Homeಬೆಂಗಳೂರುಟ್ರಾಫಿಕ್‌ ಕಮಿಷನರೇಟ್‌ ಸ್ಥಾಪಿಸಿ ಸಂಚಾರ ದಟ್ಟಣೆ ನಿಯಂತ್ರಿಸಿ

ಟ್ರಾಫಿಕ್‌ ಕಮಿಷನರೇಟ್‌ ಸ್ಥಾಪಿಸಿ ಸಂಚಾರ ದಟ್ಟಣೆ ನಿಯಂತ್ರಿಸಿ

ವಿ.ರಾಮಸ್ವಾಮಿ ಕಣ್ವ
ಜಿಬಿಎ ಮಾದರಿಯಲ್ಲಿ ಬೆಂಗಳೂರು ನಗರ ಪೊಲೀಸ್‌‍ ಕಮೀಷನರೇಟ್‌ ಅನ್ನು ಐದು ಅಥವಾ ಮೂರು ಭಾಗ ಮಾಡುವ ಬದಲು ಬೆಂಗಳೂರು ನಗರ ಸಂಚಾರ ವಿಭಾಗವನ್ನು ಪ್ರತ್ಯೇಕಿಸಿ ಹೊಸ ಕಮಿಷನರೇಟ್‌ ಮಾಡಿದರೆ ಉತ್ತಮ.ಭಾರತದ ಸಿಲಿಕಾನ್‌ ಹಬ್‌ ಆಗಿರುವ ಬೆಂಗಳೂರು ನಗರದಲ್ಲಿ ಪ್ರತಿ ಹತ್ತು ಕಿ.ಮೀ. ಸಂಚಾರಕ್ಕೆ ಸುಮಾರು 36 ನಿಮಿಷ ಬೇಕಾಗುತ್ತದೆ ಎಂದು ಖಾಸಗಿ ಸಂಸ್ಥೆಯ ವರದಿ ಹೇಳಿದೆ.

ಬೆಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗಿಂತ ದೊಡ್ಡ ಸಮಸ್ಯೆಯೆಂದರೆ ಸಂಚಾರ ದಟ್ಟಣೆ. ಆದ್ದರಿಂದ ಸಂಚಾರ ವಿಭಾಗಕ್ಕೆ ಹೆಚ್ಚು ಒತ್ತು ಕೊಡುವುದು ಒಳಿತು.
ಬೆಂಗಳೂರು ನಗರ ಪೊಲೀಸ್‌‍ ಕಮಿಷನರೇಟ್‌ ಅನ್ನು ಐದು, ಮೂರು ಭಾಗಗಳಾಗಿ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಬರುತ್ತಿವೆ ಹಾಗೂ ಚರ್ಚೆಗಳು ಈಗ ನಡೆಯುತ್ತಿವೆ.

ಸಂಚಾರ ವಿಭಾಗವನ್ನು ಬೇರೆ ಮಾಡಿ:
ಮೂರು ಬೇಡ, ಐದಂತೂ ಬೇಡವೇ ಬೇಡ! ನಗರ ಪೊಲೀಸ್‌‍ ಕಮಿಷನರೇಟ್‌ ಒಂದೇ ಇರಲಿ. ಆದರೆ ಇದರಲ್ಲಿರುವ ಸಂಚಾರ ವಿಭಾಗವನ್ನು ಬೇರೆ ಮಾಡಿ ಹೊಸ ಕಮಿಷನರೇಟ್‌ ಸೃಷ್ಟಿಸಿ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದರೆ ಸಾಕು.

ಈಗಾಗಲೇ ಸಂಚಾರ ವಿಭಾಗಕ್ಕೆ ಪ್ರತ್ಯೇಕ ಸುಸಜ್ಜಿತ ಕಟ್ಟಡ ಇದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ಇದ್ದಾರೆ. ಹೊಸ ಸಂಚಾರ ವಿಭಾಗದ ಕಮಿಷನರೇಟ್‌ ಸೃಷ್ಟಿಸಲು ಹೆಚ್ಚು ಹಣ ಬೇಕಿಲ್ಲ. ಹೊಸದಾಗಿ ಸೃಷ್ಟಿಸುವ ಸಂಚಾರ ವಿಭಾಗದ ಕಮಿಷನರೇಟ್‌ಗೆ ವಿಐಪಿ ಘಟಕವನ್ನು ಸೇರಿಸಬಹುದು.

ವಿಐಪಿ ಮತ್ತು ವಿವಿಐಪಿಗಳನ್ನು ಕರೆದುಕೊಂಡು ಬರುವವರು ಸಂಚಾರ ವಿಭಾಗದ ಪೊಲೀಸರೇ. ವಾಪಸ್‌‍ ಕರೆದುಕೊಂಡು ವಿಮಾನ ನಿಲ್ದಾಣಕ್ಕೆ ಹೋಗುವರೂ ಅವರೇ. ವಿಐಪಿ, ವಿವಿಐಪಿಗಳು ಭಾಗವಹಿಸುವ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಸ್ಥಳೀಯ ಪೊಲೀಸರ ಭದ್ರತೆ ಇದ್ದೇ ಇರುತ್ತದೆ.

ಸೂಕ್ತ ಸಮಯವಲ್ಲ:
ನಗರ ಬೆಂಗಳೂರು ನಗರ ಪೊಲೀಸ್‌‍ ಕಮಿಷನರೇಟ್‌ ಅನ್ನು ಐದು, ಮೂರು ಭಾಗಗಳಾಗಿ ಮಾಡುವ ಸಮಯ ಇದಲ್ಲ. ಜಿಬಿಎ ಚುನಾವಣೆ, ಪಂಚ ಗ್ಯಾರಂಟಿಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಬೇಕಾಗಿದೆ. ಆದುದರಿಂದ ಈ ಯೋಜನೆ ಕೈಬಿಡುವುದು ಒಳ್ಳೆಯದು.
ಬೆಂಗಳೂರು ನಗರ ಪೊಲೀಸ್‌‍ ವ್ಯವಸ್ಥೆಯಲ್ಲಿ ಈಗ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಎರಡು ವಲಯಗಳಿವೆ. ಬೇಕೆಂದರೆ ಅದನ್ನು ಮೂರು ಭಾಗಗಳಾಗಿ ಮಾಡಬಹುದು. ಕೇಂದ್ರ ಮತ್ತು ಪಶ್ಚಿಮ ವಿಭಾಗಗಳನ್ನು ಸೇರಿಸಿ ಒಂದು ಹೊಸ ವಲಯವನ್ನು ನಿರ್ಮಿಸಬಹುದು. ಕೇಂದ್ರ ಮತ್ತು ಪಶ್ಚಿಮ ವಿಭಾಗಗಳಲ್ಲಿ ಯಾವಾಗಲೂ ಪ್ರತಿಭಟನೆಗಳು, ಬೃಹತ್‌ ಕಾರ್ಯ ಕ್ರಮಗಳು ನಡೆಯುತ್ತಿರುತ್ತವೆ. ಲೋಕಭವನ, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್‌, ಉದ್ಯೋಗಸೌಧ, ಶಾಸಕರ ಭವನ ಮುಂತಾದ ಕಟ್ಟಡಗಳು ಮತ್ತು ಪ್ರಮುಖ ಕಚೇರಿಗಳು ಇವೆ.

ಸರ್ಕಾರದಿಂದಲೇ ಎಡವಟ್ಟು:
ಸರ್ಕಾರ ಮಾಡುತ್ತಿರುವ ದೊಡ್ಡ ತಪ್ಪು ಎಂದರೆ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಪೊಲೀಸ್‌‍ ಠಾಣೆಗಳನ್ನು ಒಂದೊಂದಾಗಿ ಬೆಂಗಳೂರು ನಗರ ಪೊಲೀಸ್‌‍ ಕಮಿಷನರೇಟ್‌ಗೆ ಸೇರಿಸುತ್ತಿರುವುದು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಾನುಕುಂಟೆ, ಮಾದನಾಯಕನಹಳ್ಳಿ, ಆವಲಹಳ್ಳಿ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಕುಂಬಳಗೂಡು, ತಲಘಟ್ಟಪುರ ಮುಂತಾದ ಠಾಣೆಗಳನ್ನು ಬೆಂಗಳೂರು ನಗರಕ್ಕೆ ಸೇರಿಸುವುದು ಮಹಾ ತಪ್ಪು.

ಕಮಿಷನರೇಟ್‌ ವ್ಯಾಪ್ತಿ ವಿಸ್ತಾರ ವಾದಂತೆ ಭೌಗೋ ಳಿಕ ಸನ್ನಿವೇಶ, ಜನರ ಆಚಾರ-ವಿಚಾರಗಳು ಬದಲಾಗುತ್ತಾ ಹೋಗುತ್ತವೆ. ಪಶ್ಚಿಮಕ್ಕೆ ನೈಸ್‌‍ರಸ್ತೆ, ಪೂರ್ವಕ್ಕೆ ವೈಟ್‌ಫೀಲ್ಡ್‌‍, ಕೆ.ಆರ್‌.ಪುರ ವ್ಯಾಪ್ತಿಗಳನ್ನು ದಾಟಿ ಹೋಗಬಾರದಿತ್ತು.

ಪೊಲೀಸ್‌ ಠಾಣೆಗಳನ್ನು ಮತ್ತಷ್ಟು ಬಲಪಡಿಸಿ:
ಠಾಣೆಗಳನ್ನು ಸೇರಿಸಿಕೊಳ್ಳುವ ಬದಲು ಬೆಂಗಳೂರು ನಗರ ಪೊಲೀಸ್‌‍ ಕಮಿಷನರೇಟ್‌ ಗಡಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸ್‌‍ ಠಾಣೆಗಳನ್ನು ಮತ್ತಷ್ಟು ಬಲಪಡಿಸಬೇಕು. ಈ ಎರಡು ಜಿಲ್ಲೆಗಳಲ್ಲಿ ಹೊಸಹೊಸ ಠಾಣೆಗಳನ್ನು ನಿರ್ಮಿಸಿ ಹೆಚ್ಚುಹೆಚ್ಚು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಬೇಕು.
ಅದನ್ನು ಬಿಟ್ಟು ಎರಡು ಜಿಲ್ಲೆಗಳ ಠಾಣೆಗಳನ್ನು ಒಂದೊಂದೇ ಆಗಿ ಸೇರಿಸಿಕೊಂಡು ಹೋದರೆ ಮುಂದೊಂದು ದಿನ ಕರ್ನಾಟಕ ಪೊಲೀಸ್‌‍ ಭೂಪಟದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಪೊಲೀಸ್‌‍ ಜಿಲ್ಲೆಗಳು ಉಳಿಯುವುದಿಲ್ಲ.

ಆದ್ದರಿಂದ ಎರಡು ಜಿಲ್ಲೆಗಳಿಗೆ ಸಮರ್ಥ, ದಕ್ಷ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಿ ಕಾನೂನು ಮತ್ತು ಸುವಸ್ಥೆಯನ್ನು ಕಾಪಾಡಿ ಅಪರಾಧಗಳನ್ನು ಕಡಿಮೆ ಮಾಡಿ.

ಸೂಕ್ತ ನಿರ್ಧಾರ ಕೈಗೊಳ್ಳಿ:
ಮಾನ್ಯ ಮುಖ್ಯಮಂತ್ರಿಗಳಲ್ಲಿ ಒಂದು ವಿನಂತಿ. ಏನೆಂದರೆ, ತಾವು ಈಗಾಗಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಜಿಬಿಎ ಆಗಿ ನಿರ್ಮಿಸಿ ಐದು ಮಹಾನಗರ ಪಾಲಿಕೆಗಳನ್ನಾಗಿ ಮಾಡಿದ್ದೀರಿ. ಕೆಲವು ಪಾಲಿಕೆಗಳಲ್ಲಿ ಸಿಬ್ಬಂದಿ, ಆರ್ಥಿಕ ಮುಂತಾದ ಸಮಸ್ಯೆಗಳು ಕಂಡುಬರುತ್ತಿವೆ. ಆದುದರಿಂದ ಬೆಂಗಳೂರು ನಗರ ಕಮೀಷನರೇಟ್‌ ಅನ್ನು ಮೂರು, ಐದು ಭಾಗಗಳಾಗಿಸುವುದು ಬೇಡ ಎಂಬುದು ಬಹುಜನರ ಅಭಿಪ್ರಾಯವಾಗಿದೆ. ಈ ಕುರಿತು ತಾವು ಯೋಚಿಸಿ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಿ.

RELATED ARTICLES
spot_img

Latest News