ಬೆಂಗಳೂರು,ಆ.14- ತಾಯಿ ಭುವನೇಶ್ವರಿ ಪ್ರತಿಮೆ ಮುಂದೆ ಬಿಜೆಪಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದಿರುವುದು ರಾಜ್ಯದ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿದರು.
ರಾಜ್ಯ ಹಾಗೂ ದೇಶದ ಜನಸಂಖ್ಯೆಯಲ್ಲಿ ಮಹಿಳೆಯರು ಶೇ.50ರಷ್ಟು ಇದ್ದು, ಅವರಿಗೆ ಸಮಾನ ಅವಕಾಶ ಮತ್ತು ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತತ್ವದ ಸರ್ಕಾರ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರೂ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರೋಧಿಸುತ್ತಾರೆ ಎಂದು ವಿಜಯೇಂದ್ರ ಟೀಕಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಮಹಿಳೆಯರಿಗೆ ಪ್ರಾತಿನಿಧ್ಯ ನಿರಾಕರಿಸುತ್ತಿದೆ ಎಂದರು.
ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯೊಬ್ಬರ ಹೆಸರು ಸಚಿವರಾಗಿ ಸೇರ್ಪಡೆಯಾಗಲಿದೆ ಎಂಬ ವರದಿಗಳಿದ್ದರೂ ಅಂತಿಮವಾಗಿ ಆ ಹೆಸರನ್ನು ಕೈಬಿಡಲಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬರೂ ಮಹಿಳಾ ಸಚಿವರಿಲ್ಲದ ಸಂದರ್ಭದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವುದು ವಿಷಾದನೀಯ ಎಂದು ವಿಜಯೇಂದ್ರ ಹೇಳಿದರು.
ಆರ್ಎಸ್ಎಸ್ ವಿಚಾರದಲ್ಲಿ ಸರ್ಕಾರಕ್ಕೆ ಸವಾಲು :
ಆರ್ಎಸ್ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಹಿಂಬಾಗಿಲಿನಿಂದ ನಿರ್ಬಂಧ ಹೇರುವ ಪ್ರಯತ್ನ ನಡೆಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರವಾಗಿ ಆರ್ಎಸ್ಎಸ್ ಹೆಸರನ್ನು ಉಲ್ಲೇಖಿಸದಿದ್ದರೂ ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ ಎಂದರು.
ಧೈರ್ಯವಿದ್ದರೆ ಆರ್ಎಸ್ಎಸ್ ಅನ್ನು ನಿಷೇಧಿಸುವ ಪ್ರಯತ್ನ ಮಾಡಿ ನೋಡೋಣ ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸವಾಲು ಹಾಕಿದ ಅವರು, ಆರ್ಎಸ್ಎಸ್ನಿಂದ ಯಾವ ದೇಶವಿರೋಧಿ ಚಟುವಟಿಕೆ ನಡೆದಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಆರ್ಎಸ್ಎಸ್ ದೇಶಭಕ್ತಿ, ರಾಷ್ಟ್ರಾಭಿಮಾನ ಮತ್ತು ಸೇವಾ ಮನೋಭಾವ ಬೆಳೆಸುವ ಸಂಘಟನೆಯಾಗಿದೆ ಎಂದು ಸಮರ್ಥಿಸಿಕೊಂಡರು.
ವಾಲೀಕಿ ಹಗರಣದ ಕುರಿತು ಟೀಕೆ :
ವಾಲೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಎದುರಿಸಿದ್ದ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದನ್ನು ವಿಜಯೇಂದ್ರ ಪ್ರಶ್ನಿಸಿದರು. ಬಿಜೆಪಿ ನಾಗೇಂದ್ರ ಅವರ ಜಾತಿಯನ್ನು ವಿರೋಧಿಸುತ್ತಿಲ್ಲ; ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಸಚಿವರನ್ನಾಗಿ ಮಾಡುವುದನ್ನು ಮಾತ್ರ ವಿರೋಧಿಸುತ್ತದೆ ಎಂದರು. ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಕಟ್ಟಬಾರದು ಎಂದು ಸ್ಪಷ್ಟಪಡಿಸಿದರು.
ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಾದ ಹಣದ ದುರ್ಬಳಕೆಯ ಆರೋಪಗಳು ಗಂಭೀರವಾಗಿದ್ದು, ನಾಗೇಂದ್ರ ಅವರ ಮರುಸೇರ್ಪಡೆಯಿಂದ ಸಮುದಾಯದ ಪ್ರಮುಖರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು. ರಾಜ್ಯಾದ್ಯಂತ ಹೋರಾಟ, ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸುವ ಕುರಿತು ಸಮುದಾಯದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜಮೀರ್ ವಿರುದ್ಧ ವಾಗ್ದಾಳಿ :
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನಿರಾಕರಿಸಿದ ಜಮೀರ್ ಅಹಮದ್ ಅವರ ನಿರ್ಧಾರವನ್ನೂ ವಿಜಯೇಂದ್ರ ಟೀಕಿಸಿದರು. ಸ್ವಾತಂತ್ರ್ಯ ದಿನದಂದು ಜಿಲ್ಲೆಗೆ ತೆರಳಿ ತ್ರಿವರ್ಣ ಧ್ವಜಾರೋಹಣ ಮಾಡುವುದು ಸಚಿವರ ಕರ್ತವ್ಯ, ವೈಯಕ್ತಿಕ ಆಯ್ಕೆಯಲ್ಲ ಎಂದು ಹೇಳಿದರು. ಪಕ್ಷ ಸಂಘಟನೆ ಹಾಗೂ ಉಪಚುನಾವಣೆ ಕಾರಣ ನೀಡಿ ಸರ್ಕಾರಿ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಸರಿಯಲ್ಲ. ಲಾಭ ಬೇಕು, ಆದರೆ ಹೊಣೆಗಾರಿಕೆ ಬೇಡ ಎಂಬ ಮನೋಭಾವ ಜನಪ್ರತಿನಿಧಿಗಳಲ್ಲಿ ಇರಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
