Homeರಾಜಕೀಯವಿಪಕ್ಷಗಳಿಗೆ ರಾಜ್ಯದ ಹಿತಕ್ಕಿಂತ ರಾಜಕಾರಣವೇ ಮುಖ್ಯ: ಶಿವರಾಜ್‌ ತಂಗಡಗಿ

ವಿಪಕ್ಷಗಳಿಗೆ ರಾಜ್ಯದ ಹಿತಕ್ಕಿಂತ ರಾಜಕಾರಣವೇ ಮುಖ್ಯ: ಶಿವರಾಜ್‌ ತಂಗಡಗಿ

ಬೆಂಗಳೂರು, ಆ.19- ವಿರೋಧ ಪಕ್ಷಗಳಿಗೆ ರಾಜ್ಯದ ಹಿತಕ್ಕಿಂತ ರಾಜಕಾರಣವೇ ಮುಖ್ಯವಾಗಿದ್ದು, ಅಧಿವೇಶನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್‌ ತಂಗಡಗಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ನಾಗೇಂದ್ರ ಅವರು ಏನು ತಪ್ಪು ಮಾಡಿದ್ದಾರೆ ಎಂಬುದನ್ನು ಸದನದಲ್ಲಿ ದಾಖಲೆ ಸಹಿತ ಪ್ರಸ್ತಾಪಿಸಬೇಕು. ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದ್ದರೂ ಇನ್ನೊಬ್ಬರ ಬಗ್ಗೆ ಆರೋಪ ಮಾಡುತ್ತಾರೆ. ಬಿಜೆಪಿಯವರಿಗೆ ಎಸ್‌ಸಿ/ಎಸ್‌ಟಿ ಸಮುದಾಯದವರನ್ನು ಸಹಿಸಲಾಗುವುದಿಲ್ಲ ಎಂದು ಆರೋಪಿಸಿದರು.

ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳದಲ್ಲಿ ಹೋಮ-ಹವನ ಮಾಡಿ ‘ಶುದ್ಧೀಕರಣ’ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ಸಮುದಾಯದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕ ಹಕ್ಕಿದೆ? ಅವರ ಅಧಿಕಾರಾವಧಿಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಯಾವ ಅನುಕೂಲವನ್ನೂ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದರು.

ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಕುರ್ಚಿಗೂ ಹೋಮ-ಹವನ ಮಾಡಿ ಶುದ್ಧೀಕರಣ ಮಾಡಿದರೂ ಆಶ್ಚರ್ಯಪಡಬೇಕಿಲ್ಲ ಎಂದು ವ್ಯಂಗ್ಯವಾಡಿದ ಅವರು, ಉಭಯ ಸದನಗಳಲ್ಲಿ ಸಚಿವ ನಾಗೇಂದ್ರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿ ಚರ್ಚೆ ನಡೆಸಲಿ. ಸರ್ಕಾರ ಉತ್ತರ ನೀಡಲಿದೆ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಎಂಟು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಏಳರಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಮತ್ತೊಂದು ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಆರೋಪಪಟ್ಟಿ ಸಲ್ಲಿಸುವುದು ಬಾಕಿ ಇದೆ ಎಂದು ತಿಳಿಸಿದರು.

ಇ.ಡಿ. ಜೈಲಿನಲ್ಲಿರುವವರನ್ನು ಸಾಕ್ಷಿಗಳಾಗಿ ಪರಿಗಣಿಸಲು ಪ್ರಯತ್ನಿಸುತ್ತಿದೆ. ಅದು ಹೇಗೆ ಸಾಧ್ಯ? ನಾವು ಸಿಐಡಿಯನ್ನು ನಂಬುತ್ತೇವೆ. ಬಿಜೆಪಿಯವರಿಗೆ ಆಧಾರಸಹಿತ ಸಾಕ್ಷ್ಯಗಳಿದ್ದರೆ ಸದನದಲ್ಲಿ ಚರ್ಚೆ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ಸದನದಲ್ಲಿ ಚರ್ಚೆ ನಡೆಸಲಿ ಎಂದು ಅವರು ಆಗ್ರಹಿಸಿದರು.

ವಿಧಾನಪರಿಷತ್‌ ಸದಸ್ಯ ಐವಾನ್‌ ಡಿಸೋಜ ಮಾತನಾಡಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಉಭಯ ಸದನಗಳಲ್ಲಿ ಕಲಾಪಕ್ಕೆ ಅಡ್ಡಿಪಡಿಸಲಾಗುತ್ತಿದೆ. ಕುಡಿಯುವ ನೀರು, ಬರ ಪರಿಸ್ಥಿತಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಸದನಕ್ಕೆ ಅಡ್ಡಿಪಡಿಸುವ ಮೂಲಕ ತಮ್ಮ ಹಕ್ಕುಚ್ಯುತಿ ಮಾಡುತ್ತಿದ್ದಾರೆ. ದಬ್ಬಾಳಿಕೆ ನಡೆಸುವವರನ್ನು ಸದನದಿಂದ ಹೊರಹಾಕುವ ಕಠಿಣ ಕ್ರಮ ಕೈಗೊಳ್ಳುವಂತೆ ಸಭಾಪತಿಯವರಲ್ಲಿ ಮನವಿ ಮಾಡಿದರು.

RELATED ARTICLES
spot_img

Latest News