Homeರಾಜ್ಯಎನ್‌ಕೌಂಟರ್‌ಗೆ ಪ್ರತೀಕಾರವಾಗಿ ಶಿಲುಬೆಪುರ ಬಳಿ ಅರಣ್ಯಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು..!

ಎನ್‌ಕೌಂಟರ್‌ಗೆ ಪ್ರತೀಕಾರವಾಗಿ ಶಿಲುಬೆಪುರ ಬಳಿ ಅರಣ್ಯಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು..!

ಮೈಸೂರು,ಆ.20- ದುಷ್ಕರ್ಮಿಗಳು ಹಚ್ಚಿದ್ದಾರೆ ಎನ್ನಲಾದ ಕಾಡ್ಗಿಚ್ಚಿನಿಂದ ಚಾಮರಾಜನಗರ ಜಿಲ್ಲೆಯ ಶಿಲು ಬೆಪುರ ಅರಣ್ಯ ಪ್ರದೇಶದಲ್ಲಿ ಸುಮಾರು 10 ಎಕರೆ ಅರಣ್ಯ ಹಾನಿಗೊಳಗಾಗಿದೆ.
ಇತ್ತೀಚೆಗೆ ಮೂವರು ಶಂಕಿತ ಬೇಟೆಗಾರರು ಹತರಾದ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಬೇಟೆ ತಡೆ ಶಿಬಿರವೊಂದನ್ನೂ ಧ್ವಂಸಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರತೀಕಾರದ ಉದ್ದೇಶದಿಂದ ದುಷ್ಕರ್ಮಿಗಳು ಬೆಂಕಿ ಹಚ್ಚಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.ಶಿಲುಬೆಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿ ಸುಮಾರು 10 ಎಕರೆ ಪ್ರದೇಶಕ್ಕೆ ಹಾನಿಯಾಗಿದೆ. ಜಾಗೇರಿ ಸಮೀಪದ ಬೇಟೆ ತಡೆ ಶಿಬಿರವನ್ನೂ ಧ್ವಂಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಮರಾಜನಗರದ ಕಾವೇರಿ ವನ್ಯಜೀವಿಧಾಮದಲ್ಲಿರುವ ಹಲವು ಬೇಟೆ ತಡೆ ಶಿಬಿರಗಳನ್ನು ಸ್ಫೋಟಕ ಬಳಸಿ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಆರೋಪ ಕೇಳಿಬಂದಿದೆ.
ಆಗಸ್ಟ್‌ 18-19ರ ಮಧ್ಯರಾತ್ರಿ ಕೊತ್ತನೂರು ವಲಯದ ಮಿಂಚಿನಹಳ್ಳಿ, ಭೀಮೇಶ್ವರಿ, ಒಲ್ಲೆಮರದಹಟ್ಟಿ, ಬುಡಿಕೆರೆ, ಬಂದಹಳ್ಳಿ ಮತ್ತು ಕಾಳಿದೊಡ್ಡಿ ಸೇರಿದಂತೆ ಹಲವು ಬೇಟೆ ತಡೆ ಶಿಬಿರಗಳ ಮೇಲೂ ದಾಳಿ ನಡೆದಿದೆ.

ಕೊತ್ತನೂರು ವಲಯದ ಮಿಂಚಿನರೆಹಳ್ಳಿಯ ಶಿಬಿರವನ್ನು ಡೈನಮೈಟ್‌ ಹಾಗೂ ಜೆಲಟಿನ್‌ ಕಡ್ಡಿಗಳ ಮೂಲಕ ಸ್ಫೋಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಶಿಬಿರದ ಗೋಡೆಗಳು ಹಾನಿಗೊಂಡಿದ್ದು, ಒಳಗಿದ್ದ ಸಾಮಗ್ರಿಗಳು ಸುಟ್ಟುಹೋಗಿವೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.

RELATED ARTICLES
spot_img

Latest News