Homeಬೆಂಗಳೂರುನಕಲಿ ಇಪಿಐಡಿ ಸೃಷ್ಟಿಸಿ ಅನಧಿಕೃತ ಬಡಾವಣೆಗೆ ಖಾತೆ : ಎನ್‌.ಆರ್‌. ರಮೇಶ್‌ ಆರೋಪ

ನಕಲಿ ಇಪಿಐಡಿ ಸೃಷ್ಟಿಸಿ ಅನಧಿಕೃತ ಬಡಾವಣೆಗೆ ಖಾತೆ : ಎನ್‌.ಆರ್‌. ರಮೇಶ್‌ ಆರೋಪ

ಬೆಂಗಳೂರು, ಆ.19- ನಗರದಲ್ಲಿ ಮತ್ತೊಂದು ಅನಧಿಕೃತ ಬಡಾವಣೆಯ 22 ನಿವೇಶನಗಳಿಗೆ ನಕಲಿ ಇಪಿಐಡಿ ಸಂಖ್ಯೆಗಳನ್ನು ಸೃಷ್ಟಿಸಿ ಕಾನೂನುಬಾಹಿರವಾಗಿ ಖಾತೆ ಮಾಡಿಕೊಡಲಾಗಿದೆ ಎಂದು ಬಿಜೆಪಿ ನಾಯಕ ಎನ್‌.ಆರ್‌. ರಮೇಶ್‌ ಗಂಭೀರ ಆರೋಪ ಮಾಡಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಚೂಡೇನಪುರ (ಕೋಡಿಪಾಳ್ಯ) ಗ್ರಾಮದ ಸರ್ವೆ ನಂಬರ್‌ 3/4ರಲ್ಲಿ 34 ಗುಂಟೆ ಕೃಷಿ ಜಮೀನಿನ ಪೈಕಿ 24.08 ಗುಂಟೆಯನ್ನು ಎನ್‌. ದೇವರಾಜು ಅವರಿಗೆ ಹಾಗೂ 9.08 ಗುಂಟೆಯನ್ನು ಕೆ.ಎನ್‌. ಪ್ರಸನ್ನ ಅವರಿಗೆ ದಾನಪತ್ರದ ಮೂಲಕ ನೀಡಲಾಗಿತ್ತು.

ಈ ಜಮೀನಿನಲ್ಲಿ ಯಾವುದೇ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯದೆ ನಿವೇಶನಗಳನ್ನು ವಿಂಗಡಿಸಿ ಮಾರಾಟ ಮಾಡಲಾಗಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿರುವ ಈ ಅನಧಿಕೃತ ಬಡಾವಣೆಯ 22 ನಿವೇಶನಗಳಿಗೆ 2026ರ ಜನವರಿಯಿಂದ ಜೂನ್‌ವರೆಗೆ ಹೊಸ ಇಪಿಐಡಿ ಸಂಖ್ಯೆಗಳನ್ನು ಸೃಷ್ಟಿಸಿ ಖಾತೆ ಮಾಡಿಕೊಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸ್ಕ್ಯಾನ್‌ ಮಾಡಲಾಗಿರುವ ಖಾತಾ ಪುಸ್ತಕದಲ್ಲಿನ ಖಾಲಿ ಸಂಖ್ಯೆಗಳನ್ನು ಬಳಸಿಕೊಂಡು ಹೊಸ ಇಪಿಐಡಿಗಳನ್ನು ಸೃಷ್ಟಿಸಿರುವುದು ದಾಖಲೆಗಳ ಪರಿಶೀಲನೆಯಿಂದ ಬಹಿರಂಗವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಕೆಂಗೇರಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಬಡಾವಣೆಯಲ್ಲಿ ಮಾಡಲಾಗಿರುವ ಖಾತೆಗಳನ್ನು ಕೂಡಲೇ ರದ್ದುಪಡಿಸುವಂತೆ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಇಲಾಖಾ ವಿಚಾರಣೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಕೆಂಗೇರಿ ಉಪವಿಭಾಗದಲ್ಲಿ ಸಹಾಯಕ ಕಂದಾಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ರಮೇಶ್‌ ರಾಥೋಡ್‌, ಎಆರ್‌ಒ ರಂಗಸ್ವಾಮಿ, ದ್ವಿತೀಯ ದರ್ಜೆ ಗುಮಾಸ್ತೆ ನಿಖಿತಾ ಹಾಗೂ ಗಣಕಯಂತ್ರ ನಿರ್ವಾಹಕಿ ಲಕ್ಷ್ಮಿ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಅಧಿಕಾರ ದುರುಪಯೋಗದ ಆರೋಪಗಳ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು (ಕಂದಾಯ) ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ದಾಖಲೆಗಳ ಸಮೇತ ಅವರು ದೂರು ನೀಡಿದ್ದಾರೆ.

ಅಲ್ಲದೇ ಇದೇ ಆರೋಪಗಳ ಕುರಿತು ಲೋಕಾಯುಕ್ತದ ಐಜಿಪಿಗೂ ಸಂಪೂರ್ಣ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ರಮೇಶ್‌ ತಿಳಿಸಿದ್ದಾರೆ.

RELATED ARTICLES
spot_img

Latest News