Homeರಾಷ್ಟ್ರೀಯಎನ್‌ಡಿಎ ಮೈತ್ರಿಕೂಟ ಸೇರುತ್ತಾ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ-ಎಸ್‌‍ಪಿ..?

ಎನ್‌ಡಿಎ ಮೈತ್ರಿಕೂಟ ಸೇರುತ್ತಾ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ-ಎಸ್‌‍ಪಿ..?

Supriya Sule denies NCP(SCP) joining NDA in India

ನವದೆಹಲಿ,ಆ.13-ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮೆ ದೊಡ್ಡ ಮಟ್ಟದ ರಾಜಕೀಯ ಪುನರ್‌ಜೋಡಣೆ ನಡೆಯುವ ಮುನ್ಸೂಚನೆಗಳು ಗೋಚರಿಸುತ್ತಿವೆ. ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್‌‍ ಪಕ್ಷ (ಎನ್‌ಸಿಪಿ-ಎಸ್‌‍ಪಿ) ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸಬಹುದು ಎಂಬ ಊಹಾಪೋಹಗಳು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿವೆ.

ಇದಕ್ಕೆ ಪುಷ್ಟಿ ನೀಡುವಂತೆ, ಎನ್‌ಸಿಪಿ (ಎಸ್‌‍ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ ಅವರು ದೆಹಲಿಯಲ್ಲಿ ಒಂದೇ ಕಾರಿನಲ್ಲಿ ಪ್ರಯಾಣಿಸಿರುವುದು ಕಂಡುಬಂದಿದೆ.

ಸಂಸತ್ತಿನ ಆವರಣದಲ್ಲಿ ಇಬ್ಬರು ನಾಯಕರು ಸೌಹಾರ್ದಯುತವಾಗಿ ಚರ್ಚಿಸಿ, ಬಳಿಕ ಒಂದೇ ವಾಹನದಲ್ಲಿ ನಿರ್ಗಮಿಸಿರುವ ದೃಶ್ಯಗಳು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ. ಈ ಬೆಳವಣಿಗೆಯು ಕೇವಲ ಕಾಕತಾಳೀಯವೇ ಅಥವಾ ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಕ್ರಾಂತಿಗೆ ವೇದಿಕೆ ಸಿದ್ಧವಾಗುತ್ತಿದೆಯೇ ಎಂಬ ಚರ್ಚೆಗಳು ಜೋರಾಗಿವೆ.

ಇತ್ತೀಚೆಗಷ್ಟೇ ಎನ್‌ಸಿಪಿ (ಎಸ್‌‍ಪಿ) ಯ ಎಂಟು ಲೋಕಸಭಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ರೈಲ್ವೆ ಯೋಜನೆಗಳು (ಪುಣೆ-ನಾಸಿಕ್‌ ಸೆಮಿ-ಹೈಸ್ಪೀಡ್‌ ರೈಲು) ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಈ ಭೇಟಿ ನಡೆಸಲಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದ್ದರೂ, ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಎನ್ನಲಾಗಿದೆ.
ದೆಹಲಿಯಲ್ಲಿ ನಡೆದ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿಯ ವಿವಾಹ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಗವಹಿಸಿದ್ದು ಈ ಊಹಾಪೋಹಗಳಿಗೆ ಮತ್ತಷ್ಟು ಬಲ ತುಂಬಿದೆ.

ಮೂಲಗಳ ಪ್ರಕಾರ, ಎನ್‌ಸಿಪಿ (ಎಸ್‌‍ಪಿ) ಎನ್‌ಡಿಎ ಸೇರಲು ಎರಡು ಮಾರ್ಗಗಳನ್ನು ಪರಿಗಣಿಸಲಾಗುತ್ತಿದೆ. ಪ್ರತ್ಯೇಕ ಪಕ್ಷವಾಗಿ ಮೈತ್ರಿ ಸೇರುವುದು ಅಥವಾ ಸುನೇತ್ರಾ ಪವಾರ್‌ ನೇತೃತ್ವದ ಎನ್‌ಸಿಪಿ ಬಣದೊಂದಿಗೆ ವಿಲೀನಗೊಂಡು ಎನ್‌ಡಿಎ ಪ್ರವೇಶಿಸುವುದು ಎಂಬ ಚರ್ಚೆಗಳು ರಾಜಕೀಯ ಕಾರಿಡಾರ್‌ನಲ್ಲಿ ಕೇಳಿಬರುತ್ತಿವೆ.

ಪಕ್ಷದ ಅಧಿಕೃತ ನಿಲುವು:
ಆಡಳಿತಾರೂಢ ಮೈತ್ರಿಕೂಟಕ್ಕೆ ಸೇರುವ ಕುರಿತು ಹಬ್ಬಿರುವ ವರದಿಗಳನ್ನು ಪಕ್ಷದ ಮುಖಂಡರು ಈಗಾಗಲೇ ತಳ್ಳಿಹಾಕಿದ್ದಾರೆ. ಆದರೆ, ಮುಂಬರುವ ದಿನಗಳಲ್ಲಿ ಜನರ ಹಿತಾಸಕ್ತಿ ಹಾಗೂ ಮಹಾರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ವಿಶೇಷವಾಗಿ, ಕೇಂದ್ರ ಸರ್ಕಾರದ ಡಿಲಿಮಿಟೇಶನ್‌ (ಸೀಮಾ ನಿರ್ಣಯ) ಮಸೂದೆಯು ಎಲ್ಲಾ ರಾಜ್ಯಗಳ ಹಿತಾಸಕ್ತಿ ಕಾಯ್ದುಕೊಂಡರೆ ಅದನ್ನು ಬೆಂಬಲಿಸುವ ಬಗ್ಗೆಯೂ ಪಕ್ಷವು ಹಿಂದೆ ಸುಳಿವು ನೀಡಿತ್ತು.

ಮಹಾರಾಷ್ಟ್ರದಲ್ಲಿ ಈಗಾಗಲೇ ಹಲವು ರಾಜಕೀಯ ಬದಲಾವಣೆಗಳನ್ನು ಕಂಡಿರುವ ಜನಸಾಮಾನ್ಯರು, ಈ ನೂತನ ಬೆಳವಣಿಗೆಗಳು ರಾಜ್ಯದ ರಾಜಕೀಯ ಚಿತ್ರಣವನ್ನು ಹೇಗೆ ಬದಲಾಯಿಸಲಿವೆ ಎಂಬುದನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ.

RELATED ARTICLES
spot_img

Latest News