ಬೆಂಗಳೂರು, ಆ.9-ಬಿಡದಿ ಉಪನಗರ ಯೋಜನೆ ವಿರೋಧಿಸಿ 500 ದಿನಗಳಿಗೂ ಹೆಚ್ಚು ಕಾಲದಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿಂದು ಪಾದಯಾತ್ರೆ ಆರಂಭವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ 38 ಕಿ.ಮೀ. ಪಾದಯಾತ್ರೆಯನ್ನು ಬೈರಮಂಗಲದಲ್ಲಿ ತೆಂಗಿನ ಗಿಡಕ್ಕೆ ನಿಖಿಲ್ ಕುಮಾರಸ್ವಾಮಿ ಪೂಜೆ ಸಲ್ಲಿಸಿ, ನೀರೆರೆದು ಪ್ರಾರಂಭಿಸಿದರು. ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಾಂಕೇತಿಕವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದೇವೆ ಎಂದು ಘೋಷಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ಬಾಬು, ಸಂಸದ ಮಲ್ಲೇಶ್ಬಾಬು, ಶಾಸಕರಾದ ಎ.ಮಂಜು, ಹರೀಶ್ಗೌಡ, ಶಾರದ ಪೂರ್ಯನಾಯಕ್, ಕರೆಮ ಜಿ.ನಾಯಕ್, ಮಾಜಿ ಶಾಸಕ ಎ.ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಜಯಮುತ್ತು ಸೇರಿದಂತೆ ಬಿಜೆಪಿ, ಜೆಡಿಎಸ್ನ ಹಲವು ಮುಖಂಡರು ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು.
ಬೈರಮಂಗಲದಿಂದ ಆರಂಭವಾದ ಪಾದಯಾತ್ರೆಯಲ್ಲಿ ಸಾವಿರಾರು ರೈತರು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಘೋಷಣಾ ಫಲಕಗಳನ್ನು ಪ್ರದರ್ಶಿ ಬಿಡದಿ ಉಪನಗರ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸುತ್ತಾ ಹೆಜ್ಜೆ ಹಾಕಿದರು. ರೈತರು ಹಸಿರು ಶಾಲು, ಹಸಿರು ಟೋಪಿ ಹಾಕಿದ್ದರೆ, ಕಾರ್ಯಕರ್ತರು ಕೈಯಲ್ಲಿ ಜೆಡಿಎಸ್, ಬಿಜೆಪಿ ಭಾವುಟ ಹಿಡಿದು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಪಾದಯಾತ್ರೆಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ರೈತರು, ರೈತ ಮಹಿಳೆಯರು ಉಪನಗರ ಯೋಜನೆ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಬಿಡದಿ ಉಪನಗರ ಯೋಜನೆ ಕೈಬಿಡುವಂತೆ ಆಗ್ರಹಿಸಿ ಬೈರಮಂಗಲದಿಂದ ಆರಂಭವಾಗಿರುವ ಪಾದಯಾತ್ರೆಯು ಆ.11ರಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾರೋಪಗೊಳ್ಳಲಿದೆ. ಅಂದು ಮಧ್ಯಾಹ್ನ ಬಹಿರಂಗ ಸಮಾವೇಶದ ಮೂಲಕ ಪಾದಯಾತ್ರೆಗೆ ತೆರೆ ಬೀಳಲಿದೆ.
ಬೈರಮಂಗಲದಿಂದ ಆರಂಭವಾದ ಪಾದಯಾತ್ರೆಯು ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ತಿಮೇಗೌಡನದೊಡ್ಡಿ, ವೃಷಭಾವತಿಪುರ, ಅಬ್ಬನಕುಪ್ಪೆ, ಜೋಗರದೊಡ್ಡಿಯವರೆಗೆ ಸಾಗಿತು. ಮಧ್ಯಾಹ್ನದ ನಂತರ ಜೋಗರದೊಡ್ಡಿ, ಮೇಡನಹಳ್ಳಿ, ಬೈರಮಗಂಲ ಕ್ರಾಸ್, ಬಿಜಿಎಸ್ ವೃತ್ತದ ಮೂಲಕ ಸಂಜೆ ವೇಳೆಗೆ ಬಿಡದಿ ತಲುಪಲಿದೆ. ಇಂದು ರಾತ್ರಿ ಬಿಡದಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ದೇವೇಗೌಡರಿಂದ ಚಾಲೆ : ಜೆಡಿಎಸ್ನ ಎರಡನೇ ದಿನದ ಪಾದಯಾತ್ರೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಾಳೆ ಬಿಡದಿಯಲ್ಲಿ ಚಾಲನೆ ನೀಡಲಿದ್ದಾರೆ. ನಾಳೆ ಬಿಡದಿಯಿಂದ ಆರಂಭವಾಗುವ ಪಾದಯಾತ್ರೆಯು ನೈಸ್ ರಸ್ತೆ ಜಂಕ್ಷನ್ವರೆಗೂ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗಲಿದೆ. ಮಂಗಳವಾರ ನೈಸ್ರಸ್ತೆ ಜಂಕ್ಷನ್ನಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ಪಾದಯಾತ್ರೆ ಸಾಗಲಿದೆ.

ಬಿಡದಿ ಉಪನಗರ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಈಗಾಗಲೇ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ, ಪಾದಯಾತ್ರೆಯಲ್ಲಿ ಭಾಗವಹಿಸಿತ್ತು. ಹೋರಾಟ ನಡೆಸುತ್ತಿರುವ ರೈತರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದೆ.
