Homeರಾಜ್ಯಡೆತ್‌ನೋಟ್‌ ಬರೆದಿಟ್ಟು ಒಂದೇ ಕುಟುಂಬದ ನಾಲ್ವರು ನಾಪತ್ತೆ

ಡೆತ್‌ನೋಟ್‌ ಬರೆದಿಟ್ಟು ಒಂದೇ ಕುಟುಂಬದ ನಾಲ್ವರು ನಾಪತ್ತೆ

ಬೆಂಗಳೂರು, ಆ.20- ಡೆತ್‌ನೋಟ್‌ ಬರೆದಿಟ್ಟು ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ವಿದ್ಯಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಬನಶಂಕರಿ ಬಡಾವಣೆ ನಿವಾಸಿ, ಗುತ್ತಿಗೆದಾರ ರಮೇಶ್‌ಕುಮಾರ್‌ (38), ಅವರ ಪತ್ನಿ ಜಯಶೀಲಾ (36) ಹಾಗೂ ಇಬ್ಬರು ಮಕ್ಕಳಾದ ಹಿತೇಶ್‌ (9) ಮತ್ತು ಪ್ರೇರಣಾ (3) ನಾಪತ್ತೆಯಾಗಿದ್ದಾರೆ.

ಆ.14ರಂದು ರಮೇಶ್‌ಕುಮಾರ್‌ ಅವರು ತಮ್ಮ ತಾಯಿಗೆ ಕರೆ ಮಾಡಿ, ರಜೆ ಇರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಬೆಂಗಳೂರಿಗೆ ತೆರಳುತ್ತಿರುವುದಾಗಿ ಹೇಳಿದ್ದರು. ಬಳಿಕ ಯಾವುದೇ ಕರೆಗೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ರಮೇಶ್‌ ಅವರ ತಾಯಿ ಲಲಿತಮ್ಮ ಹಲವು ಬಾರಿ ಕರೆ ಮಾಡಿದರೂ ಮಗ ಹಾಗೂ ಸೊಸೆಯ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿದ್ದರಿಂದ ಆತಂಕಗೊಂಡಿದ್ದಾರೆ.

ಈ ನಡುವೆ ಲಲಿತಮ್ಮ ಅವರಿಗೆ ಅನುಮಾನ ಮೂಡಿದ್ದರಿಂದ ಮಗನ ಮನೆಗೆ ತೆರಳಿದಾಗ, ಆವರಣದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳು ನಿಂತಿರುವುದು ಕಂಡುಬಂದಿದೆ. ಬಳಿಕ ತಮ್ಮ ಬಳಿ ಇದ್ದ ಮತ್ತೊಂದು ಕೀಲಿಯ ಸಹಾಯದಿಂದ ಮನೆಯ ಬೀಗ ತೆಗೆದು ಒಳಗೆ ಹೋದಾಗ, ಮಗ ಹಾಗೂ ಸೊಸೆಯ ಮೊಬೈಲ್‌ಗಳು ಮನೆಯಲ್ಲೇ ಇರುವುದು ಕಂಡುಬಂದಿದೆ. ಮೊಬೈಲ್‌ಗಳ ಪಕ್ಕದಲ್ಲೇ ಪತ್ರವೊಂದು ಕೂಡ ಪತ್ತೆಯಾಗಿದೆ.

ಪತ್ರವನ್ನು ಪರಿಶೀಲಿಸಿದಾಗ, ‘ಸಾಲಬಾಧೆಯಿಂದ ನಾವು ಸಾವಿನ ಮೊರೆ ಹೋಗುತ್ತಿದ್ದೇವೆ’ ಎಂದು ಬರೆಯಲಾಗಿತ್ತು ಎನ್ನಲಾಗಿದೆ. ನಾಲ್ವರು ನಾಪತ್ತೆಯಾಗಿರುವುದರಿಂದ ಲಲಿತಮ್ಮ ಹಾಗೂ ಕುಟುಂಬದವರಲ್ಲಿ ತೀವ್ರ ಆತಂಕ ಉಂಟಾಗಿದೆ.

ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಲಲಿತಮ್ಮ ಅವರು ವಿದ್ಯಾನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರಿಗಾಗಿ ವಿವಿಧ ಆಯಾಮಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಡೆತ್‌ನೋಟ್‌ನಲ್ಲಿ ಸಾಲಬಾಧೆಯನ್ನು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ನೆರೆಹೊರೆಯವರಿಂದಲೂ ವಿವರಗಳನ್ನು ಪಡೆದುಕೊಂಡು ಆ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ರಮೇಶ್‌ಕುಮಾರ್‌ ಅವರ ವಾಹನಗಳು ಮನೆಯ ಬಳಿಯೇ ಇರುವುದರಿಂದ ಕುಟುಂಬ ಎಲ್ಲಿಗೆ ತೆರಳಿರಬಹುದು ಎಂಬುದರ ಕುರಿತು ಮಾಹಿತಿ ಕಲೆಹಾಕಲು ಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆ.14ರಿಂದ ನಾಪತ್ತೆಯಾಗಿರುವ ಗುತ್ತಿಗೆದಾರ ಕುಟುಂಬದ ನಾಲ್ವರು ಇದುವರೆಗೂ ಪತ್ತೆಯಾಗಿಲ್ಲ.

RELATED ARTICLES
spot_img

Latest News