ಬೆಂಗಳೂರು, ಆ.14- ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರಿಂದ ಯಾವ ಕಾರಣಕ್ಕಾಗಿ ರಾಜೀನಾಮೆ ಪಡೆಯಲಾಯಿತು? ಅವರನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡಲು ಯಾವುದಾದರೂ ಒತ್ತಡ ಇತ್ತೇ ಎಂಬುದರ ಕುರಿತು ಸರ್ಕಾರ ಸದನದಲ್ಲಿ ಸ್ಪಷ್ಟನೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ನೂತನ ಸಭಾಪತಿ ಸಲೀಂ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ಅವರು ‘ಬಲವಂತವಾಗಿ ನನ್ನಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರ ಅಥವಾ ಹೊರಟ್ಟಿ ಅವರೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
‘ಸದನಕ್ಕೆ ನನ್ನ ಅಭಿಪ್ರಾಯ ತಿಳಿಸಿ ರಾಜೀನಾಮೆ ಕೊಡುವುದಾಗಿ ಹೊರಟ್ಟಿ ಅವರು ಹೇಳಿದ್ದರು. ಆದರೆ ಒತ್ತಾಯಪೂರ್ವಕವಾಗಿ ಸಹಿ ಮಾಡಿಸಿ ರಾಜೀನಾಮೆ ಕೊಡಿಸಿದರು ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಇದಕ್ಕೆ ಸರ್ಕಾರದ ಸ್ಪಷ್ಟನೆ ಏನು?’ ಎಂದು ಪ್ರಶ್ನಿಸಿದರು.
ನೂತನ ಸಭಾಪತಿ ಸಲೀಂ ಅವರನ್ನು ಅಭಿನಂದಿಸಿದ ಛಲವಾದಿ ನಾರಾಯಣಸ್ವಾಮಿ, ‘ನೀವು ಸಭಾಪತಿಯಾಗಿ ಆಯ್ಕೆಯಾಗಿರುವುದು ನನಗೆ ಸಂತೋಷ ತಂದಿದೆ. ಸುಮಾರು ನಾಲ್ಕು ದಶಕಗಳ ರಾಜಕೀಯ ಅನುಭವವಿದೆ. ನಮ್ಮಿಬ್ಬರ ಸ್ನೇಹ ಹಳೆಯದು. ವೈಯಕ್ತಿಕವಾಗಿ ನಾವು ಸ್ನೇಹಿತರು. ಆದರೆ ರಾಜಕೀಯವಾಗಿ ಬೇರೆ ಬೇರೆ ಸಿದ್ಧಾಂತಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ವಿದ್ಯಾರ್ಥಿ ಜೀವನದಿಂದ ಇಲ್ಲಿಯವರೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದೀರಿ. ಇಂದು ದೊರೆತಿರುವ ಈ ಘನ ಹುದ್ದೆಯಲ್ಲಿ ಜಾತ್ಯತೀತ ಮಾತ್ರವಲ್ಲ, ಪಕ್ಷಾತೀತವಾಗಿ ಕೆಲಸ ಮಾಡಬೇಕಾಗುತ್ತದೆ’ ಎಂದು ಹೇಳಿದರು.
ಸಭಾಪತಿ ಸ್ಥಾನವನ್ನು ರಾಜಕೀಯಗೊಳಿಸಬೇಡಿ: ಪುಟ್ಟಣ್ಣ
ಕಾಂಗ್ರೆಸ್ನ ಪುಟ್ಟಣ್ಣ ಮಾತನಾಡಿ, ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವುದು ಹೊಸದೇನಲ್ಲ. ಹಿಂದೆ ತಾನೇ ಸಭಾಪತಿಯಾಗಿದ್ದಾಗ ತಮ್ಮ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು ಎಂದು ಹೇಳಿದರು.
‘ನಾನು ಸಭಾಪತಿಯಾಗಿದ್ದಾಗ ಕನಿಷ್ಠ ಪಕ್ಷ ಸದಸ್ಯರಿಗೆ, ಸದನಕ್ಕೆ ಅಭಿನಂದನೆ ಸಲ್ಲಿಸಲು ಅವಕಾಶ ನೀಡಲಿಲ್ಲ. ಆ ರೀತಿ ನಡೆಸಿಕೊಳ್ಳಲಾಯಿತು. ವಿಮಲಗೌಡ ಅವರು ಉಪಸಭಾಪತಿಯಾಗಿದ್ದಾಗ ಹಾಗೂ ಪ್ರತಾಪ್ಚಂದ್ರ ಶೆಟ್ಟಿ ಅವರು ಸಭಾಪತಿಯಾಗಿದ್ದಾಗ ಯಾವ ರೀತಿ ನಡೆದುಕೊಳ್ಳಲಾಗಿದೆ ಎಂಬ ಉದಾಹರಣೆ ನಮ್ಮ ಮುಂದಿದೆ. ಸಭಾಪತಿ ಸ್ಥಾನವು ಪಕ್ಷಾತೀತವಾದ ಸಾಂವಿಧಾನಿಕ ಹುದ್ದೆ. ಇದನ್ನು ರಾಜಕೀಯಗೊಳಿಸಬೇಡಿ’ ಎಂದು ಮನವಿ ಮಾಡಿದರು.
ಮಿತಿಮೀರದ ಚರ್ಚೆಗೆ ರಾಯರೆಡ್ಡಿ ಸಲಹೆ
ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ‘ಸದನ ಬಹುಮತದಿಂದ ತಮ್ಮನ್ನು ಆಯ್ಕೆ ಮಾಡಿದೆ. ನಿಮಗೆ ಅಭಿನಂದನೆಗಳು. ಪರಿಷತ್ಗೆ 32ನೇ ಸಭಾಪತಿಯಾಗಿ ಆಯ್ಕೆಯಾಗಿದ್ದೀರಿ. ಪರಿಷತ್ಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಚರ್ಚೆಗಳು ನಡೆಯಲಿ. ಆದರೆ ಅದು ಮಿತಿಮೀರಬಾರದು. ಸಭಾಪತಿ ಸ್ಥಾನದ ಗೌರವವನ್ನು ಉಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಈ ವೇಳೆ ಬಿಜೆಪಿ ಸದಸ್ಯರು, ‘ಮೈಕ್ ಸರಿಯಿಲ್ಲವೇ? ಧ್ವನಿ ಸರಿಯಾಗಿ ಕೇಳುತ್ತಿಲ್ಲವೇ?’ ಎಂದು ರಾಯರೆಡ್ಡಿ ಅವರನ್ನು ಕಿಚಾಯಿಸಿದರು.
ಆಗ ರಾಯರೆಡ್ಡಿ, ‘ಮೈಕ್ ಸರಿಯಾಗಿದೆ. ನನಗೆ ಜ್ವರ ಇದೆ. ಅದಕ್ಕೆ ಜೋರಾಗಿ ಮಾತನಾಡಲು ಆಗುತ್ತಿಲ್ಲ’ ಎಂದರು.
ಇದಕ್ಕೆ ಸದಸ್ಯ ಸಿ.ಟಿ. ರವಿ ಹಾಸ್ಯ ಚಟಾಕಿ ಹಾರಿಸಿ, ‘ನಿಮ್ಮ ಚೇರ್ ಮುಂದೆ ಉಪಮುಖ್ಯಮಂತ್ರಿ ಎಂದು ಹಾಕಿದ್ದಾರೆ. ಅದರ ಜ್ವರನಾ?’ ಎಂದು ಪ್ರಶ್ನಿಸಿದರು.
ಸಿಎಂ ಸ್ಥಾನಕ್ಕೆ ಆಸೆ ಇದೆಯೇ?
‘ಸಿಎಂ ಕೌನ್ಸಿಲ್ನಲ್ಲಿ ಕುಳಿತುಕೊಳ್ಳಬೇಕು ಎಂದು ಸೂಚಿಸಿದ್ದಕ್ಕೆ ಇಲ್ಲಿಗೆ ಬಂದಿದ್ದೇನೆ. ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಇಲ್ಲಿ ಕುಳಿತುಕೊಳ್ಳುತ್ತಿದ್ದೇನೆ ಅಷ್ಟೇ’ ಎಂದು ರಾಯರೆಡ್ಡಿ ಹೇಳಿದರು.
‘ಮುಂದೆ ಏನಾದರೂ ನೀವು ಮುಖ್ಯಮಂತ್ರಿ ಆಗಬಹುದೇ?’ ಎಂದು ರವಿಕುಮಾರ್ ಪ್ರಶ್ನಿಸಿದರು.
‘ಅದು ಗೊತ್ತಿಲ್ಲ. ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು’ ಎಂದು ರಾಯರೆಡ್ಡಿ ಉತ್ತರಿಸಿದರು.
‘ಆಸೆ ಇದೆಯಾ, ಇಲ್ಲವಾ?’ ಎಂದು ಸಿ.ಟಿ. ರವಿ ಕೇಳಿದಾಗ, ‘ಆಸೆ ಇಲ್ಲ. ಮಾಡಿದರೆ ಎಸ್’ ಎಂದು ರಾಯರೆಡ್ಡಿ ಸ್ಪಷ್ಟಪಡಿಸಿದರು.
