Homeರಾಜ್ಯಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ವಿಧಾನಸಭೆಯಲ್ಲಿ ಕೋಲಾಹಲ : ಕಲಾಪ ಮುಂದೂಡಿಕೆ

ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ವಿಧಾನಸಭೆಯಲ್ಲಿ ಕೋಲಾಹಲ : ಕಲಾಪ ಮುಂದೂಡಿಕೆ

ಬೆಂಗಳೂರು, ಆ.17- ಯೋಜನೆ ಮತ್ತು ಸಾಂಖ್ಯಿಕ ಸಚಿವ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಘೋಷಣೆ ಕೂಗಿದ ಪರಿಣಾಮ ಗದ್ದಲ ಉಂಟಾಗಿ, ಸದನದ ಕಲಾಪವನ್ನು ಕೆಲಕಾಲ ಮುಂದೂಡಿದ ಪ್ರಸಂಗ ನಡೆಯಿತು.

ಬಿಜೆಪಿ ಶಾಸಕ ವಿ. ಸುನೀಲ್‌ಕುಮಾರ್‌ ಅವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಂಡು ಪ್ರಶ್ನೋತ್ತರ ಕಲಾಪವನ್ನು ಹೇಗೆ ನಡೆಸಲಾಗುತ್ತದೆ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಮೊದಲು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಸೇರಿದಂತೆ ಬಿಜೆಪಿಯ ಹಲವು ಶಾಸಕರು ಇದಕ್ಕೆ ದನಿಗೂಡಿಸಿದರು. ಜೆಡಿಎಸ್‌ ಶಾಸಕರೂ ಬೆಂಬಲ ವ್ಯಕ್ತಪಡಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿ, ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದು ಸದನ ಗೊಂದಲಮಯವಾಯಿತು.

ಅಶೋಕ್‌ ಮಾತನಾಡಿ, ಇದೇ ಸದನದಲ್ಲಿ ಈ ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ರಾಜೀನಾಮೆ ಪಡೆದಿದ್ದರು. ಅವರನ್ನು ಸಂಪುಟದಿಂದ ತೆಗೆದಿದ್ದು ಏಕೆ? ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಏಕೆ? ಎಂಬುದನ್ನು ಸದನಕ್ಕೆ ತಿಳಿಸಬೇಕು. ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವವರೆಗೂ ಸದನ ನಡೆಯಲು ಬಿಡುವುದಿಲ್ಲ ಎಂದು ಆಗ್ರಹಿಸಿದರು.

ಈ ಹಂತದಲ್ಲಿ ಸಭಾಧ್ಯಕ್ಷ ಜಿ.ಎಸ್‌. ಪಾಟೀಲ್‌ ಅವರು, ನೋಟಿಸ್‌ ನೀಡಿ ವಿಷಯ ಪ್ರಸ್ತಾಪಿಸಬೇಕು. ಏಕಾಏಕಿ ಈ ವಿಚಾರವನ್ನು ಪ್ರಸ್ತಾಪಿಸಿದರೆ ಹೇಗೆ? ನಿಯಮಾವಳಿಗಳ ಪ್ರಕಾರ ಸದನ ನಡೆಯಬೇಕಲ್ಲವೇ ಎಂದು ಪ್ರಶ್ನಿಸಿದರು. ಆದರೂ ಬಿಜೆಪಿ ಶಾಸಕರು ಸಭಾಧ್ಯಕ್ಷರ ಮನವಿಗೆ ಕಿವಿಗೊಡದೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ತಮ್ಮ ಸ್ಥಾನಗಳಲ್ಲಿ ಎದ್ದುನಿಂತು ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದರು.

ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಮಾತನಾಡಿ, ನಾಗೇಂದ್ರ ಅವರನ್ನು ಸಂಪೂರ್ಣವಾಗಿ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜೀನಾಮೆ ಪಡೆದಿದ್ದರು. ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಅವರನ್ನು ಮೊದಲನೇ ಆರೋಪಿಯಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಲು ಮುಂದಾದರು. ಬಿಜೆಪಿ ಶಾಸಕರು ಘೋಷಣೆಗಳನ್ನು ಮತ್ತಷ್ಟು ತೀವ್ರಗೊಳಿಸಿ ಸಚಿವರನ್ನು ವಜಾಗೊಳಿಸಲೇಬೇಕು ಎಂದು ಒತ್ತಾಯಿಸಿದರು.

ಗದ್ದಲದ ನಡುವೆ ಮಾತನಾಡಿದ ಕೃಷ್ಣ ಬೈರೇಗೌಡ, ನಿಯಮಾವಳಿಗಳನ್ನು ಉಲ್ಲೇಖಿಸಿ, ಯಾವುದೇ ಸಚಿವರ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಲು ಅವಕಾಶ ನೀಡಬಾರದು. ಈ ವಿಚಾರದಲ್ಲಿ ಸಭಾಧ್ಯಕ್ಷರು ರೂಲಿಂಗ್‌ ನೀಡಬೇಕು ಎಂದು ಒತ್ತಾಯಿಸಿದರು.

ಗೂಂಡಾ ವರ್ತನೆಗೆ ಅವಕಾಶ ನೀಡಬಾರದು. ಸದನದ ಮೇಲೆ ದಬ್ಬಾಳಿಕೆ ನಡೆಸಲು ಅವಕಾಶ ನೀಡದೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.ಇದಕ್ಕೆ ಆಡಳಿತ ಪಕ್ಷದ ಹಲವು ಸದಸ್ಯರು ಬಿಜೆಪಿ ನಿಲುವನ್ನು ವಿರೋಧಿಸಿ ಎದ್ದು ನಿಂತು ಮಾತನಾಡಲು ಮುಂದಾದರು. ಗದ್ದಲ ಮತ್ತು ಗೊಂದಲದಿಂದಾಗಿ ಸದನದಲ್ಲಿ ಏನೂ ಕೇಳದ ಪರಿಸ್ಥಿತಿ ನಿರ್ಮಾಣವಾಯಿತು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್‌ ಮಾತನಾಡಿ, ಮಾತನಾಡಲು ನಿಮಗೆ ನೈತಿಕ ಹಕ್ಕಿಲ್ಲ. ಸದನ ನಡೆಸಲು ನಿಮಗೆ ಇಷ್ಟವಿಲ್ಲ ಎಂದು ಪ್ರತಿಪಕ್ಷದ ಸದಸ್ಯರನ್ನು ಛೇಡಿಸಿದರು.ಮತ್ತೆ ಅಶೋಕ್‌ ಮಾತನಾಡಿ, ಸಚಿವರು ರಾಜೀನಾಮೆ ನೀಡಿದ ಬಳಿಕವೇ ಈ ಕುರಿತು ಚರ್ಚೆ ನಡೆಸೋಣ ಎಂದು ಹೇಳಿದರು. ಸಭಾಧ್ಯಕ್ಷರ ಮನವಿಗೂ ಯಾರೂ ಕಿವಿಗೊಡದ ಹಿನ್ನೆಲೆಯಲ್ಲಿ ಸದನದ ಕಾರ್ಯಕಲಾಪವನ್ನು ಕೆಲಕಾಲ ಮುಂದೂಡಲಾಯಿತು.

RELATED ARTICLES
spot_img

Latest News