ನವದೆಹಲಿ,ಆ.10-ಕರ್ನಾಟಕದಿಂದ ತಮಿಳುನಾಡಿಗೆ ಸೇರಬೇಕಾದ ಕಾವೇರಿ ನೀರಿನ ಪಾಲನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 13ರಂದು ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ಗುರುವಾರದ ವಿಚಾರಣಾ ಪಟ್ಟಿಗೆ ಸೇರಿಸಲು ಸೋಮವಾರ ಒಪ್ಪಿಗೆ ನೀಡಿದೆ.
ತಮಿಳುನಾಡು ಸರ್ಕಾರದ ವಾದದ ಪ್ರಕಾರ, ಪ್ರಸಕ್ತ ಮಳೆ ಕೊರತೆಯ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಕಾವೇರಿ ನೀರಿನ ತನ್ನ ಪಾಲು ಸಮರ್ಪಕವಾಗಿ ದೊರೆಯುತ್ತಿಲ್ಲ. ಕರ್ನಾಟಕವು ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನಗಳನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂಬುದು ತಮಿಳುನಾಡಿನ ಪ್ರಮುಖ ಆರೋಪವಾಗಿದೆ.
ಜುಲೈ 28ರಂದು ನಡೆದ ಅಖಅ ಸಭೆಯಲ್ಲಿ, ಜುಲೈ 29ರಿಂದ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 3,500 ಕ್ಯೂಸೆಕ್ ನೀರು ಲಭ್ಯವಾಗುವಂತೆ ಕರ್ನಾಟಕದಿಂದ ನೀರು ಬಿಡುಗಡೆ ಮಾಡಲು ನಿರ್ದೇಶಿಸಲಾಗಿತ್ತು. ನಂತರ ಅಒಂ ಕೂಡ ಈ ಶಿಫಾರಸನ್ನು ಅನುಮೋದಿಸಿತ್ತು.
ಆದರೆ, ತಮಿಳುನಾಡಿನ ಅರ್ಜಿಯ ಪ್ರಕಾರ ಜುಲೈ 29ರಿಂದ ಆಗಸ್ಟ್ 2ರವರೆಗೆ ಬಿಳಿಗುಂಡ್ಲುವಿನಲ್ಲಿ ದಾಖಲಾಗಿದ್ದ ನೀರಿನ ಹರಿವು ಕೇವಲ 158ರಿಂದ 550 ಕ್ಯೂಸೆಕ್ ವ್ಯಾಪ್ತಿಯಲ್ಲಿತ್ತು. ಇದರಿಂದ ನಿಗದಿತ ಪ್ರಮಾಣ ಮತ್ತು ವಾಸ್ತವಿಕ ಹರಿವಿನ ನಡುವೆ ದೊಡ್ಡ ಅಂತರ ಉಂಟಾಗಿದೆ ಎಂದು ತಮಿಳುನಾಡು ವಾದಿಸಿದೆ.
ತಮಿಳುನಾಡು ಸರ್ಕಾರವು ಆಗಸ್ಟ್ 3ರಂದು ಸುಪ್ರೀಂ ಕೋರ್ಟ್ ಮೊರೆ ಹೋಗಿ, ಕರ್ನಾಟಕಕ್ಕೆ ತಕ್ಷಣವೇ ನಿಗದಿತ ನೀರನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿತ್ತು. ತಮಿಳುನಾಡು ಸರ್ಕಾರದ ಹೇಳಿಕೆಯ ಪ್ರಕಾರ, ಆಗಸ್ಟ್ 3ರಂದು ಕರ್ನಾಟಕದ ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಒಟ್ಟು ಸುಮಾರು 77.537 ಟಿಎಂಸಿ ನೀರು ಸಂಗ್ರಹವಿತ್ತು.
ಇದರ ಆಧಾರದ ಮೇಲೆ ತಮಿಳುನಾಡು, ತನ್ನ ಪಾಲಿನ ನೀರನ್ನು ಪ್ರಮಾಣಾನುಪಾತದ ಆಧಾರದ ಮೇಲೆ ಬಿಡುಗಡೆ ಮಾಡಲು ಕರ್ನಾಟಕಕ್ಕೆ ನೀರಿನ ಲಭ್ಯತೆ ಇದೆ ಎಂದು ವಾದಿಸಿದೆ. ಇತ್ತೀಚಿನ ಮಳೆಯ ಹಿನ್ನೆಲೆಯಲ್ಲಿ ಬಿಳಿಗುಂಡ್ಲುವಿನಲ್ಲಿ ಲಭ್ಯವಾಗಬೇಕಾದ ನೀರಿನ ಪ್ರಮಾಣ 26.954 ಟಿಎಂಸಿ ಇರಬೇಕಿತ್ತು ಎಂಬುದು ತಮಿಳುನಾಡಿನ ಮತ್ತೊಂದು ವಾದ.
ಇದಕ್ಕೆ ವಿರುದ್ಧವಾಗಿ ಕರ್ನಾಟಕವು ಮಳೆ ಕೊರತೆ, ತನ್ನ ಜಲಾಶಯಗಳ ಸ್ಥಿತಿ ಹಾಗೂ ರಾಜ್ಯದ ಸ್ವಂತ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಮುಂದಿಟ್ಟುಕೊಂಡಿದೆ. ಜುಲೈ ಅಂತ್ಯ ಮತ್ತು ಆಗಸ್ಟ್ ಆರಂಭದಲ್ಲಿ ಕರ್ನಾಟಕದಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಅಒಂ ಆದೇಶವನ್ನು ಪೂರ್ಣವಾಗಿ ಪಾಲಿಸುವತ್ತ ಸರ್ಕಾರ ಮುಂದಾಗಿತ್ತು ಎಂಬ ವರದಿಗಳೂ ಬಂದಿವೆ. ಆಗಸ್ಟ್ 4ರಂದು ಕರ್ನಾಟಕ ಸರ್ಕಾರ ಆಗಸ್ಟ್ 7ರೊಳಗೆ ಪ್ರತಿದಿನ 3,500 ಕ್ಯೂಸೆಕ್ ಬಿಡುಗಡೆ ಆದೇಶವನ್ನು ಸಂಪೂರ್ಣವಾಗಿ ಪಾಲಿಸುವ ಗುರಿ ಹೊಂದಿದೆ ಎಂದು ವರದಿಯಾಗಿತ್ತು.
ಪ್ರಸ್ತುತ ಸಂಘರ್ಷ ಏಕಾಏಕಿ ಆರಂಭವಾದದ್ದಲ್ಲ. ಜೂನ್ 1ರಿಂದ ಜುಲೈ 22ರವರೆಗೆ ತಮಿಳುನಾಡಿಗೆ ಸುಮಾರು 3.5 ಟಿಎಂಸಿ ನೀರು ಮಾತ್ರ ಬಂದಿದ್ದು, ನಿಗದಿತ ಪ್ರಮಾಣ ಸುಮಾರು 31 ಟಿಎಂಸಿ ಆಗಿತ್ತು ಎಂದು ಜುಲೈನಲ್ಲಿ ವರದಿಯಾಗಿತ್ತು. ಇದರಿಂದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದರು. ಆದರೆ ನೀರು ಬಿಡುಗಡೆ ವಿಚಾರದಲ್ಲಿ ನಿರೀಕ್ಷಿತ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ತಮಿಳುನಾಡು ಕಾನೂನು ಹೋರಾಟದತ್ತ ಮುಂದಾಗಿದೆ.
ಆಗಸ್ಟ್ 13: ಮುಂದೇನು? ಈಗ ಎಲ್ಲರ ಗಮನ ಆಗಸ್ಟ್ 13ರ ಸುಪ್ರೀಂಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ತಮಿಳುನಾಡು ಮುಖ್ಯವಾಗಿ ಮೂರು ಅಂಶಗಳನ್ನು ನ್ಯಾಯಾಲಯದ ಮುಂದೆ ಮುಂದಿಡುವ ಸಾಧ್ಯತೆ ಇದೆ.ಅಖಅ ಮತ್ತು ಅಒಂ ನಿಗದಿಪಡಿಸಿದ 3,500 ಕ್ಯೂಸೆಕ್ ದೈನಂದಿನ ಹರಿವನ್ನು ಕರ್ನಾಟಕ ಸಂಪೂರ್ಣವಾಗಿ ಪಾಲಿಸಬೇಕು.
ಈಗಾಗಲೇ ಉಂಟಾಗಿರುವ ನೀರಿನ ಕೊರತೆಯನ್ನು ಮುಂದಿನ ಬಿಡುಗಡೆಗಳಲ್ಲಿ ಸರಿದೂಗಿಸಬೇಕು.ಮಳೆ ಕೊರತೆಯ ಪರಿಸ್ಥಿತಿಯಲ್ಲಿ ಕಾವೇರಿ ನೀರಿನ ಹಂಚಿಕೆಯನ್ನು ಅನುಪಾತದ/ಸಂಕಷ್ಟ ಹಂಚಿಕೆ ತತ್ವದಂತೆ ಜಾರಿಗೊಳಿಸಬೇಕು.
ತಮಿಳುನಾಡಿನ ಅರ್ಜಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಹಿಂದಿನ ಕೊರತೆಯನ್ನು ಸರಿದೂಗಿಸಲು ಹೆಚ್ಚಿನ ಪ್ರಮಾಣದ ನೀರು ಹರಿಸುವಂತೆ ನಿರ್ದೇಶನ ನೀಡಬೇಕು ಎಂಬ ಮನವಿಯೂ ಇದೆ.ಇತ್ತ ಕರ್ನಾಟಕದ ವಾದವು ಜಲಾಶಯಗಳಲ್ಲಿನ ವಾಸ್ತವಿಕ ಸಂಗ್ರಹ, ಮಳೆ ಪ್ರಮಾಣ, ಒಳಹರಿವು, ರಾಜ್ಯದ ಕುಡಿಯುವ ನೀರಿನ ಅಗತ್ಯ ಮತ್ತು ಸಂಕಷ್ಟ ಪರಿಸ್ಥಿತಿಯಲ್ಲಿ ಎರಡೂ ರಾಜ್ಯಗಳಿಗೂ ಅನ್ವಯಿಸುವ ಹಂಚಿಕೆ ತತ್ವಗಳ ಸುತ್ತ ಕೇಂದ್ರೀಕೃತವಾಗುವ ನಿರೀಕ್ಷೆಯಿದೆ.
ಕೇವಲ ನೀರು ಬಿಡುಗಡೆ ಪ್ರಶ್ನೆಯಲ್ಲ:
ಆಗಸ್ಟ್ 13ರ ವಿಚಾರಣೆಯ ಮಹತ್ವವು ಕೇವಲ 3,500 ಕ್ಯೂಸೆಕ್ ನೀರು ಹರಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆಗೆ ಸೀಮಿತವಾಗಿಲ್ಲ. 2018ರಲ್ಲಿ ಅಂತಿಮಗೊಳಿಸಲಾದ ಹಂಚಿಕೆ ವ್ಯವಸ್ಥೆಯನ್ನು ಮಳೆ ಕೊರತೆಯ ವರ್ಷದಲ್ಲಿ ಹೇಗೆ ಅನುಷ್ಠಾನಗೊಳಿಸಬೇಕು, ಸಿಡಬಲ್ಯುಆರ್‌ಸಿ-ಸಿಡಬ್ಲ್ಯುಎಂಎ ಆದೇಶಗಳ ಪಾಲನೆ ಹೇಗೆ ಖಚಿತಪಡಿಸಬೇಕು? ಈಗಾಗಲೇ ಉಂಟಾದ ಕೊರತೆಯನ್ನು ಹೇಗೆ ಲೆಕ್ಕ ಹಾಕಬೇಕು ಎಂಬ ಪ್ರಶ್ನೆಗಳೂ ನ್ಯಾಯಾಲಯದ ಮುಂದೆ ಬರಲಿವೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕ ಮತ್ತು ತಮಿಳುನಾಡಿನ ರಾಜಕೀಯವನ್ನು ಪ್ರಭಾವಿಸಿರುವ ಕಾವೇರಿ ವಿವಾದವು ಮತ್ತೊಮೆ ನ್ಯಾಯಾಂಗದ ಬಾಗಿಲಿಗೆ ತಲುಪಿದೆ. 2018ರ ತೀರ್ಪಿನ ನಂತರ ವಿವಾದಕ್ಕೆ ಶಾಶ್ವತ ಕಾನೂನು ಚೌಕಟ್ಟು ರೂಪುಗೊಂಡಿದ್ದರೂ, ಮಳೆ ಬದಲಾವಣೆ, ಜಲಾಶಯಗಳ ಸಂಗ್ರಹ ಮತ್ತು ಸಂಕಷ್ಟ ಹಂಚಿಕೆಯ ಅನುಷ್ಠಾನ ಪ್ರತಿವರ್ಷವೂ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 13ರಂದು ಸುಪ್ರೀಂಕೋರ್ಟ್ ನೀಡುವ ನಿರ್ದೇಶನವು ಪ್ರಸಕ್ತ ನೀರು ಬಿಡುಗಡೆಗೆ ಮಾತ್ರವಲ್ಲದೆ, ಈ ವರ್ಷದ ಉಳಿದ ಕಾವೇರಿ ನೀರು ಹಂಚಿಕೆ ಪ್ರಕ್ರಿಯೆಗೂ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿದೆ.
