ನವದೆಹಲಿ,ಆ.13- ಕಳೆದ 2025 ರ ನವೆಂಬರ್‌ನಲ್ಲಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟದ ಹಿಂದೆ ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್-ಖೈದಾದ ಭಾರತೀಯ ಉಪಖಂಡ ಶಾಖೆಯ (ಎಕ್ಯೂಐಎಸ್) ಕೈವಾಡವಿರುವುದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೇಲ್ವಿಚಾರಣಾ ತಂಡದ ವರದಿ ಅಧಿಕೃತವಾಗಿ ದೃಢಪಡಿಸಿದೆ. ಈ ದುರ್ಘಟನೆಯಲ್ಲಿ ಒಟ್ಟು 11 ಜನರು ಬಲಿಯಾಗಿದ್ದರು.
ಎಕ್ಯೂಐಎಸ್ ಈಗ ಕೇವಲ ದುರ್ಬಲಗೊಂಡ ಸಂಘಟನೆಯಾಗಿರದೆ, ಹೆಚ್ಚು ರಚನಾತಕ ಹಾಗೂ ವಿಕೇಂದ್ರೀಕೃತ ಜಾಲವಾಗಿ ವಿಕಸನಗೊಂಡಿದೆ. ಭದ್ರತಾ ಸಂಸ್ಥೆಗಳ ಕಣ್ಣು ತಪ್ಪಿಸಲು ಇದು ಸಣ್ಣ ಸಣ್ಣ ಕಾರ್ಯಾಚರಣಾ ಕೋಶಗಳ (ಸೆಲ್) ಮೇಲೆ ಹೆಚ್ಚು ಅವಲಂಬಿತವಾಗಿದೆ.
ಐಕ್ಯೂಎಸ್ ಸಂಘಟನೆಯು ಆಗ್ನೇಯ ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವುದರ ಜೊತೆಗೆ, ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಬಾಂಗ್ಲಾದೇಶವನ್ನು ನೆಲೆಯಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಗಡಿಯಲ್ಲಿ ಗಡಿಯಾಚೆಗಿನ ಹಿಂಸಾಚಾರ ತೀವ್ರಗೊಂಡಿದೆ. ತಾಲಿಬಾನ್ ಆಡಳಿತದ ಬೆಂಬಲದೊಂದಿಗೆ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ದಾಳಿಗಳನ್ನು ತೀವ್ರಗೊಳಿಸಿದೆ.
ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಮಾರಕ ಆತಹತ್ಯಾ ಬಾಂಬ್ ದಾಳಿಗಳಂತಹ ಕೃತ್ಯಗಳಿಗೂ ಐಕ್ಯೂಎಸ್‌ನೊಂದಿಗೆ ನಂಟಿರುವ ಇತ್ತಿಹಾದ್-ಉಲ್-ಮುಜಾಹಿದ್ದೀನ್ ಪಾಕಿಸ್ತಾನ್ (ಐಎಂಪಿ) ಸಂಘಟನೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಭಯೋತ್ಪಾದಕರು ಬಾಂಬ್ ತಯಾರಿಕೆ, ಗುರಿಗಳ ಆಯ್ಕೆ ಹಾಗೂ ಪ್ರಚಾರ ಸಾಮಗ್ರಿಗಳನ್ನು ವಿವಿಧ ಭಾಷೆಗಳಿಗೆ ತ್ವರಿತವಾಗಿ ತಲುಪಿಸಲು ಚಾಟ್‌ಜಿಪಿಟಿ ಸೇರಿದಂತೆ ನಾನಾ ಎಐ ಸಾಧನಗಳನ್ನು ವ್ಯಾಪಕವಾಗಿ ಬಳಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ರಾಸಾಯನಿಕ ಹಾಗೂ ಜೈವಿಕ ಶಸಾ್ತ್ರಸ್ತ್ರಗಳು:
ಉಗ್ರ ಸಂಘಟನೆಗಳು ಸೈನೈಡ್ ಮತ್ತು ಬೊಟುಲಿನಮ್ ಟಾಕ್ಸಿನ್‌ನಂತಹ ಮಾರಕ ರಾಸಾಯನಿಕ ಹಾಗೂ ಜೈವಿಕ ಶಸಾ್ತ್ರಸ್ತ್ರಗಳ ಬಳಕೆಯ ಬಗ್ಗೆಯೂ ಆಸಕ್ತಿ ಮುಂದುವರಿಸಿವೆ. ಭಯೋತ್ಪಾದನಾ ನಿಗ್ರಹ ಕ್ರಮಗಳ ಭಾಗವಾಗಿ ವಿಶ್ವಸಂಸ್ಥೆಯ ನಿರ್ಬಂಧಗಳ ಪಟ್ಟಿಗೆ ಹೊಸದಾಗಿ ಮೂವರನ್ನು ಸೇರಿಸಲಾಗಿದ್ದು, ಏಳು ಜನರನ್ನು ಕೈಬಿಡಲಾಗಿದೆ.
ಗಮನಾರ್ಹ ಬೆಳವಣಿಗೆಯೊಂದರಲ್ಲಿ, ಹಯಾತ್ ತಹ್ರಿರ್ ಅಲ್-ಶಾಮ್ (ಅಲ್-ನುಸ್ರಾ ಫ್ರಂಟ್) ಸಂಘಟನೆಯನ್ನು ಫೆಬ್ರವರಿ 27, 2026ರಂದು ನಿರ್ಬಂಧಗಳ ಪಟ್ಟಿಯಿಂದ ಅಧಿಕೃತವಾಗಿ ತೆಗೆದುಹಾಕಲಾಗಿದೆ.
