೆ ಖಾತೆ ಹಂಚಿಕೆ ವಿಳಂಬವಾಗಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಸೋಮವಾರದೊಳಗೆ ಖಾತೆ ಹಂಚಿಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇಂದು ಅಥವಾ ನಾಳೆಯೊಳಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಇಂದು ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಸೋಮವಾರದೊಳಗೆ ಸಚಿವರಿಗೆ ಖಾತೆ ಹಂಚಿಕೆ ಆಗಬಹುದು. ಸಂಪುಟದಲ್ಲಿ ಹಳಬರು ಹಾಗೂ ಆಡಳಿತದ ಬಗ್ಗೆ ಜ್ಞಾನ ಹೊಂದಿರುವವರು ಇದ್ದಾರೆ. ಹೀಗಾಗಿ ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಪುಟದಿಂದ ಸಚಿವರನ್ನು ಕೈ ಬಿಡುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಈಗಾಗಲೇ ಎಲ್ಲರೂ ಮಾತನಾಡಿದ್ದಾರೆ. ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಹೇಳಿಕೆ ನೀಡಿದ್ದಾರೆ. ಅಸಮಾಧಾನಗೊಂಡಿರುವವರ ಮನೆಗೆ ಮುಖ್ಯಮಂತ್ರಿ ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಭೇಟಿ ನೀಡಿದ್ದಾರೆ. ಇತರ ಸಚಿವರೂ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಗೊಂದಲವನ್ನು ಸರಿಪಡಿಸುವ ಪ್ರಯತ್ನ ನಡೆದಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬಸವರಾಜ ಶಿವಣ್ಣನವರ್ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಗೊಂದಲ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. ಪಕ್ಷದ ವರಿಷ್ಠರು ಎಲ್ಲವನ್ನೂ ಸರಿಪಡಿಸಲಿದ್ದಾರೆ. ಎಲ್ಲದಕ್ಕೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು. ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ವಿಚಾರದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಯಾವುದೇ ಸರ್ಕಾರವಿದ್ದರೂ ಕನಿಷ್ಠ ಒಬ್ಬ ಮಹಿಳೆಗೆ ಸಚಿವ ಸ್ಥಾನ ನೀಡಲೇಬೇಕು. ಈ ವಿಚಾರದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಒತ್ತಾಯಿಸಿದರು.
ಬಸವರಾಜ ಹೊರಟ್ಟಿ ಅವರಿಗೆ ಬೆದರಿಕೆ ಹಾಕಿ ರಾಜೀನಾಮೆ ಕೊಡಿಸಲಾಗಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಹೊರಟ್ಟಿ ಅವರೇ ರಾಜೀನಾಮೆ ನೀಡಿದ್ದಾರೆ. ಅವರು ಹಿರಿಯರು, ಸೀನಿಯರ್ ರಾಜಕಾರಣಿ. ನಾನೇ ರಾಜೀನಾಮೆ ಕೊಟ್ಟಿದ್ದೇನೆ ಎಂದು ಅವರೇ ಹೇಳಿದ್ದಾರೆ. ನಾನೂ ಕೂಡ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದಕ್ಕೆ ಬೇರೆ ಅರ್ಥ ನೀಡುವ ಅಗತ್ಯವಿಲ್ಲ. ಈ ವಿಚಾರ ಈಗಾಗಲೇ ಮುಗಿದಿದೆ ಎಂದು ಹೇಳಿದರು. ಹಿರಿಯ ರಾಜಕಾರಣಿಗೆ ಬೆದರಿಕೆ ಹಾಕುವಂತಹ ಕಾಲ ಇದಲ್ಲ. ನಮ ಪಕ್ಷ ಹೊಸಬರಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
