Homeರಾಜ್ಯಬಿಡದಿ ಪಾದಯಾತ್ರೆ ರೈತರ ಸಮಸ್ಯೆಯ ಪರಿಹಾರದ ದಿಕ್ಸೂಚಿ : ಎಚ್.ಡಿ.ಕುಮಾರಸ್ವಾಮಿ

ಬಿಡದಿ ಪಾದಯಾತ್ರೆ ರೈತರ ಸಮಸ್ಯೆಯ ಪರಿಹಾರದ ದಿಕ್ಸೂಚಿ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಆ.9- ಬೈರಮಂಗಲದಿಂದ ಕೈಗೊಂಡಿರುವ ಬಿಡದಿ ಟೌನ್ಶಿಪ್ ವಿರೋಧಿಸುವ ಪಾದಯಾತ್ರೆಯು ರೈತಪರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ದಿಕ್ಸೂಚಿಯಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಬೈರಮಂಗಲದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಬ್ರಹಾಂಡ ಭ್ರಷ್ಟಾಚಾರದ ಸರ್ಕಾರ ಕಿತ್ತೊಗೆಯಲು ಫೌಂಡೇಷನ್ ಹಾಕಿದ್ದೀರಿ ಎಂದರು.

ಇದುರೆಗೂ ಒಂದು ಎಕರೆಗೆ 2 ಕೋಟಿ ರೂ. ಕೊಡುವುದಾಗಿ ಹೇಳುತ್ತಿದ್ದರು. ಮುಖ್ಯಮಂತ್ರಿ ನೀಡಿರುವ ಸಂದೇಶದಲ್ಲಿ ಒಂದು ಎಕರೆಗೆ 3 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ನೀವು ಮರುಳಾಗಬೇಡಿ. ಬಿಎಂಐಸಿ ಯೋಜನೆಗೆ ಭೂಸ್ವಾಧೀನ ಮಾಡಿಕೊಂಡು 30 ವರ್ಷ ಕಳೆದರೂ ಅವರಿಗೆ ಭೂ ಪರಿಹಾರ ಕೊಟ್ಟಿಲ್ಲ, ನಿವೇಶನವನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದರು. ಭೂಸ್ವಾದೀನ ಮಾಡಿಕೊಳ್ಳುವ ಜಮೀನಿಗೆ ಒಂದು ಎಕರೆಗೆ 3 ಕೋಟಿ ರೂ. ಕೊಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯಾವ ಆಧಾರದ ಮೇಲೆ ಹೇಳಿದ್ದಾರೆ. ಇದೇನು ಚೌಕಾಸಿ ವ್ಯಾಪಾರವೇ? ಎಂದು ಪ್ರಶ್ನಿಸಿದರು.

ನಾನು ಮುಖ್ಯಮಂತ್ರಿ ಯಾಗಿದ್ದಾಗ ಅಥವಾ ಬಿಜೆಪಿ ಸರ್ಕಾರದ ಅಧಿಕಾರದಲ್ಲಿದ್ದಾಗ ಬಿಡದಿ ಉಪನಗರ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರವೇ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿಯವರ ಸಂದೇಶದಲ್ಲಿ ವಿದೇಶಗಳಂತೆ ರಸ್ತೆ, ಬೃಹತ್ ಕಾರ್ಖಾನೆ, ಉದ್ಯೋಗ ನಿರ್ಮಿಸಿ ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದಾರೆ. ಇದನ್ನು ನಂಬಬೇಕೇ? ಎಂದು ಪ್ರಶ್ನಿಸಿದ ಅವರು, ಕನಕಪುರದಲ್ಲಿ ದಲಿತರ ಭೂಮಿಯನ್ನು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು.

ಬಿಡದಿ ಟೌನ್ಶಿಪ್ ಭಾಗದಲ್ಲಿ 6 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಜೊತೆಗೆ ರೇಷೆ, ಮಾವು, ಅಡಿಕೆ, ತೆಂಗು ಎಲ್ಲವೂ ಇದೆ. ಇಂತಹ ಭೂಮಿಯನ್ನು ಅವರೇ ನೀಡಿದ್ದ ಸತ್ಯಶೋಧನಾ ಸಮಿತಿ ವರದಿಗೆ ವಿರುದ್ಧವಾಗಿ ಟೌನ್ಶಿಪ್ ಮಾಡಲು ಹೊರಟಿದ್ದಾರೆ. ಪಿತ್ರಾರ್ಜಿತ ಆಸ್ತಿ ಹಾಗೂ ಭೂಮಿಯನ್ನೇ ನಂಬಿ ಬದುಕುತ್ತಿರುವ ರೈತರ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ. ಎರಡೂ ಪಕ್ಷಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ವ್ಯಕ್ತಪಡಿಸಿವೆ ಎಂದರು.

ಸರ್ಕಾರದ ಕರಾರು ಭೂಮಿಗೆ 15 ವರ್ಷಗಳ ಹಿಂದೆ ಒಂದು ಎಕರೆಗೆ 12 ಕೋಟಿ ರೂ. ನಿಗದಿಪಡಿಸಿ 948 ಕೋಟಿ ರೂ. ಪಾವತಿಸುವಂತೆ ಈಗಲ್ಟನ್ಗೆ ಸೂಚಿಸಲಾಗಿತ್ತು. ಈಗ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮತಿಯನ್ನು ನೇಮಕ ಮಾಡಿದೆ ಎಂದು ಅವರು ಟೀಕಿಸಿದರು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಬಿಡದಿ ಮಣ್ಣಿನಲ್ಲಿ ರೈತರ ಭಾವನೆ ಅಡಗಿದೆ. ಅವರ ಭಾವನೆಗಳಿಗೆ ಬೆಲೆ ನೀಡುವ ನಿಟ್ಟಿನಲ್ಲಿ ಈ ಪಾದಯಾತ್ರೆಗೆ ಕೈಗೊಂಡಿದ್ದೇವೆ. ಜೊತೆಗೆ ಕಾನೂನಾತಕ ಹೋರಾಟವನ್ನೂ ಮಾಡುತ್ತಿದ್ದೇವೆ. ರೈತರ ಅಸ್ತಿತ್ವವನ್ನು ಉಳಿಸಲು ನಮ ಹೋರಾಟ ಮತ್ತು ಸರ್ಕಾರ ಬಿಡದಿ ಟೌನ್ಶಿಪ್ ನಿಲ್ಲಿಸುವವರೆಗೆ ನಮ ಹೋರಾಟ ನಡೆಯಲಿದೆ ಎಂದು ರೈತರಿಗೆ ಭರವಸೆ ನೀಡಿದರು.

RELATED ARTICLES
spot_img

Latest News