ಬೆಂಗಳೂರು, ಆ.11- ಭ್ರಷ್ಟಾಚಾರದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜೀ ಇಲ್ಲ. ಬೋಗಸ್ ಬಿಲ್, ಡಬಲ್ ಬಿಲ್ಗಳು ಕಂಡು ಬಂದರೆ ಬಡಿದು ಹಾಕಿಬಿಡುತ್ತೇನೆ. ನನ್ನ ಬಗ್ಗೆ ಇನ್ನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘರ್ಜಿಸಿದ್ದಾರೆ.ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ನಿಂದ ರಾಜ್ಯಾದ್ಯಂತ 750 ಕೇಂದ್ರಗಳಲ್ಲಿನ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರೊಂದಿಗಿನ ಸಂವಾದದಲ್ಲಿ ಮಹತ್ವದ ಸಂದೇಶಗಳನ್ನು ರವಾನಿಸಿದ್ದಾರೆ.
ಸರ್ಕಾರದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಇನ್ನೂ ಮುಂದೆ ಪಂಚಾಯಿತಿ ಮಟ್ಟದ ಸಿಬ್ಬಂದಿಗಳಿಂದ ಮುಖ್ಯಮಂತ್ರಿಯವರೆಗೂ ಪ್ರತಿಯೊಬ್ಬರೂ ಎಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಕಲೆ ಹಾಕುವ ವ್ಯವಸ್ಥೆಯನ್ನು ರೂಪಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.
ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ಮಧ್ಯಾಹ್ನದ ಬಳಿಕ ಸಾರ್ವಜನಿಕರನ್ನು ಭೇಟಿಯಾಗಿ ಸಮಸ್ಯೆಗಳನ್ನು ಬಗೆ ಹರಿಸಬೇಕು. ಅರ್ಜಿಗಳನ್ನು ಸ್ವೀಕರಿಸಿ, ಇತ್ಯರ್ಥ ಪಡಿಸಿದ್ದೇವೆ ಎಂದರಷ್ಟೇ ಸಾಲದು, ಸಮಸ್ಯೆ ಬಗೆ ಹರಿದಿರಬೇಕು. ಜನರ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ದೊರಕಿಸಬೇಕು ಎಂದು ಹೇಳಿದರು.
ಭ್ರಷ್ಟಾಚಾರದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅಧಿಕಾರಿಗಳು ಸರಳತೆ ರೂಢಿಸಿಕೊಳ್ಳಬೇಕು. ಸಾರ್ವಜನಿಕರ ಜೊತೆ ಸೌಹಾರ್ದತೆಯಿಂದ ವರ್ತಿಸಬೇಕು. ಭ್ರಷ್ಟಾಚಾರಕ್ಕೆ ಪೂರ್ಣ ವಿರಾಮ ಹಾಕಬೇಕು. ಅಧಿಕಾರಿಗಳ ನಡವಳಿಕೆ ಶುದ್ಧವಾಗಿರಬೇಕು. ನನ್ನ ವಿರುದ್ಧವೂ ಕೆಲ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಅದ್ಯಾವುದಕ್ಕೂ ದಾಖಲೆಗಳಿಲ್ಲ ಎಂದರು.
ಪ್ರತಿಯೊಂದು ಯೋಜನೆ ಫಲಾನುಭವಿಯ ಮಾಹಿತಿ ಫೋಟೊ ಸಹಿತ ಲಭ್ಯವಿರಬೇಕು. ಕೆಲ ಎಂಜಿನಿಯರ್ಗಳು ಡಿ.ಕೆ.ಶಿವಕುಮಾರ್ ಮನೆಯಿಂದ ಲಕ್ಷ್ಮಣ ಸವದಿ ಮನೆಗೆ ರಸ್ತೆ ಅಭಿವದ್ಧಿ, ಲಕ್ಷ್ಮಣ ಸವದಿ ಮನೆಯಿಂದ ಡಿ.ಕೆ.ಶಿವಕುಮಾರ್ ಮನೆಗೆ ಮತ್ತೊಂದು ರಸ್ತೆ ಅಭಿವೃದ್ಧಿ ಎಂದು ಡಬಲ್ ಬಿಲ್, ಬೋಗಸ್ ಬಿಲ್ ತಯಾರು ಮಾಡುತ್ತಿದ್ದಾರೆ. ಇಂತಹ ಬೋಗಸ್ ಬಿಲ್, ಡಬಲ್ ಬಿಲ್ಗಳ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇನೆ. ನನ್ನ ವಿಚಾರ ಇನ್ನೂ ಗೊತ್ತಿಲ್ಲ, ಬಡಿದು ಹಾಕಿಬಿಡುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರ ತಡೆಯಲು ಮತ್ತು ಅಧಿಕಾರಿ ಸಿಬ್ಬಂದಿಗಳ ಚಲನಾವಲನಗಳ ಮೇಲೆ ನಿಗಾ ಇಡಲು ತಂತ್ರಜ್ಞಾನ ಬಳಸಿಕೊಳ್ಳಬೇಕು. ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ವ್ಯವಸ್ಥೆಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಕಂದಾಯ ಇಲಾಖೆಯಿಂದ ದಾಖಲೆಗಳನ್ನು ಕ್ರಮಬದ್ಧಗೊಳಿಸಬೇಕು.
ಅರೆ ನ್ಯಾಯಾಂಗದ ಸ್ಥಾನದಲ್ಲಿರುವ ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೇ ಆತಸಾಕ್ಷಿ ಅನುಗುಣವಾಗಿ ಉತ್ತಮ ಕೆಲಸ ಮಾಡಿ ಹುಷಾರಾಗಿರಿ ಎಂದು ಹೇಳಿದರು.ರಸ್ತೆ ಸುಧಾರಣೆ, ಸಾರ್ವಜನಿಕ ಸೌಲಭ್ಯಗಳು, ಹಸಿರು ಪರಿಸರ ರಕ್ಷಣೆ, ಬರ ನಿರ್ವಹಣೆ, ಪ್ರಕೃತಿವಿಕೋಪ ವಿಚಾರಗಳಲ್ಲಿ ತ್ವರಿತವಾಗಿ ಕೆಲಸ ಮಾಡಬೇಕು. ವಿಧಾನಸಭಾ ಅಧಿವೇಶನ ಬಳಿಕ ನಾನು ಪ್ರತಿ ಜಿಲ್ಲೆಗೂ ಭೇಟಿ ನೀಡುತ್ತೇನೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಟೀಂ ಕರ್ನಾಟಕದಂತೆ ಕೆಲಸ ಮಾಡಬೇಕು. ಸರ್ಕಾರಿ ವಾಹನಗಳ ಬಳಕೆಗೆ ಪ್ರಮಾಣಿತ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಮುಖ್ಯಮಂತ್ರಿ ಹೇಳಿದರು.
ಪಂಚಖಾತ್ರಿ ಯೋಜನೆಗಳನ್ನು ತ್ಯಾಗ ಮಾಡುವುದಾಗಿ ಸರ್ಕಾರಿ ನೌಕರರ ಪರವಾಗಿ ಸಂಘದ ಅಧ್ಯಕ್ಷ ಷಡಕ್ಷರಿ ಭರವಸೆ ನೀಡಿದ್ದಾರೆ. ಶಕ್ತಿ ಯೋಜನೆ ಫಲಾನುಭವಿಗಳಿಗೆ ಸಾರ್ಟ್ ಕಾರ್ಡ್ ಪರಿಚಯಿಸಲಾಗುವುದು. ರಾಜ್ಯದ ಮತದಾರರಲ್ಲದವರಿಗೆ ಸೌಲಭ್ಯ ನೀಡುವುದು ಸರಿಯಲ್ಲ. ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟವರ ಹೆಸರಿಗೂ ಹಣ ಪಾವತಿಯಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಚಿವರು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜನ ಸಂಪರ್ಕ ಸಭೆ ನಡೆಸಬೇಕು. ಶಾಸಕರು, ಸಚಿವರು ತಾಲ್ಲೂಕು ಮತ್ತು ಹೋಬಳ್ಳಿ ಮಟ್ಟದಲ್ಲೂ ಜನ ಸಂಪರ್ಕ ಸಭೆಗಳನ್ನು ನಡೆಸಬೇಕು. ವಿಬಿ-ಜಿರಾಮ್ಜಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಬೇಕು ಎಂದು ಹೇಳಿದರು.
ನಾಡಗೀತೆ ಗಾಯನ ಸಂದರ್ಭದಲ್ಲಿ ಎದ್ದು ನಿಂತು ಗೌರವ ಸಲ್ಲಿಸದ ಏಳು ತಾಲ್ಲೂಕುಗಳ ಅಧಿಕಾರಿಗಳನ್ನು ವಿಡಿಯೋ ಕಾನ್ಫರೆನ್್ಸನಲ್ಲೇ ಗಮನಿಸಿದ ಮುಖ್ಯಮಂತ್ರಿಯವರು ತರಾಟೆಗೆ ತೆಗೆದುಕೊಂಡರು. ಕೆಲವು ತಾಲ್ಲೂಕುಗಳಲ್ಲಿ ಅಧಿಕಾರಿಗಳು ಗೈರು ಹಾಜರಿ ಕುರಿತು ಗಮನ ಹರಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನ ಪ್ರತಿನಿಧಗಳಿಗೆ 5 ವರ್ಷಕ್ಕೊಮೆ ಜನ ಅಂಕ ನೀಡುತ್ತಾರೆ. ಅದೇ ರೀತಿ ಕೆಲ ಅಧಿಕಾರಿಗಳಿಗೆ, ಹಿರಿಯ ಅಧಿಕಾರಿಗಳು ಮತ್ತು ನಮಗೆ ಅಂಕ ಬರೆಯುವ ಸಾಮರ್ಥ್ಯ ಇದೆ ಎಂಬುದನ್ನು ಮರೆಯಬಾರದು. ಶೇ.60ರಷ್ಟು ಅಧಿಕಾರಿ ಮತ್ತು ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿಲ್ಲ ಎಂಬುದು ನನ್ನ ಗಮನಕ್ಕಿದೆ. ಇದನ್ನು ಸಹಿಸುವುದಿಲ್ಲ ಎಂದರು.
ಸಭೆಯಲ್ಲಿ ರಾಜ್ಯಾದ್ಯಂತ ತಾಲ್ಲೂಕು, ಜಿಲ್ಲಾ ಕೇಂದ್ರಗಳಿಂದ 750 ಪ್ಯಾನಲ್ಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್್ಸನಲ್ಲಿ ಭಾಗವಹಿಸಿದರು.
ಕೆಲವು ಕಡೆ ಸಚಿವರು ಖುದ್ದು ಹಾಜರಿದ್ದರು. ಕುಣಿಗಲ್ ತಾಲ್ಲೂಕಿನಲ್ಲಿ ಬರ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಂವಾದ ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದರು. ಕೆಲವು ತಾಲ್ಲೂಕುಗಳ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಜೊತೆ ಸಂವಾದ ನಡೆಸಿದರು.
ತಾಲೂಕು ಮಟ್ಟದಲ್ಲಿ ಬರ ನಿರ್ವಹಣೆ ಕುರಿತಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರು ನೇರ ಸಂವಾದ ನಡೆಸಿದರು.
ಬ್ಯಾಂಕ್ವೆಟ್ ಹಾಲ್ನ ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಷ್ ಲಾಡ್, ಲಕ್ಷ್ಮಣಸವದಿ, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.
