ಬೆಂಗಳೂರು,ಆ.9- ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಬಲವಂತವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮುಖಂಡರು, ಹೊರಟ್ಟಿ ಅವರ ರಾಜೀನಾಮೆಯನ್ನು ಅಂಗೀಕರಿಸದಂತೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ವಿಧಾನಪರಿಷತ್ ಸದಸ್ಯ ಎಸ್.ಶರವಣ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ ಬಿಜೆಪಿ-ಜೆಡಿಎಸ್ ಜಂಟಿ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ.
ಆಗಸ್ಟ್ 7ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ನೇತೃತ್ವದ ನಾಯಕರು ಸಭಾಪತಿಗಳ ಕೊಠಡಿಗೆ ತೆರಳಿ, ಯಾವುದೇ ವಿಳಂಬವಿಲ್ಲದೆ ತಕ್ಷಣವೇ ರಾಜೀನಾಮೆ ನೀಡುವಂತೆ ತೀವ್ರ ಒತ್ತಡ ಹೇರಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಿಯಮಾನುಸಾರ ಸದನದ ನಡಾವಳಿ ಪ್ರಕಾರ ರಾಜೀನಾಮೆ ಸಲ್ಲಿಕೆಯಾಗಿಲ್ಲ. ಕಾಗದಪತ್ರಗಳು ಮತ್ತು ರಾಜೀನಾಮೆ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಮೈತ್ರಿಕೂಟದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ತಮ ಮೇಲೆ ನಡೆದ ಒತ್ತಡದ ಬಗ್ಗೆ ಸ್ಪಷ್ಟನೆ ನೀಡಿ ಬಸವರಾಜ ಹೊರಟ್ಟಿ ಅವರು ಸ್ವತಃ ರಾಜ್ಯಪಾಲರಿಗೆ ಪತ್ರ ಬರೆದು ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಸಭಾಪತಿ ಸ್ಥಾನದ ಬದಲಾವಣೆ ಅಥವಾ ಕಾಂಗ್ರೆಸ್ ಒಲವಿನ ಧೋರಣೆಗಳ ವಿರುದ್ಧ ಪ್ರತಿಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಸದನದ ಘನತೆ ಮತ್ತು ಸಾಂವಿಧಾನಿಕ ಹುದ್ದೆಯ ಸ್ವಾಯತ್ತತೆಗೆ ಧಕ್ಕೆ ತರುವ ರೀತಿಯಲ್ಲಿ ಆಡಳಿತರೂಢ ಪಕ್ಷ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಸ್ತುತ ಈ ವಿವಾದವು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ರಾಜ್ಯಪಾಲರ ಅಂತಿಮ ನಿರ್ಧಾರದ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ..
ಈ ವಿವಾದದ ಕೇಂದ್ರಬಿಂದು ಆಗಿರುವುದು ಆಗಸ್ಟ್ 7ರಂದು ನಡೆದ ಬೆಳವಣಿಗೆ. ತಮ ಕಚೇರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ನೇತೃತ್ವದ ನಾಯಕರು ಆಗಮಿಸಿ, ಅದೇ ದಿನ ರಾಜೀನಾಮೆ ನೀಡುವಂತೆ ಒತ್ತಡ ಹೇರಿದರು ಎಂದು ಬಸವರಾಜ ಹೊರಟ್ಟಿ ಅವರು ರಾಜ್ಯಪಾಲರಿಗೆ ಪತ್ರದ ಮೂಲಕ ವಿವರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಹೊರಟ್ಟಿ ಅವರ ದೀರ್ಘ ರಾಜಕೀಯ ಪಯಣ
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ಕರ್ನಾಟಕ ವಿಧಾನ ಪರಿಷತ್ನ ಅತ್ಯಂತ ಹಿರಿಯ ಸದಸ್ಯರಲ್ಲಿ ಒಬ್ಬರು. ಅವರು 1980ರಿಂದಲೇ ಪರಿಷತ್ ಸದಸ್ಯರಾಗಿದ್ದು, ಹಲವು ಬಾರಿ ಸಭಾಪತಿ ಸ್ಥಾನವನ್ನು ಅಲಂಕರಿಸಿದ್ದಾರೆ. 2022ರ ಡಿಸೆಂಬರ್ 21ರಿಂದ ಅವರು ಪ್ರಸ್ತುತ ಅವಧಿಯಲ್ಲಿ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಭಾರತ ಸಂವಿಧಾನದ ಅನುಚ್ಛೇದ 183ರ ಪ್ರಕಾರ, ವಿಧಾನ ಪರಿಷತ್ ಸಭಾಪತಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದರೆ, ತಮ ಕೈಬರಹದ ರಾಜೀನಾಮೆಯನ್ನು ಉಪಸಭಾಪತಿಗೆ ಉದ್ದೇಶಿಸಿ ಸಲ್ಲಿಸಬೇಕು. ಸಭಾಪತಿಯನ್ನು ಸ್ಥಾನದಿಂದ ತೆಗೆದುಹಾಕಬೇಕಾದರೆ, ಪರಿಷತ್ತಿನ ಅಂದಿನ ಒಟ್ಟು ಸದಸ್ಯರ ಬಹುಮತದಿಂದ ನಿರ್ಣಯ ಅಂಗೀಕರಿಸಬೇಕು ಮತ್ತು ಅಂತಹ ನಿರ್ಣಯ ಮಂಡಿಸಲು ಕನಿಷ್ಠ 14 ದಿನಗಳ ನೋಟಿಸ್ ಅಗತ್ಯವಿದೆ.
ಇದೇ ಕಾರಣಕ್ಕೆ ಹೊರಟ್ಟಿ ಅವರ ರಾಜೀನಾಮೆ ಯಾವ ರೂಪದಲ್ಲಿ, ಯಾರಿಗೆ, ಯಾವ ದಿನಾಂಕದಲ್ಲಿ ಮತ್ತು ಯಾವ ಪ್ರಕ್ರಿಯೆಯಡಿ ಸಲ್ಲಿಕೆಯಾಗಿದೆ ಎಂಬ ಪ್ರಶ್ನೆ ಮಹತ್ವ ಪಡೆದುಕೊಂಡಿದೆ. ಕರ್ನಾಟಕ ವಿಧಾನಪರಿಷತ್ನ ಹಿಂದಿನ ದಾಖಲೆಗಳಲ್ಲಿಯೂ ರಾಜೀನಾಮೆ ಪ್ರಕ್ರಿಯೆಯನ್ನು ಸಂವಿಧಾನದ ಅನುಚ್ಛೇದ 183(ಬಿ) ಅಡಿಯಲ್ಲಿ ದಾಖಲಿಸಿರುವ ಉದಾಹರಣೆ ಇದೆ. 2015ರಲ್ಲಿ ಉಪಸಭಾಪತಿ ಪುಟ್ಟಣ್ಣ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಅದನ್ನು ಅನುಚ್ಛೇದ 183(ಬಿ)ರ ಅಡಿಯಲ್ಲಿ ದಾಖಲಿಸಲಾಗಿತ್ತು. ಹೀಗಾಗಿ ರಾಜೀನಾಮೆ ಬಲವಂತದಿಂದ ಪಡೆಯಲಾಯಿತೇ ಎಂಬುದು ಒಂದು ರಾಜಕೀಯ ಆರೋಪವಾದರೆ, ರಾಜೀನಾಮೆ ಸಂವಿಧಾನಬದ್ಧ ವಿಧಾನದಲ್ಲಿ ಸಲ್ಲಿಕೆಯಾಗಿದೆಯೇ ಎಂಬುದು ಪ್ರತ್ಯೇಕವಾಗಿ ಪರಿಶೀಲಿಸಬೇಕಾದ ಕಾನೂನು-ಸಾಂವಿಧಾನಿಕ ಪ್ರಶ್ನೆಯಾಗಿದೆ.
ಬಿಜೆಪಿ-ಜೆಡಿಎಸ್ ನಿಯೋಗದ ಮನವಿಯ ಹಿನ್ನೆಲೆಯಲ್ಲಿ ಇದೀಗ ರಾಜ್ಯಪಾಲರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಪ್ರತಿಪಕ್ಷವು ರಾಜೀನಾಮೆಯನ್ನು ಅಂಗೀಕರಿಸದಂತೆ ಮನವಿ ಮಾಡಿರುವುದರ ಜೊತೆಗೆ, ಹೊರಟ್ಟಿ ಅವರು ನೀಡಿರುವ ವಿವರಣೆಯನ್ನೂ ರಾಜ್ಯಪಾಲರ ಗಮನಕ್ಕೆ ತಂದಿದೆ. ಇನ್ನೊಂದೆಡೆ, ಕಾಂಗ್ರೆಸ್ ಈಗಾಗಲೇ ಪರಿಷತ್ ಸಭಾಪತಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮುಂದುವರಿದಿದೆ ಎಂಬ ವರದಿಗಳಿವೆ. ಹಿರಿಯ ಕಾಂಗ್ರೆಸ್ ನಾಯಕ ಸಲೀಂ ಅಹದ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಹೊರಟ್ಟಿ ರಾಜೀನಾಮೆ ನೀಡಿರುವುದರಿಂದ ಈ ನೇಮಕಾತಿ ಪ್ರಕ್ರಿಯೆಗೆ ರಾಜಕೀಯವಾಗಿ ವೇಗ ಸಿಗುವ ಸಾಧ್ಯತೆ ಇದೆ.
