Homeರಾಜ್ಯಕಲಾಪ ಸುಗಮವಾಗಿ ನಡೆಯಲು ಪ್ರತಿಪಕ್ಷಗಳ ಸಹಕಾರ ಕೋರಿದ ಸಿಎಂ ಡಿಕೆಶಿ

ಕಲಾಪ ಸುಗಮವಾಗಿ ನಡೆಯಲು ಪ್ರತಿಪಕ್ಷಗಳ ಸಹಕಾರ ಕೋರಿದ ಸಿಎಂ ಡಿಕೆಶಿ

CM DK Shivakumar seeks cooperation from opposition parties for smooth conduct of proceedings

ಬೆಂಗಳೂರು, ಆ.13- ವಿಧಾನಮಂಡಲದ ಅಧಿವೇಶನದ ಮೊದಲ ದಿನವಾದ ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಂಪುಟದ ಕೆಲ ಸಚಿವರು ವಿರೋಧ ಪಕ್ಷದ ಸದಸ್ಯರ ಬಳಿ ತೆರಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಕಲಾಪ ಸುಗಮವಾಗಿ ನಡೆಯಲು ಸಹಕಾರ ಕೋರಿದರು.

ಕಲಾಪ ಆರಂಭಕ್ಕೂ ಮುನ್ನ ಸಭಾಂಗಣದಲ್ಲಿ ಕರೆಗಂಟೆ ಮೊಳಗುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಿಜೆಪಿ ಹಾಗೂ ಜೆಡಿಎಸ್‌‍ ಸದಸ್ಯರ ಆಸನಗಳ ಬಳಿ ತೆರಳಿ ಉಭಯ ಕುಶಲೋಪರಿ ವಿಚಾರಿಸಿದರು. ವಿರೋಧ ಪಕ್ಷದ ಹಲವು ಸದಸ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಅಧಿವೇಶನವನ್ನು ಸೌಹಾರ್ದಯುತವಾಗಿ ನಡೆಸಲು ಸಹಕಾರ ನೀಡುವಂತೆ ಮನವಿ ಮಾಡಿದರು.

ವಿರೋಧ ಪಕ್ಷದ ಸದಸ್ಯರ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸುತ್ತಿದ್ದ ನಡುವೆ ಕರೆ ಗಂಟೆ ನಿಂತು, ಕಲಾಪ ಅಧಿಕೃತವಾಗಿ ಆರಂಭವಾಯಿತು. ವಂದೇ ಮಾತರಂ ಗೀತೆ ಮೊಳಗಿತ್ತು. ಅದು ನಿಂತ ಬಳಿಕ ಮತ್ತೆ ವಿರೋಧ ಪಕ್ಷದ ಸಾಲಿನತ್ತ ಬಂದ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರಿಗೆ ಹಸ್ತ ಲಾಘವ ನೀಡಿ ಶುಭಾಷಯ ವಿನಿಮಯ ಮಾಡಿಕೊಂಡರು.

ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನವನ್ನುಎದುರಿಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರು ಆಡಳಿತ ಪಕ್ಷದ ಮೊಗ ಸಾಲೆಯಿಂದ ಸದನದ ಸಭಾಂಗಣ ಪ್ರವೇಶಿಸುವ ಮುನ್ನ ಸಭಾಂಗಣದ ಬಾಗಿಲಿಗೆ ದೀರ್ಘದಂಡ ನಮಸ್ಕಾರವನ್ನು ಹಾಕಿದರು. ಸಭಾಂಗಣದ ಒಳಗೆ ತಮ ಕುರ್ಚಿಯಲ್ಲಿ ಆಸನರಾಗುವ ಮುನ್ನ ಮತ್ತೊಮೆ ಮುಂದಿನ ಮೇಜಿಗೆ ಹಣೆ ಮುಟ್ಟಿ ಡಿ.ಕೆ.ಶಿವಕುಮಾರ್‌ ನಮಸ್ಕರಿಸಿದರು.

ಅದೇ ರೀತಿ ಸಚಿವರಾದ ಕೃಷ್ಣ ಬೈರೇಗೌಡ, ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವು ಸಚಿವರು ವಿರೋಧ ಪಕ್ಷದ ಸದಸ್ಯರ ಸಾಲಿಗೆ ತೆರಳಿ ಮಾತುಕತೆ ನಡೆಸಿದರು. ಮೊದಲ ದಿನವೇ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ದೃಶ್ಯ ಕಂಡುಬಂತು.

ಅತೃಪ್ತ ಶಾಸಕರ ಗೈರುಹಾಜರಿ:
ಇದೇ ವೇಳೆ ವಿಧಾನಸಭೆಯ ಕಲಾಪದಲ್ಲಿ ಸಚಿವ ಸ್ಥಾನ ದೊರೆಯದೆ ಅಸಮಾಧಾನಗೊಂಡಿರುವ ಹಲವು ಶಾಸಕರ ಗೈರುಹಾಜರಿ ಎದ್ದು ಕಾಣಿಸಿತು.
ಎಸ್‌‍.ಎನ್‌. ನಾರಾಯಣಸ್ವಾಮಿ, ಯಶವಂತರಾಯಗೌಡ ಪಾಟೀಲ್‌‍, ಅಪ್ಪಾಜಿ ನಾಡಗೌಡ, ಬಿ.ಆರ್‌. ಪಾಟೀಲ್‌‍, ಪ್ರಿಯಕೃಷ್ಣ, ಎಂ. ಕೃಷ್ಣಪ್ಪ ಸೇರಿದಂತೆ ಹಲವು ಶಾಸಕರು ಕಲಾಪಕ್ಕೆ ಗೈರಾಗಿದ್ದರು. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ನಾಯಕರ ಗೈರುಹಾಜರಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಯಿತು.

ಸಚಿವರ ಆಸನದಲ್ಲೂ ಬದಲಾವಣೆ:
ಈ ಬಾರಿ ವಿಧಾನಸಭೆಯಲ್ಲಿನ ಸಚಿವರ ಆಸನ ವ್ಯವಸ್ಥೆಯಲ್ಲೂ ಬದಲಾವಣೆ ಕಂಡುಬಂದಿದೆ. ಕೃಷ್ಣ ಬೈರೇಗೌಡ ಅವರು ಆಡಳಿತ ಪಕ್ಷದ ಸಚಿವರ ಮೊದಲ ಸಾಲಿನ ಟ್ರಜರಿ ಬೆಂಚ್‌ ನಲ್ಲಿ ಆಸನ ಪಡೆದಿದ್ದಾರೆ.

ಈ ಹಿಂದೆ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕೃಷ್ಣ ಬೈರೇಗೌಡ ಅವರು ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿಯಿದ್ದು, ಈ ಜವಾಬ್ದಾರಿಯನ್ನು ಬಹುತೇಕ ಕೃಷ್ಣ ಬೈರೇಗೌಡ ಅವರೇ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಚಿವರ ಸಾಲಿನಲ್ಲಿ ಎಡದಿಂದ ಬಲಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಹಿರಿಯ ಸಚಿವರಾದ ಕೆ.ಎಚ್‌.ಮುನಿಯಪ್ಪ, ರಾಮಲಿಂಗಾರೆಡ್ಡಿ, ಬಸವರಾಜ ರಾಯರೆಡ್ಡಿ, ಕೃಷ್ಣ ಬೈರೇಗೌಡ ಹಾಗೂ ಲಕ್ಷ್ಮಣ ಸವದಿ ಅವರು ಆಸನ ಪಡೆದಿದ್ದರು.
ಕಳೆದ ಅಧಿವೇಶನದಲ್ಲಿ ವಿಧಾನಸಭೆ ಅಧ್ಯಕ್ಷರಾಗಿ ಕೇಂದ್ರ ಪೀಠದಲ್ಲಿ ಕುಳಿತಿದ್ದ ಯು.ಟಿ.ಖಾದರ್‌ ಅವರು ಇದೀಗ ಸಚಿವರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಹಿಂಬದಿಯ ಸಾಲಿನಲ್ಲಿ ಅವರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಹೊಸ ಸಚಿವರಿಗೆ ಮೊದಲ ಅಧಿವೇಶನ:
ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್‌ ನೇತೃತ್ವದ ಸರ್ಕಾರಕ್ಕೆ ಇದು ಪ್ರಮುಖ ಮೊದಲ ವಿಧಾನಮಂಡಲ ಅಧಿವೇಶನವಾಗಿದೆ. ಜೂನ್‌ 3ರಂದು ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಂಪುಟ ವಿಸ್ತರಣೆ ನಡೆದಿದೆ.

ಆಗಸ್ಟ್‌ 3ರಂದು ನಡೆದ ಎರಡನೇ ಸಂಪುಟ ವಿಸ್ತರಣೆಯಲ್ಲಿ ಹಲವು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೊದಲ ಹಂತದಲ್ಲಿ ಮುಖ್ಯಮಂತ್ರಿ ಸೇರಿದಂತೆ 14 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ಎರಡನೇ ಹಂತದಲ್ಲಿ 19 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೊದಲ ಹಂತದಲ್ಲಿ ಸಚಿವರಾದ ಎಲ್ಲರಿಗೂ ಖಾತೆ ಹಂಚಿಕೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಸಚಿವರಾದ 19 ಮಂದಿಯಲ್ಲಿ 13 ಮಂದಿಗೆ ಖಾತೆ ಹಂಚಿಕೆಯಾಗಿದೆ. ಇನ್ನೂ ಆರು ಮಂದಿ ಖಾತೆ ರಹಿತ ಸಚಿವರಾಗಿ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ.

ಹಲವು ಸಚಿವರಿಗೆ ಹೊಸ ಅನುಭವ:
ಹೊಸ ಸಂಪುಟದ ಹಲವು ಸಚಿವರಿಗೆ ಇದು ಮೊದಲ ವಿಧಾನಮಂಡಲ ಅಧಿವೇಶನವಾಗಿದೆ. ಜಮೀರ್‌ ಅಹಮದ್‌ ಖಾನ್‌, ರಾಮಲಿಂಗಾರೆಡ್ಡಿ, ಕೆ.ಎಚ್‌.ಮುನಿಯಪ್ಪ, ಲಕ್ಷ್ಮಣ್‌ ಸವದಿ, ಶಿವರಾಜ್‌ ತಂಗಡಗಿ, ಯು.ಟಿ.ಖಾದರ್‌, ಚೆಲುವರಾಯಸ್ವಾಮಿ, ಮಧು ಬಂಗಾರಪ್ಪ, ಬಸವರಾಜ ರಾಯರೆಡ್ಡಿ, ಪುಟ್ಟರಂಗಶೆಟ್ಟಿ, ಸಂತೋಷ್‌ ಲಾಡ್‌, ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌, ಪಿ.ಎಂ.ನರೇಂದ್ರಸ್ವಾಮಿ ಹಾಗೂ ಬಿ.ನಾಗೇಂದ್ರ ಸೇರಿದಂತೆ ಹಲವರು ಈ ಹಿಂದೆ ಸಚಿವರಾಗಿ ವಿಧಾನಮಂಡಲದ ಕಲಾಪವನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇನ್ನು ರುದ್ರಪ್ಪ ಲಮಾಣಿ, ಟಿ. ರಘುಮೂರ್ತಿ, ಅಜಯ್‌ ಸಿಂಗ್‌, ಕೆ.ಎಂ. ಶಿವಲಿಂಗೇಗೌಡ, ವಿಜಯಾನಂದ ಕಾಶಪ್ಪನವರ್‌, ಕೆ.ಎಸ್‌‍. ಬಸಂತಪ್ಪ, ರಿಜ್ವಾನ್‌ ಅರ್ಷದ್‌ ಹಾಗೂ ಎಚ್‌.ಸಿ.ಬಾಲಕೃಷ್ಣ ಸೇರಿದಂತೆ ಕೆಲವರಿಗೆ ಸಚಿವರಾಗಿ ಇದು ಮೊದಲ ವಿಧಾನಮಂಡಲ ಅಧಿವೇಶನವಾಗಿದೆ.

ಪ್ರತಿಪಕ್ಷದ ವಾಗ್ದಾಳಿಗೆ ಸಜ್ಜು:
ಖಾತೆಗಳ ಹಂಚಿಕೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಚಿವರು ತಮ ಇಲಾಖೆಗಳ ವಿಚಾರದಲ್ಲಿ ಪ್ರತಿಪಕ್ಷಗಳ ಪ್ರಶ್ನೆ ಹಾಗೂ ವಾಗ್ದಾಳಿಯನ್ನು ಎದುರಿಸಲು ಪೂರ್ವ ತಯಾರಿ ನಡೆಸಿದ್ದಾರೆ. ಖಾತೆ ರಹಿತ ಸಚಿವರೂ ಕೂಡ ಸರ್ಕಾರದ ಪರವಾಗಿ ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಒಟ್ಟಾರೆ, ಅಧಿವೇಶನದ ಮೊದಲ ದಿನ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸೌಹಾರ್ದ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಸಿದರೆ, ಸಚಿವ ಸ್ಥಾನ ವಂಚಿತ ಶಾಸಕರ ಗೈರುಹಾಜರಿ ಹಾಗೂ ಸಚಿವರ ಆಸನ ವ್‌ಯವಸ್ಥೆಯಲ್ಲಿನ ಬದಲಾವಣೆಗಳು ರಾಜಕೀಯ ವಲಯದಲ್ಲಿ ಗಮನ ಸೆಳೆದವು.

RELATED ARTICLES
spot_img

Latest News