Homeರಾಜ್ಯನೀರಸ ಕರ್ನಾಟಕ ಬಂದ್‌, ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ

ನೀರಸ ಕರ್ನಾಟಕ ಬಂದ್‌, ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು,ಆ.13- ತಮಿಳುನಾಡಿಗೆ ಪ್ರತಿದಿನ 12,000 ಕ್ಯೂಸೆಕ್‌ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನವನ್ನು ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಾಟಾಳ್‌ ನಾಗರಾಜ್‌ ಪೊಲೀಸ್‌‍ ವಶಕ್ಕೆ :ಪ್ರತಿಭಟನೆ ನಡೆಸಲು ಮುಂದಾದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರನ್ನು ಬೆಂಗಳೂರಿನ ಸಂಜಯ್‌ ನಗರದಲ್ಲಿರುವ ಅವರ ನಿವಾಸದಲ್ಲೇ ಪೊಲೀಸರು ವಶಕ್ಕೆ ಪಡೆದರು. ಹಲವು ಕನ್ನಡಪರ ಸಂಘಟನೆಗಳ ಮುಖಂಡರನ್ನು ಸಹ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬೆಳಿಗ್ಗೆಯೇ ವಶಕ್ಕೆ ಪಡೆದಿದ್ದಾರೆ.

ರಾಜಧಾನಿಯಲ್ಲಿ ಬಂದ್‌ನ ಪ್ರಭಾವ ತೀರಾ ಕಡಿಮೆಯಿತ್ತು. ಕೆಂಪೇಗೌಡ ಬಸ್‌‍ ನಿಲ್ದಾಣದಿಂದ ಬಸ್‌‍ಗಳು ಎಂದಿನಂತೆ ಸಂಚರಿಸಿದವು. ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ವಾಣಿಜ್ಯ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಬಸ್‌‍ ನಿಲ್ದಾಣದಿಂದ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಬಸ್‌‍ ಸೇವೆಗಳು ಮುಂದುವರಿದವು. ಅಂಗಡಿಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು ತೆರೆದಿದ್ದವು. ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೂ ದೊಡ್ಡ ಮಟ್ಟದ ವ್ಯತ್ಯಯ ಕಂಡುಬರಲಿಲ್ಲ.

ಬಂದ್‌ಗೆ ಬೆಂಬಲ ಸೂಚಿಸಿ ಬೆಂಗಳೂರು ಹೊರವಲಯದ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್‌ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ರಾಮನಗರದಲ್ಲಿ ಖಾಲಿ ಕೊಡ ಪ್ರದರ್ಶನ :
ರಾಮನಗರದಲ್ಲಿ ಬಂದ್‌ ಬೆಂಬಲಿಸಿ ಕನ್ನಡಪರ ಹೋರಾಟಗಾರರು ಬೆಂಗಳೂರು-ಮೈಸೂರು ಹಳೆಯ ಹೆದ್ದಾರಿಯನ್ನು ತಡೆಯಲು ಯತ್ನಿಸಿದರು. ಐಜೂರು ವೃತ್ತದಲ್ಲಿ ಕಾರ್ಯಕರ್ತರು ಖಾಲಿ ಬಿಂದಿಗೆಗಳನ್ನು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದರು.

ಮಂಡ್ಯದಲ್ಲಿ ಕಾವೇರಿದ ಪ್ರತಿಭಟನೆ :
ಮಂಡ್ಯ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡರೆ, ಬೆಂಗಳೂರು, ಮೈಸೂರು, ಹಾಸನ, ಬಳ್ಳಾರಿ ಮತ್ತಿತರ ಪ್ರಮುಖ ನಗರಗಳಲ್ಲಿ ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು ಮತ್ತು ಶೈಕ್ಷಣಿಕ ಚಟುವಟಿಕೆಗಳು ಬಹುತೇಕ ಸಹಜವಾಗಿಯೇ ಮುಂದುವರಿದವು.

ಕಾವೇರಿ ಹೋರಾಟದ ಪ್ರಮುಖ ಕೇಂದ್ರವಾಗಿರುವ ಮಂಡ್ಯದಲ್ಲಿ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಸಂಜಯ್‌ ವೃತ್ತ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದರು. ಖಾಲಿ ಮಡಿಕೆಗಳು ಮತ್ತು ಹುರುಳಿ ಕಾಳುಗಳನ್ನು ಹಿಡಿದು ನಮ ನೀರು, ನಮ ಹಕ್ಕು ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಬೆಂಗಳೂರುಮೈಸೂರು ಹಳೆಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು.

ಮೈಸೂರಿನಲ್ಲಿ ಕಾರ್ಯಕರ್ತರು ವಶಕ್ಕೆ :
ಮೈಸೂರುನಲ್ಲಿ ಬಂದ್‌ ಪ್ರತಿಭಟನೆಗಳಿಗೆ ಮಾತ್ರ ಸೀಮಿತವಾಗಿತ್ತು. ಬಸ್‌‍ ನಿಲ್ದಾಣದಿಂದ ಇತರೆ ಜಿಲ್ಲೆಗಳಿಗೆ ಸಾರಿಗೆ ಸೇವೆಗಳು ಎಂದಿನಂತೆ ಮುಂದುವರಿದವು. ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್‌ಗಳು ತೆರೆದಿದ್ದವು. ಬಸ್‌‍ಗಳನ್ನು ತಡೆಯಲು ಯತ್ನಿಸಿದ ಕೆಲ ಕನ್ನಡ ಪರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಹಾಸನದಲ್ಲಿ ರಸ್ತೆ ತಡೆ :
ಹಾಸನ ಹಾಗೂ ಬಳ್ಳಾರಿಯಲ್ಲಿ ಜನಜೀವನ ಸಹಜವಾಗಿತ್ತು. ಕೊಪ್ಪಳದಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಹೆಗ್ಗನಾಳ್‌ ಟೋಲ್‌ ಗೇಟ್‌ ಬಳಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಕೆಲವು ಸಂಘಟನೆಗಳು ಬಂದ್‌ಗೆ ನೇರವಾಗಿ ಕೈಜೋಡಿಸುವ ಬದಲು ಪ್ರತಿಭಟನೆಗೆ ನೈತಿಕ ಬೆಂಬಲ ನೀಡುವುದಷ್ಟೇ ತಮ ನಿಲುವು ಎಂದು ಸ್ಪಷ್ಟಪಡಿಸಿದವು. ವ್ಯಾಪಾರಿಗಳು, ಹೋಟೆಲ್‌ ಮಾಲೀಕರು, ಆಟೋಟ್ಯಾಕ್ಸಿ ಚಾಲಕರು ಮತ್ತು ಕೆಲವು ರೈತ ಸಂಘಟನೆಗಳು ಕಾವೇರಿ ವಿಚಾರಕ್ಕೆ ಬೆಂಬಲವಿದ್ದರೂ ಬಂದ್‌ ಪರಿಹಾರವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದವು.
ಬೆಂಗಳೂರಿನಲ್ಲಿ ಸಹಜ ಜನಜೀವನ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗಿನ ವೇಳೆಗೆ ಬಂದ್‌ನ ಪರಿಣಾಮ ತೀರಾ ಕಡಿಮೆಯಾಗಿತ್ತು. ಕೆಂಪೇಗೌಡ ಬಸ್‌‍ ನಿಲ್ದಾಣದಿಂದ ಬಿಎಂಟಿಸಿ ಮತ್ತು ಕೆಎಸ್‌‍ಆರ್‌ಟಿಸಿ ಬಸ್‌‍ಗಳು ಸಂಚರಿಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಬಸ್‌‍ ನಿಲ್ದಾಣಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಬಸ್‌‍ಗಳನ್ನು ತಡೆಯುವುದು, ಕಲ್ಲು ತೂರಾಟ ಅಥವಾ ಇತರ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸರು ಗಸ್ತು ಹೆಚ್ಚಿಸಿದ್ದರು. ಬಸ್‌‍ ಸೇವೆಗೆ ಅಡ್ಡಿಪಡಿಸಲು ಯತ್ನಿಸಿದ ಕೆಲ ಕನ್ನಡ ಪರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಬಂದ್‌ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಬಸ್ಸು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪರಿಸ್ಥಿತಿ ಸಹಜವಾಗಿರುವುದರಿಂದ ಬಸ್‌‍ ಸಂಚಾರ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಎಂದಿನಂತೆ ಬೆಂಗಳೂರಿನಿಂದ ತಮಿಳುನಾಡಿಗೆ ಬಸ್‌‍ಗಳು ಸಂಚಾರ ಆರಂಭಿಸಿವೆ.

ಬಂದ್‌ ಶಾಂತಿಯುತ

ಬೆಂಗಳೂರು,ಆ.13- ರಾಜ್ಯದಲ್ಲಿ ಬಂದ್‌ ಶಾಂತವಾಗಿದ್ದು, ಅಲ್ಲಲ್ಲಿ ಪ್ರತಿಭಟನೆ ಗಳು ನಡೆಯುತ್ತಿವೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮಂಡ್ಯ, ಮೈಸೂರು, ರಾಮನಗರ, ಹಾಸನ ಮುಂತಾದ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ ಎಂದು ವಿವರಿಸಿದರು.ರಾಜ್ಯದಲ್ಲಿ ವಾಹನಗಳ ಸಂಚಾರ ಎಂದಿನಂತಿದ್ದು, ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ತೆರೆದಿವೆ. ಶಾಲಾ-ಕಾಲೇಜುಗಳು ಎಂದಿನಂತೆ ನಡೆಯುತ್ತಿವೆ ಎಂದು ಅವರು ಹೇಳಿದರು.

ಈ ತನಕ ಎಲ್ಲಿಯೂ ಸಣ್ಣಪುಟ್ಟ ಘಟನೆಗಳು ಸಹ ನಡೆದಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಿದ್ದೇವೆ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಿದ್ದೇವೆ ಎಂದು ಅವರು ತಿಳಿಸಿದರು.

RELATED ARTICLES
spot_img

Latest News