ಬೆಂಗಳೂರು,ಆ.18- ಚಿಕ್ಕಬಾಣವಾರದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ತಂದೆ ಹಾಗೂ 4 ವರ್ಷದ ಮಗನ ಸಾವಿನ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಪ್ರಿಯಕರನೊಂದಿಗೆ ಸೇರಿ ಮಹಿಳೆ ತಾನು ಹೆತ್ತ ಮಗು ಹಾಗೂ ಪತಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹರಿಣಿ ಹಾಗೂ ಆಕೆಯ ಪ್ರಿಯಕರ ಕನಕಪುರ ತಾಲ್ಲೂಕು ಹಾರೋಹಳ್ಳಿ ನಿವಾಸಿ ವಿನಯ್(30) ನನ್ನು ಚಿಕ್ಕಬಾಣವಾರ ಪೊಲೀಸರು ಬಂಧಿಸಿದ್ದಾರೆ.
ರಾತ್ರೋ ರಾತ್ರಿ ಗಂಡ ಹಾಗೂ ಮಗನನ್ನೇ ಬರ್ಬರವಾಗಿ ಕೊಂದು ಬೆಡ್ರೂಮ್ನಲ್ಲಿ ಮಲಗಿದ್ದ ಹರಿಣಿ ಕಳ್ಳಾಟ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನಿಗೆ ಚಟ್ಟ ಕಟ್ಟಿದ ಪತ್ನಿ ನಂತರ ಹೆತ್ತ ಮಗ ಅನ್ನೋದನ್ನು ನೋಡದೇ ಅಮಾಯಕ ಮಗುವನ್ನು ಕೊಂದು ಇದೀಗ ಪ್ರಿಯಕರನೊಂದಿಗೆ ಜೈಲು ಪಾಲಾಗಿದ್ದಾಳೆ.
ಖಾಸಗಿ ಕಂಪನಿಯೊಂದರ ಉದ್ಯೋಗಿ ವಿನಯ್ಗೆ ಇನ್ಸ್ಟಾ ಗ್ರಾಂನಲ್ಲಿ ಹರಿಣಿಯ ಪರಿಚಯವಾಗಿದೆ. ನಂತರ ಅವರಿಬ್ಬರು ಸ್ನೇಹಿತರಾಗಿದ್ದು, ಪ್ರೀತಿಗೆ ತಿರುಗಿದೆ.
ತದ ನಂತರದಲ್ಲಿ ವಿನಯ್ ಆಗಾಗ್ಗೆ ಹರಿಣಿ ಮನೆಗೆ ಬಂದು ಹೋಗುತ್ತಿದ್ದನು. ಈ ವಿಚಾರ ಪತಿ ಅಭಿನಂದನ್ ಗೆ ಗೊತ್ತಾಗಿ ಜಗಳವಾಗುತ್ತಿತ್ತು. ಇದರಿಂದ ಹರಿಣಿ ಪತಿ ಮೇಲೆ ಕೋಪಗೊಂಡಿದ್ದಳು.
ಇದೇ ವಿಚಾರಕ್ಕೆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿದ್ದುದ್ದರಿಂದ ಗಂಡನನ್ನು ಕೊಲೆ ಮಾಡಲು ನಿರ್ಧರಿಸಿದ್ದಾಳೆ. ಈ ವಿಚಾರವನ್ನು ಪ್ರಿಯಕರನಿಗೂ ತಿಳಿಸಿ ಕೊಲೆಗೆ ಸಂಚು ರೂಪಿಸಿದ್ದಾರೆ. ಮೊದಲೇ ಮಾಡಿಕೊಂಡ ಸಂಚಿನಂತೆ ಮೊನ್ನೆ ರಾತ್ರಿ ಗಂಡ ಅಭಿನಂದನ್ ನಿದ್ರೆಗೆ ಜಾರಿದ ನಂತರ ಮನೆಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಸ್ಥಗಿತಗೊಳಿಸಿ 11 ಗಂಟೆ ಸುಮಾರಿನಲ್ಲಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಪ್ರಿಯಕರ ವಿನಯ್ ಮನೆಗೆ ಬಂದಿದ್ದಾನೆ. ನಂತರ ಪತಿ ಅಭಿನಂದನ್ ಕಾಲನ್ನು ಹರಿಣಿ ಗಟ್ಟಿಯಾಗಿ ಹಿಡಿದುಕೊಂಡಿದ್ದು, ವಿನಯ್ ಸೌಟಿನಿಂದ ತಲೆಗೆ ಹೊಡೆದು ನಂತರ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಅದೇ ವೇಳೆಗೆ ಎಚ್ಚರಗೊಂಡು ಕೊಠಡಿ ಬಳಿ ಬಂದು ನಿಂತುಕೊಂಡು ನೋಡುತ್ತಿದ್ದ ತನ್ನ 4 ವರ್ಷದ ಮಗು ಯದುವೀರ್ನನ್ನು ಕಂಡು ಹರಿಣಿ ಗಾಬರಿಗೊಂಡಿದ್ದಾಳೆ. ತಂದೆಯನ್ನು ಕೊಲೆ ಮಾಡಿರುವುದು ನೋಡಿದ್ದಾನೆಂದು ತಿಳಿದು ಆತ ಎಲ್ಲಿ ನಿಜ ಹೇಳುತ್ತಾನೆಂದು ಭಾವಿಸಿ ಇಬ್ಬರೂ ಸೇರಿ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ.
ತದ ನಂತರ ಪ್ರಿಯಕರ ಮನೆಯಿಂದ ಹೊರಗೆ ಹೋಗಿ ತಲೆಮರೆಸಿಕೊಂಡಿದ್ದಾನೆ. ಹರಿಣಿ ರಕ್ತದ ಕಲೆಗಳಿದ್ದ ಗಂಡನ ಬಟ್ಟೆಯನ್ನು ಬದಲಾಯಿಸಿ ರಾತ್ರಿಯೇ ತೊಳೆದಿದ್ದಾಳೆ.ನಂತರ ಮಗುವನ್ನು ಗಂಡನ ಮೇಲೆ ಮಲಗಿಸಿ ಆಕೆಯೂ ನಿದ್ರೆ ಮಾಡುವಂತೆ ನಟಿಸಿದ್ದಾಳೆ. ಬೆಳಗಾಗುತ್ತಿದ್ದಂತೆ ಗಂಡ ಮಗು ಸಾವನ್ನಪ್ಪಿದ್ದಾರೆಂದು ಬಿಂಬಿಸಿ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮನೆಯ ವಾತಾವರಣ ಗಮನಿಸಿ ಆಕೆಯ ಮೇಲೆಯೇ ಸಂಶಯ ಮೂಡಿದೆ. ಮನೆಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಏಕೆ ಆಫ್ ಮಾಡಲಾಗಿದೆ ಎಂದು ಪ್ರಶ್ನಿಸಿದಾಗ ಆಕೆ ಸರಿಯಾದ ಉತ್ತರ ನೀಡಿಲ್ಲ.ಮಗುವನ್ನು ಪತಿ ಹಿಡಿದುಕೊಂಡು ಮಲಗಿದ್ದಾಗ ಉಸಿರುಗಟ್ಟಿ ಸತ್ತಿದೆ ಎಂದು ಹೇಳಿದ್ದಾಳೆ. ಆದರೆ ಆಕೆಯ ಮೇಲೆಯೇ ಪೊಲೀಸರಿಗೆ ಗಾಢ ಅನುಮಾನ ವ್ಯಕ್ತವಾಗಿದೆ.
ಇತ್ತ ಮಗ ಅಭಿನಂದನ್ ಹಾಗೂ ಮೊಮಗ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಭಿನಂದನ್ ತಾಯಿ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು ಮನೆಯನ್ನೆಲ್ಲಾ ಪರಿಶೀಲಿಸಿ ನಂತರ ಹರಿಣಿಯನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಗಿ, ಆ ವೇಳೆ ಮಗ ನೋಡಿದ್ದರಿಂದ ಆತನನ್ನು ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಬಾಯ್ಬಿಟ್ಟಿದ್ದಾಳೆ.ಈಕೆಯ ಮಾಹಿತಿ ಆಧರಿಸಿ ಇದೀಗ ಆಕೆಯ ಪ್ರಿಯಕರ ವಿನಯ್ನನ್ನು ಸಹ ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
