ಬೆಂಗಳೂರು, ಆ.10- ಖಾತೆ ಹಂಚಿಕೆಗಳ ಬಗ್ಗೆ ಮೌಖಿಕವಾಗಿ ಆದೇಶಗಳಾಗಿವೆ. ಅಧಿಕೃತ ಆದೇಶ ಶೀಘ್ರದಲ್ಲೇ ಹೊರ ಬೀಳಲಿದೆ ಎಂದು ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಕೆಲ ಭಾಗಗಳಲ್ಲಿ ಬರ ಅಧ್ಯಯನ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆಯಾಗದೇ ಇರುವುದರಿಂದ ಅಧಿವೇಶನದಲ್ಲಿ ತೊಂದರೆಯಾಗುತ್ತದೆ ಎಂಬ ನಿರೀಕ್ಷೆ ಬೇಡ. ನಾವು ಯಶಸ್ವಿಯಾಗಿ ಕಲಾಪ ನಡೆಸುತ್ತೇವೆ ಎಂದು ಹೇಳಿದರು.
ಸರ್ಕಾರದ ವ್ಯವಸ್ಥೆಯಲ್ಲಿ ಕೆಲಸ ಕಾರ್ಯಗಳಾಗುತ್ತಿವೆ. ಸರ್ಕಾರಿ ಅಧಿಕಾರಿಗಳಿಗೆ ವೇತನ ಹಾಗೂ ಇತರ ಸೌಲಭ್ಯಗಳು ದೊರೆಯುತ್ತಿವೆ. ಖಾತೆ ಹಂಚಿಕೆಯಾಗದೇ ಇರುವುದರಿಂದ ಯಾವುದೇ ತೊಂದರೆಯಾಗಿಲ್ಲ, ಕೆಲಸಗಳು ನಿಂತಿಲ್ಲ ಎಂದರು.
ಸಚಿವರಾಗುವ ಅರ್ಹತೆ ಇರುವ ನೂರಕ್ಕೂ ಹೆಚ್ಚು ಮಂದಿ ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಸಮಸ್ಯೆ ಬಗೆ ಹರಿಸುವುದು ಅಷ್ಟು ಸುಲಭವಲ್ಲ, 15-20 ಜನ ಸಚಿವರಾಗುವ ಸಾಮರ್ಥ್ಯ ಇರುವವರು ಗೆದ್ದು ಮುಖ್ಯಮಂತ್ರಿಯಾಗಿದ್ದರೆ, ಅದರ ಮಾತು ಬೇರೆ. ಈಗ ಅರ್ಹತೆ ಇರುವವರ ಸಂಖ್ಯೆ ಜಾಸ್ತಿ ಇದೆ. ಇದು ದೊಡ್ಡ ಸವಾಲು ಕೂಡ ಹೌದು ಎಂದರು.
ಅಧಿವೇಶನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ, ಖಾತೆಗಳ ಬಗ್ಗೆ ಮೌಖಿಕ ಮಾಹಿತಿ ಸಿಕ್ಕಿದೆ. ಅದಕ್ಕನುಗುಣವಾಗಿ ನಾವು ತಯಾರಿ ಮಾಡಿಕೊಂಡಿದ್ದೇವೆ ಎಂದರು.
ಸಚಿವ ಬಿ.ನಾಗೇಂದ್ರ ಅವರ ಷರತ್ತಿನ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಮಾತನಾಡುವಷ್ಟು ಕಾನೂನು ಪರಿಣತಿ ತಮಗಿಲ್ಲ. ಹೈಕಮಾಂಡ್ ಮತ್ತು ಮುಖ್ಯಮಂತ್ರಿಯವರು ಅದನ್ನು ಗಮನಿಸುತ್ತಾರೆ ಎಂದರು.
ಬಿಡದಿಯ ಟೌನ್‌ಶಿಪ್‌ನಲ್ಲಿ ಪ್ರತಿ ಎಕರೆಗೆ 3 ಕೋಟಿ ಕೊಡುವುದು ಹೇಗೆ ಸಾಧ್ಯ? ಮುಖ್ಯಮಂತ್ರಿಯವರು ತಮ ಮಾತಿನಲ್ಲಿ ಎರಡರಿಂದ ಮೂರು ಕೋಟಿ ನೀಡುವುದಾಗಿ ಹೇಳಿದ್ದಾರೆ. ಕೆಲವು ಜಾಗಗಳಲ್ಲಿ ಎರಡು ಕೋಟಿ ಸಿಗಬಹುದು, ಇನ್ನೂ ಕೆಲ ಕಡೆಗಳಲ್ಲಿ ಮೂರು ಕೋಟಿಯಾಗಬಹುದು. ಮರ ಹಾಗೂ ಇತರ ವಸ್ತುಗಳನ್ನು ಲೆಕ್ಕ ಹಾಕಿದರೆ ಮೂರೂವರೆ ಕೋಟಿಯಾಗಬಹುದು ಎಂದರು.
ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಬರ ಅಧ್ಯಯನ ಮಾಡುತ್ತೇವೆ. ಆರಂಭದ ಎರಡು, ಮೂರು ದಿನ ಅಸಮಾಧಾನಿತರ ಜೊತೆ ಮಾತುಕತೆಗೆ ಹೋಗಿದ್ದರಿಂದ ವಿಳಂಬವಾಯಿತು. ಇಂದಿನಿಂದ ಬರ ಅಧ್ಯಯನ ಮಾಡುತ್ತಿದ್ದು, ಚೆನ್ನಪಟ್ಟಣ, ಕನಕಪುರ, ಹಾರೋಹಳ್ಳಿ ನಾಳೆ ರಾಮನಗರ, ಮಾಗಡಿ ತಾಲ್ಲೂಕುಗಳಲ್ಲಿ ಅಧ್ಯಯನ ನಡೆಸುತ್ತೇನೆ ಎಂದರು.
ಬಿಡದಿ ಟೌನ್‌ಶಿಪ್ ವಿಚಾರವಾಗಿ ಜೆಡಿಎಸ್ ನಡೆಸುತ್ತಿರುವುದು ಪಾದಯಾತ್ರೆಯಲ್ಲ, ಪಶ್ಚಾತ್ತಾಪದ ಯಾತ್ರೆ. ಜೊತೆಗೆ ನಿಖಿಲ್ ಕುಮಾರ್ ಸ್ವಾಮಿಯವರ ಪಟ್ಟಾಭಿಷೇಕ ಯಾತ್ರೆ ಕೂಡ. ಅದರಲ್ಲಿ ಭಾಗವಹಿಸುವವರಿಗೆ ಯಾರಿಗೂ ಗಂಭೀರತೆ ಇಲ್ಲ, ರೈತರ ಪರ ಕಾಳಜಿಯೂ ಇಲ್ಲ. ಬಿಜೆಪಿಯವರಿಗೆ ಸತ್ಯ ಅರಿವಾಗಿದೆ. ಹೀಗಾಗಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ತಾವು ಸಚಿವರಾಗಿರುವುದಕ್ಕೆ ಕುಮಾರಸ್ವಾಮಿಯವರು ಲೇವಡಿ ಮಾಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದವರು ಈಗ ಕೇಂದ್ರ ಸಚಿವರಾಗಿದ್ದಾರೆ. ಸಚಿವ ಸ್ಥಾನ ಎಂಬುದು ಅವರಿಗೆ ಯಕಶ್ಚಿತ್ ಇರಬಹುದು. ಆದರೆ ನನಗೆ ದೊಡ್ಡದು. ಭಗವಂತ ಆಂಜನೇಯ ಸ್ವಾಮಿ ಕರುಣಿಸಿದ್ದಾನೆ. ಕುಮಾರಸ್ವಾಮಿ ಬೇರೆಯವರಿಗೆ ಪಟ್ಟಾಭಿಷೇಕ ಮಾಡುವುದಿಲ್ಲ, ತಮಗೆ ತಾವೇ ಮಾಡಿಕೊಳ್ಳುತ್ತಾರೆ ಎಂದರು.
ತಾವು ದಳದಲ್ಲಿದ್ದಾಗ ಸಚಿವರನ್ನಾಗಿ ಮಾಡಬಹುದಿತ್ತು, ಮಾಡಲಿಲ್ಲ. ಸಚಿವ ಸ್ಥಾನ ತಪ್ಪಿದ್ದಕ್ಕಾಗಿ ಕನಿಷ್ಠ ಬಿಡಿಎ ಅಧ್ಯಕ್ಷರನ್ನಾದರೂ ಮಾಡಿ ಎಂದು ಆಗಿನ ಸಚಿವರಾದ ಬಸವರಾಜ ಹೊರಟ್ಟಿ, ಚೆನ್ನಿಗಪ್ಪ, ಚೆಲುವರಾಯ ಸ್ವಾಮಿ ಸೇರಿದಂತೆ ಕೆಲವರು ಕುಮಾರಸ್ವಾಮಿ ಅವರ ಬಳಿ ಕೇಳಿದಾಗ, ದುಡ್ಡು ಹೊಡೆಯಲಿಕ್ಕೆ ಬಿಡಿಎ ಅಧ್ಯಕ್ಷ ಸ್ಥಾನ ಬೇಕೇ ಎಂದು ಕುಮಾರಸ್ವಾಮಿ ಕೇಳಿದ್ದರು. ಇಂತಹವರಿಂದ ಕಾರ್ಯಕರ್ತರು ಏನನ್ನು ನಿರೀಕ್ಷೆ ಮಾಡಬಹುದು? ಎಂದು ತಿರುಗೇಟು ನೀಡಿದರು.
ನಾನು ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ಶಾಸಕನಾಗಿದ್ದೇನೆ. ಜೊತೆಗೆ ಮುಖ್ಯಮಂತ್ರಿಯವರ ತವರು ಜಿಲ್ಲೆಯವನು. ಬೆಂಗಳೂರು ದಕ್ಷಿಣದಲ್ಲಿರುವುದು ಕೇವಲ ನಾಲ್ಕು ಕ್ಷೇತ್ರಗಳು. ಸಚಿವ ಸ್ಥಾನ ನೀಡಲೇ ಬೇಕು ಎಂದೇನೂ ಇಲ್ಲ. ಅಂತಹದರಲ್ಲೂ ತಮಗೆ ಅವಕಾಶ ನೀಡಿದ್ದಾರೆ. ಇದಕ್ಕಾಗಿ ಪಕ್ಷ ಹಾಗೂ ಮುಖ್ಯಮಂತ್ರಿಯವರಿಗೆ ಋಣಿಯಾಗಿದ್ಧೇನೆ ಎಂದರು.
ಕುಮಾರಸ್ವಾಮಿಯವರಿಗೆ ನನ್ನನ್ನು ಸ್ನೇಹಿತ ಎಂದು ಪರಿಗಣಿಸುವಂತೆ ನಾನೇನೂ ಅರ್ಜಿ ಹಾಕಿಲ್ಲ. ಗುಬ್ಬಿಯ ಎಸ್.ಆರ್.ಶ್ರೀನಿವಾಸ್ ಸ್ವಲ್ಪ ಹೊಗಳಿಕೆ ಮಾತುಗಳನ್ನಾಡಿದಾಕ್ಷಣ ಕುಮಾರಸ್ವಾಮಿ ಅಲ್ಲಿ ಅರ್ಜಿ ಹಾಕಿದ್ದಾರೆ. ಇನ್ನೂ ಮುಂದೆ ಅವರು ಯಾರಿಗೂ ಅರ್ಜಿ ಹಾಕುವುದು ಬೇಡ ಎಂದರು.
ಅಧಿಕಾರ ಸಿಗದೇ ಇದ್ದ ಮೇಲೆ ಜನರ ಕೆಲಸ ಮಾಡುವುದು ಹೇಗೆ? ಅವರ ನಡವಳಿಕೆ ಜೆಡಿಎಸ್ ಅಧಿಕಾರಕ್ಕೆ ಬರುವಂತಿರಲಿಲ್ಲ. ಅದಕ್ಕಾಗಿ ತಾವು ಆ ಪಕ್ಷ ಬಿಟ್ಟಿದ್ದಾಗಿ ಹೇಳಿದ ಬಾಲಕೃಷ್ಣ, ಹಡಗು ಮುಳುಗುತ್ತದೆ ಎಂದಾಗ ಹೋಗಿ ಬಿಜೆಪಿಯವರ ಜೊತೆ ಸೇರಿಕೊಂಡಿದ್ದಾರೆ. ಇಲ್ಲವಾದರೆ ಜೆಡಿಎಸ್ ಇರುತ್ತಿರಲಿಲ್ಲ ಎಂದರು.ಅಸಮಾಧಾನಿತ ಶಾಸಕರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆ ಎಂದು ಎಚ್.ಡಿ.ಕುಮಾರಸ್ವಾಮಿಯವರು ಹಗಲು ಕನಸು ಕಾಣುವುದು ಬೇಡ. ಅಂತಹ ಪರಿಸ್ಥಿತಿ ಇಲ್ಲ ಎಂದರು.
