Homeರಾಜ್ಯ'ಅಭಿರುದ್ಧಿ' ಕಾರ್ಯಗಳನ್ನು ಮಾಡಲು ಕಾಯುತ್ತಿರುವ ನೂತನ ಸಚಿವರಿಗೆ ಇನ್ನೂ ಸಿಕ್ಕಿಲ್ಲ 'ಖಾತೆ ಭಾಗ್ಯ'

‘ಅಭಿರುದ್ಧಿ’ ಕಾರ್ಯಗಳನ್ನು ಮಾಡಲು ಕಾಯುತ್ತಿರುವ ನೂತನ ಸಚಿವರಿಗೆ ಇನ್ನೂ ಸಿಕ್ಕಿಲ್ಲ ‘ಖಾತೆ ಭಾಗ್ಯ’

New minister has not yet been given a portfolio.

ಬೆಂಗಳೂರು, ಆ.10- ಸಂಪುಟದ ನೂತನ ಸಚಿವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಖಾತೆ ಹಂಚಿಕೆ ಮಾಡಲಿದ್ದು, ಹಾಲಿ ಸಚಿವರ ಪೈಕಿ ಕೆಲವರ ಖಾತೆಗಳು ಅದಲು-ಬದಲಾಗಲಿವೆ. ಆಗಸ್ಟ್‌ 3ರಂದು ಸಂಪುಟ ವಿಸ್ತರಣೆಯಾಗಿದ್ದು, 8 ದಿನ ಕಳೆದರೂ, ಖಾತೆ ಇಲ್ಲದೆ ಸಚಿವರು ಜಿಲ್ಲೆಗಳಲ್ಲಿ ಬರ ಅಧ್ಯಯನದ ಪ್ರವಾಸ ಮಾಡುತ್ತಿದ್ದಾರೆ. ವಿಧಾನಮಂಡಲ ಅಧಿವೇಶನಕ್ಕೆ ಮೂರು ದಿನ ಮಾತ್ರ ಬಾಕಿಯಿದ್ದು, ಖಾತೆಗಳ ಮಾಹಿತಿ ತಿಳಿಯದೆ ನೂತನ ಸಚಿವರು ಗೊಂದಲದಲ್ಲಿದ್ದಾರೆ.

ನಿನ್ನೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಡರಾತ್ರಿ ಒಂದು ಗಂಟೆಯವರೆಗೂ ಪಕ್ಷದ ವರಿಷ್ಠರನ್ನೂ ಭೇಟಿ ಮಾಡಿ, ಖಾತೆ ಹಂಚಿಕೆ ಕುರಿತು ಚರ್ಚೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಕಾಂಗ್ರೆಸ್‌‍ನ ಉಸ್ತುವಾರಿ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ನಿನ್ನೆ ತಡರಾತ್ರಿಯೇ ಭೇಟಿ ಮಾಡಿ ಚರ್ಚೆ ನಡೆಸಿರುವ ಡಿ.ಕೆ.ಶಿವಕುಮಾರ್‌ ಅವರು, ಇಂದು ಬೆಳಗ್ಗೆ ಕೆ.ಸಿ ವೇಣುಗೋಪಾಲ್‌ ಅವರ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.

ಖಾತೆ ಹಂಚಿಕೆ, ವಿಧಾನಸಭೆ, ವಿಧಾನ ಪರಿಷತ್ತಿನ ಅಧ್ಯಕ್ಷರ ಆಯ್ಕೆ ಸಂಪುಟದಲ್ಲಿ ಖಾಲಿಯಿರುವ ಒಂದು ಸ್ಥಾನಕ್ಕೆ ನೇಮಕಾತಿ ಮತ್ತು ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಈ ಮೊದಲು ಜಿ.ಎಸ್‌‍.ಪಾಟೀಲ್‌ ಅವರನ್ನು ಅಧ್ಯಕ್ಷರೆಂದು ಘೋಷಿಸಲಾಗಿತ್ತು. ಆದರೆ ಟಿ.ಬಿ.ಜಯಚಂದ್ರ ಅವರನ್ನು ಸಮಾಧಾನ ಪಡಿಸಲು ವಿಧಾನಸಭೆಯ ಅಧ್ಯಕ್ಷ ಸ್ಥಾನ ನೀಡುವ ಚರ್ಚೆಗಳಾಗಿವೆ. ಜಿ.ಎಸ್‌‍.ಪಾಟೀಲ್‌ ಅವರನ್ನು ಸಮಾಧಾನ ಪಡಿಸುವ ಹೊಣೆಗಾರಿಕೆಯನ್ನು ಎಚ್‌.ಕೆ.ಪಾಟೀಲ್‌ ಅವರಿಗೆ ವಹಿಸಲಾಗುತ್ತಿದೆ.
ಸಚಿವ ಸಂಪುಟದ ಖಾತೆ ಹಂಚಿಕೆ ಬಗ್ಗೆ ಹೈಕಮಾಂಡ್‌ ನಾಯಕರು ಡಿ.ಕೆ.ಶಿವಕುಮಾರ್‌ ಅವರಿಗೆ ಕೆಲ ನಿರ್ದೇಶನಗಳನ್ನು ನೀಡಿದ್ದು, ಪ್ರಸ್ತಾವಿತ ಪಟ್ಟಿಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ರಾಮಲಿಂಗಾರೆಡ್ಡಿಯವರಿಗೆ ಜಲ ಸಂಪನೂಲ ಬದಲಾಗಿ ವಸತಿ ಖಾತೆ ನೀಡುವ ಸಾಧ್ಯತೆ ಇದೆ. ಸಚಿವ ಕೆ.ಎಚ್‌.ಮುನಿಯಪ್ಪ ತಮಗೆ ಆಹಾರ ಮತ್ತು ನಾಗರಿಕ ಪೂರೈಕೆ ಬೇಡ, ಸಮಾಜ ಕಲ್ಯಾಣ ಇಲಾಖೆ ಬೇಕು ಎಂದು ಪಟ್ಟು ಹಿಡಿದಿದ್ದರು. ಡಿ.ಕೆ.ಶಿವಕುಮಾರ್‌ ಅವರ ಜೊತೆ ಮುನಿಯಪ್ಪ ದೆಹಲಿಗೂ ತೆರಳಿದ್ದರು. ಸಮಾಜ ಕಲ್ಯಾಣ ಇಲಾಖೆಯ ಮೇಲೆ ಕಣ್ಣಿಟ್ಟಿರುವ ಪಿ.ಎಂ.ನರೇಂದ್ರ ಸ್ವಾಮಿ, ಶಿವರಾಜ್‌ ತಂಗಡಗಿ ಅವರು ಕೂಡ ದೆಹಲಿ ಪ್ರವಾಸದಲ್ಲಿ ಮುಖ್ಯಮಂತ್ರಿಯವರ ಜೊತೆಗಿದ್ದರು.

ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡಲು ಮುನಿಯಪ್ಪ ಅವರ ಪುತ್ರಿ ರೂಪಕಲಾ ಅವರನ್ನು ಹೈಕಮಾಂಡ್‌ ಗುರುತಿಸಿದೆ. ಮುನಿಯಪ್ಪ ಅವರಿಗೆ ಸಚಿವ ಸ್ಥಾನ ತೊರೆದು ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವಂತೆ ಸಲಹೆ ನೀಡಲಾಗಿತ್ತು. ಮುನಿಯಪ್ಪ ಅವರಿಂದ ತೆರವಾದ ಸಚಿವ ಸ್ಥಾನಕ್ಕೆ ಪುತ್ರಿ ರೂಪಕಲಾ ಅವರನ್ನು ನಿಯೋಜಿಸುವುದಾಗಿ ಹೈಕಮಾಂಡ್‌ ಭರವಸೆ ನೀಡಿತ್ತು. ಆದರೆ ಮುನಿಯಪ್ಪ ಇದನ್ನು ತಳ್ಳಿ ಹಾಕಿದ್ದು, ಸಚಿವ ಸ್ಥಾನ ನಾನು ಬಿಡುವುದಿಲ್ಲ. ತಾವೇ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸಚಿವ ಸ್ಥಾನದಲ್ಲಿ ಮುಂದುವರೆಯುವುದಾದರೆ, ಸಮಾಜ ಕಲ್ಯಾಣ ಇಲಾಖೆ ಕೇಳಬಾರದು ಎಂದು ಷರತ್ತು ವಿಧಿಸಲಾಗಿದ್ದು, ಅದಕ್ಕೆ ಮುನಿಯಪ್ಪ ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ರಾಮಲಿಂಗಾರೆಡ್ಡಿಯವರ ಬಳಿ ಇರುವ ಜಲ ಸಂಪನೂಲ ಖಾತೆಯನ್ನು ಮುನಿಯಪ್ಪ ಅಥವಾ ಶಿವರಾಜ್‌ ತಂಗಡಗಿ ಅವರಿಗೆ ನೀಡುವ ಸಾಧ್ಯತೆ ಇದೆ.

ಎಚ್‌.ಸಿ.ಬಾಲಕೃಷ್ಣ ಅವರಿಗೆ ಅರಣ್ಯ, ಪರಿಸರ ಜೀವಶಾಸ್ತ್ರ ಖಾತೆ ನೀಡುವುದಾಗಿ ಹೇಳಲಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಉನ್ನತ ಶಿಕ್ಷಣ ಖಾತೆಗೆ ಅವರ ಹೆಸರು ಕೇಳಿ ಬರುತ್ತಿದೆ. ಲಕ್ಷ್ಮಣ ಸವದಿ ಅವರಿಗೆ-ಸಹಕಾರ, ವಿಜಯಾನಂದ ಕಾಶಪ್ಪನವರ್‌ -ಕೃಷಿ ಮಾರುಕಟ್ಟೆ, ಬಸವರಾಜ ರಾಯರೆಡ್ಡಿಯವರಿಗೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆ.ಎಸ್‌‍.ಬಸಂತಪ್ಪ ಅವರಿಗೆ- ಪೌರಾಡಳಿತ, ರುದ್ರಪ್ಪ ಲಮಾಣಿಗೆ-ಅಬಕಾರಿ, ಟಿ.ರಘುಮೂರ್ತಿಯವರಿಗೆ-ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ರಿಜ್ವಾನ್‌ ಅರ್ಷದ್‌ಗೆ- ಹಜ್‌ ಮತ್ತು ವಕ್ಫ್ , ಪುಟ್ಟರಂಗಶೆಟ್ಟಿ ಅವರಿಗೆ-ಹಿಂದುಳಿದ ವರ್ಗಗಳ ಕಲ್ಯಾಣ, ಅಜಯ್‌ ಸಿಂಗ್‌ಗೆ- ಆಹಾರ ಮತ್ತು ನಾಗರಿಕ ಪೂರೈಕೆ, ಸಂತೋಷ್‌ಲಾಡ್‌ಗೆ- ಕಾರ್ಮಿಕ ಸೇರಿದಂತೆ ಕೆಲ ಖಾತೆಗಳ ಹಂಚಿಕೆ ಕುರಿತು ಚರ್ಚೆಗಳಾಗಿವೆ.

ಉಳಿದಂತೆ ಚೆಲುವರಾಯಸ್ವಾಮಿಗೆ- ಕೃಷಿ, ಮಧುಬಂಗಾರಪ್ಪ ಅವರಿಗೆ-ಶಾಲಾ ಶಿಕ್ಷಣ, ಸಾಕ್ಷರತೆ, ಜಮೀರ್‌ ಅಹಮದ್‌ ಖಾನ್‌ಗೆ- ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.ಬಿ.ನಾಗೇಂದ್ರ ಅವರ ಪರಿಸ್ಥಿತಿ ಗೊಂದಲಕಾರಿಯಾಗಿದೆ. ಇಂದು ಸಂಜೆ ಒಳಗಾಗಿ ಮುಖ್ಯಮಂತ್ರಿಯವರು ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES
spot_img

Latest News