ಚಿಕ್ಕಮಗಳೂರು, ಆ.13- ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ವಿವಿಧ ಶುಲ್ಕಗಳ ಹೆಸರಿನಲ್ಲಿ 2.34 ಲಕ್ಷಕ್ಕೂ ಅಧಿಕ ಹಣ ಪಡೆದು ಸೈಬರ್ ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಹರಿಯಪ್ಪ ಸ್ಟ್ರೀಟ್, ಎಂ.ಜಿ. ರಸ್ತೆಯ ನಿವಾಸಿ ಸೀಮಾ ಬಾನು ವಂಚನೆಗೊಳಗಾದವರು. ಈ ಸಂಬಂಧ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಜುಲೈ 20ರಂದು ಅಪರಿಚಿತ ವ್ಯಕ್ತಿಯೊಬ್ಬರು ಸೀಮಾ ಬಾನು ಅವರ ಮೊಬೈಲ್‌ಗೆ ಕರೆ ಮಾಡಿ, ತಾನು ಕೇರಳ ಲಾಟರಿ ಕಡೆಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ.
ಬಳಿಕ ವಾಟ್‌್ಸಆ್ಯಪ್ ಮೂಲಕ ಸುಮಾರು 30 ಲಾಟರಿ ಸಂಖ್ಯೆಗಳ ಮಾಹಿತಿ ಕಳುಹಿಸಿ, ಯಾವುದಾದರೂ ಒಂದು ಟಿಕೆಟ್ ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದ್ದಾನೆ. ಅದರಂತೆ ಒಂದು ಟಿಕೆಟ್ ಆಯ್ಕೆ ಮಾಡಿದ ಸೀಮಾ ಬಾನು, ಟಿಕೆಟ್ ಶುಲ್ಕವಾಗಿ 99 ಪಾವತಿಸಿದ್ದಾರೆ.
ಅದೇ ದಿನ ಮಧ್ಯಾಹ್ನ ಮತ್ತೆ ಕರೆ ಮಾಡಿದ ಆರೋಪಿಗಳು, ಲಾಟರಿ ಡ್ರಾದಲ್ಲಿ 8 ಲಕ್ಷ ಬಹುಮಾನ ಬಂದಿದೆ ಎಂದು ತಿಳಿಸಿದ್ದಾರೆ. ಬಹುಮಾನ ಬಂದಿರುವುದನ್ನು ಪರಿಶೀಲಿಸುವಂತೆ ಲಿಂಕ್ ಕಳುಹಿಸಿದ್ದು, ಅದರಲ್ಲಿ 8 ಲಕ್ಷ ಬಹುಮಾನ ಬಂದಿರುವುದಾಗಿ ತೋರಿಸಿದ್ದರಿಂದ ಸೀಮಾ ಬಾನು ಅದನ್ನು ನಂಬಿದ್ದಾರೆ ಎನ್ನಲಾಗಿದೆ.
ಬಹುಮಾನ ಹಣ ಪಡೆಯಲು ಪ್ರೊಸೆಸಿಂಗ್ ಚಾರ್ಜ್, ಜಿಎಸ್‌ಟಿ, ಟಿಡಿಎಸ್, ಎನ್‌ಒಸಿ ಹಾಗೂ ಆರ್‌ಬಿಐ ಶುಲ್ಕದ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಾವತಿಸುವಂತೆ ಆರೋಪಿಗಳು ಸೂಚಿಸಿದ್ದಾರೆ. ಇದನ್ನು ನಂಬಿದ ಅವರು ಫೋನ್‌ಪೇ ಮೂಲಕ ಆರೋಪಿಗಳು ಕಳುಹಿಸಿದ ಸ್ಕ್ಯಾನರ್‌ಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ.
ಜುಲೈ 21ರಿಂದ 29ರವರೆಗೆ ವಿವಿಧ ಹಂತಗಳಲ್ಲಿ 8 ಸಾವಿರ, 31,500, 49,800, 35,600, 35 ಸಾವಿರ ಸೇರಿದಂತೆ ಹಲವು ಮೊತ್ತಗಳನ್ನು ಪಾವತಿಸಿದ್ದಾರೆ. ಇತರ ಸಂಖ್ಯೆಗಳಿಗೂ 17,800 ಹಾಗೂ 32 ಸಾವಿರ ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟು 2,34,200 ಹಣವನ್ನು ವಂಚಕರು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಯಾವುದೇ ಬಹುಮಾನ ಹಣ ಖಾತೆಗೆ ಜಮೆಯಾಗದೆ, ಮತ್ತಷ್ಟು 1 ಲಕ್ಷ ಪಾವತಿಸುವಂತೆ ಆರೋಪಿಗಳು ಒತ್ತಾಯಿಸಿದಾಗ ಸೀಮಾ ಬಾನು ಅವರಿಗೆ ಅನುಮಾನ ಬಂದಿದೆ. ಟುಂಬದವರಲ್ಲಿ ವಿಚಾರಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ತಕ್ಷಣ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದು, ಸ್ವೀಕೃತಿ ಸಂಖ್ಯೆ 31608260135664 ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ವಂಚಕರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
