ಮಾಜಿ ಸಚಿವ ಬಿ.ಸಿ.ನಾಗೇಶ್ಗೆ ಪರಿಷತ್ನಲ್ಲಿ ನಮನ :
ಬೆಂಗಳೂರು,ಆ.19- ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಮಾಜಿ ಸಚಿವ ಬಿ.ಸಿ.ನಾಗೇಶ್ ಅವರಿಗೆ ವಿಧಾನಪರಿಷತ್ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಸಲೀಂ ಅಹಮದ್ ಅವರು ವಿಷಯ ಪ್ರಸ್ತಾಪಿಸಿ ಮೃತರ ಗೌರವಾರ್ಥ ಗೌರವ ಸೂಚಿಸುವ ಸಂತಾಪ ನಿರ್ಣಯವನ್ನು ಮಂಡಿಸಿದರು.
ಸಂತಾಪ ನಿರ್ಣಯದ ಪರವಾಗಿ ಸಭಾನಾಯಕ ಹಾಗೂ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸದಸ್ಯರಾದ ಎನ್.ರವಿಕುಮಾರ್, ಕೇಶವಮೂರ್ತಿ ಮಾತನಾಡಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಬಿ.ಸಿ.ನಾಗೇಶ್ ಅವರು ನನಗೆ 1989ರಿಂದ ಪರಿಚಯ. 1994ರಲ್ಲಿ ನಾನು ಚುನಾವಣೆಯಲ್ಲಿ ಸೋತಾಗ ನನ್ನನ್ನು ಭೇಟಿಯಾಗಿದ್ದ ಅವರು, ನಿಮನ್ನು ಕಾಂಗ್ರೆಸ್ನಲ್ಲಿ ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಹೀಗಾಗಿ ಬಿಜೆಪಿಗೆ ಬರಬೇಕು ಎಂದು ಮನವಿ ಮಾಡಿಕೊಂಡರು.
ತುಮಕೂರಿಗೆ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಲಾಲ್ಕೃಷ್ಣ ಅಡ್ವಾಣಿ ಬರುವ ಕಾರ್ಯಕ್ರಮವಿತ್ತು. ನೀವು ಪಕ್ಷಕ್ಕೆ ಸೇರ್ಪಡೆಯಾಗುವುದಾದರೆ ತುಮಕೂರಿನಲ್ಲೇ ಬೃಹತ್ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಿ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ನಿಮನ್ನು ಅಭ್ಯರ್ಥಿ ಮಾಡುವುದಾಗಿ ಹೇಳಿದ್ದರು ಎಂದು ಸರಿಸಿದರು.
ಡಾ.ಯತೀಂದ್ರ ಮಾತನಾಡಿ, ಬಿ.ಸಿ.ನಾಗೇಶ್ ಅವರು ಎಬಿವಿಪಿ ಹಾಗೂ ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದ್ದರು
ಎಂದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಆರ್ಎಸ್ಎಸ್ ಮತ್ತು ಎಬಿವಿಪಿಯಲ್ಲಿ ಗುರುತಿಸಿಕೊಂಡ ಅವರು ತಮನ್ನು ರಾಷ್ಟ್ರ ಸೇವೆಗೆ ಸಮರ್ಪಣೆ ಮಾಡಿಕೊಂಡಿದ್ದರು. ಅವರ ನಿಧನ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು. ಮೃತರ ಗೌರವಾರ್ಥವಾಗಿ ಸದನದಲ್ಲಿ ಸದಸ್ಯರೆಲ್ಲರು ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು.
ಬಿ.ಸಿ.ನಾಗೇಶ್ಗೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ಬೆಂಗಳೂರು, ಆ.19- ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಸಿ. ನಾಗೇಶ್ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ಬಿ.ಸಿ. ನಾಗೇಶ್ ಅವರ ನಿಧನದ ವಿಚಾರವನ್ನು ವಿಷಾದದಿಂದ ಸದನಕ್ಕೆ ತಿಳಿಸಿದರು. 1959ರ ಜುಲೈ 1ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ್ದ ಬಿ.ಸಿ. ನಾಗೇಶ್ ಅವರು ಬಿಇ ಪದವೀಧರರಾಗಿದ್ದರು.
ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿಯಲ್ಲಿ ತೊಡಗಿಸಿಕೊಂಡಿದ್ದರು.2008ರಲ್ಲಿ ತಿಪಟೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಅವರು, ಬಳಿಕ 15ನೇ ವಿಧಾನಸಭೆಗೂ ಪುನರಾಯ್ಕೆಯಾಗಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಶಿಕ್ಷಣ ಸಚಿವರಾಗಿದ್ದ ಅವಽಯಲ್ಲಿ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ, ಶಿಸ್ತು ಪಾಲನೆ ಸೇರಿದಂತೆ ಹಲವು ವಿಚಾರಗಳಲ್ಲಿ ದೇಶದ ಗಮನ ಸೆಳೆದಿದ್ದರು. ಕರಾವಳಿಯಿಂದ ಕಲ್ಯಾಣ ಕರ್ನಾಟಕದವರೆಗೆ ರಾಜ್ಯಾದ್ಯಂತ ಶಾಲಾ ಮಕ್ಕಳಲ್ಲಿ ನೈತಿಕ ವೌಲ್ಯಗಳನ್ನು ಬೆಳೆಸುವುದು ಹಾಗೂ ಕಲಿಕೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಸಭಾಧ್ಯಕ್ಷರು ವಿವರಿಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಬಿ.ಸಿ. ನಾಗೇಶ್ ಅವರನ್ನು ಸ್ಮರಿಸಿ, ಅವರು ಕೇವಲ ಶಾಸಕರಲ್ಲ, ನನ್ನ ಉತ್ತಮ ಸ್ನೇಹಿತರಾಗಿದ್ದರು ಎಂದು ಹೇಳಿದರು.
ನಾಗೇಶ್ ಅವರು ಆರ್ಎಸ್ಎಸ್ ಮತ್ತು ಎಬಿವಿಪಿ ಮೂಲಕ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಚುನಾವಣೆಯಲ್ಲಿ ಸೋಲು-ಗೆಲುವು ಗಳನ್ನು ಕಂಡಿದ್ದರೂ, ಪಕ್ಷಾತೀತವಾಗಿ ಎಲ್ಲರೊಂದಿಗೂ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಬ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿದ್ದರು. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ ಎಂದು ಅಶೋಕ್ ತಿಳಿಸಿದರು.
ಸಚಿವ ಯು.ಟಿ. ಖಾದರ್ ಮಾತನಾಡಿ, ಪ್ರತಿಯೊಂದು ಸಾವಿನಲ್ಲೂ ಒಂದು ಸಂದೇಶ ಇರುತ್ತದೆ. ಅಽಕಾರ, ಆಸ್ತಿ, ಅಂತಸ್ತು ಯಾವುದೂ ಶಾಶ್ವತವಲ್ಲ. ನಾವು ಸಮಾಜಕ್ಕಾಗಿ ಮಾಡಿದ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಿ.ಸಿ. ನಾಗೇಶ್ ಅವರು ಶಿಕ್ಷಣ ಸಚಿವರಾಗಿ ಮೃದು ಸ್ವಭಾವದಿಂದ ಕಾರ್ಯನಿರ್ವಹಿಸಿದ್ದರು. ಅವರು ರೂಪಿಸಿದ ಹಲವು ಯೋಜನೆಗಳು ಹಾಗೂ ಕೈಗೊಂಡ ನಿರ್ಧಾರಗಳನ್ನು ಮುಂದುವರಿಸಿಕೊಂಡು ಬಂದಿದ್ದೇನೆ ಎಂದರು.
ವಿವೇಕ ಯೋಜನೆಯಡಿ ನಾಗೇಶ್ ಅವರು ಸುಮಾರು 8,200 ಕೊಠಡಿಗಳನ್ನು ಮಂಜೂರು ಮಾಡಿದ್ದರು. ಅವುಗಳ ನಿರ್ಮಾಣ ಕಾರ್ಯವನ್ನು ತಾವು ಪೂರ್ಣಗೊಳಿಸಿದ್ದಾಗಿ ಮಧು ಬಂಗಾರಪ್ಪ ತಿಳಿಸಿದರು.
ಜೆಡಿಎಸ್ ಸದಸ್ಯ ಸಿ.ಎನ್. ಬಾಲಕೃಷ್ಣ ಮಾತನಾಡಿ, ಬಿ.ಸಿ. ನಾಗೇಶ್ ಅವರು ತಮ್ಮ ಪಕ್ಕದ ಕ್ಷೇತ್ರದವರಾಗಿದ್ದರು. ನನ್ನ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ನಾಗೇಶ್ ಅವರು ಸಹಾಯ ಮಾಡಿದ್ದರು ಎಂದು ಹೇಳಿದರು.
ತಿಪಟೂರು ಶಾಸಕ ಷಡಕ್ಷರಿ ಹಾಗೂ ಬಿ.ಸಿ. ನಾಗೇಶ್ ಅವರು ರಾಜಕೀಯವಾಗಿ ಪ್ರತಿಸ್ಪರ್ಽಗಳಾಗಿದ್ದರೂ, ವೈಯಕ್ತಿಕವಾಗಿ ಉತ್ತಮ ಸ್ನೇಹಿತರಾಗಿದ್ದರು. ಇಬ್ಬರೂ ಪರಸ್ಪರ ಗೌರವದಿಂದ ನಡೆದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಎಂದೂ ಟೀಕೆಗಳನ್ನು ಮಾಡಿಕೊಳ್ಳಲಿಲ್ಲ ಎಂದು ಸ್ಮರಿಸಿದರು.
ಸಚಿವರಾದ ಚಲುವರಾಯಸ್ವಾಮಿ, ಶರಣ ಪ್ರಕಾಶ್ ಪಾಟೀಲ್, ಬಿಜೆಪಿ ಉಪನಾಯಕ ಅರವಿಂದ್ ಬೆಲ್ಲದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎಸ್.ಸುರೇಶ್ ಕುಮಾರ್, ಆರಗಜ್ಞಾನೇಂದ್ರ, ಹರೀಶ್ ಪೂಂಜಾ, ಸುರೇಶ್ ಗೌಡ, ಜೆಡಿಎಸ್ನ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಅನೇಕರು ಬಿ.ಸಿ. ನಾಗೇಶ್ ಅವರ ಸರಳ ವ್ಯಕ್ತಿತ್ವ, ಸಾರ್ವಜನಿಕ ಸೇವೆ, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ರಾಜಕೀಯ ಜೀವನವನ್ನು ಸ್ಮರಿಸಿ ಕೊಂಡಾಡಿದರು.ನಂತರ ವೌನಾಚರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
