ಬೆಂಗಳೂರು, ಆ.20- ದಕ್ಷಿಣ ಬೆಂಗಳೂರು ಜಿಲ್ಲೆಯಲ್ಲಿ ಪತ್ತೆಯಾಗಿರುವ ನಕಲಿ ಔಷಧಗಳ ಜಾಲಕ್ಕೆ ಔಷಧಿ ಪೂರೈಸಿದ ಕಂಪನಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೇಂದ್ರ ಮತ್ತು ಆಯಾ ರಾಜ್ಯಗಳ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕಲಿ ಔಷಧಗಳ ಜಾಲವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದು ಅಂತರರಾಜ್ಯ ಮಟ್ಟದಲ್ಲಿ ಔಷಧಗಳನ್ನು ತಯಾರಿಸಿ ಕರ್ನಾಟಕಕ್ಕೆ ಸರಬರಾಜು ಮಾಡುತ್ತಿದ್ದ ಜಾಲವಾಗಿದ್ದು, ರಾಜ್ಯದಾದ್ಯಂತ ವಿತರಣೆ ನಡೆದಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರು ಹಾಗೂ ಸಂಬಂಧಪಟ್ಟ ರಾಜ್ಯಗಳ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗುವುದು ಎಂದರು.
ನಕಲಿ ಔಷಧಗಳು ಯಾವೆಲ್ಲ ಜಿಲ್ಲೆಗಳಿಗೆ ಸರಬರಾಜಾಗಿವೆ, ಎಲ್ಲೆಲ್ಲಿ ಮಾರಾಟವಾಗಿವೆ, ಎಷ್ಟು ವರ್ಷಗಳಿಂದ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು, ಯಾವ ಆಸ್ಪತ್ರೆಗಳಲ್ಲಿ ಈ ಔಷಧಗಳನ್ನು ಬಳಸಲಾಗಿದೆ ಹಾಗೂ ಇದರಿಂದ ರೋಗಿಗಳ ಮೇಲೆ ಉಂಟಾಗಿರುವ ಪರಿಣಾಮಗಳೇನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದರು.ಪ್ರಕರಣ ಅಂತರ್ ರಾಜ್ಯ ವ್ಯಾಪಿ ಸ್ವರೂಪ ಹೊಂದಿರುವುದರಿಂದ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚಿಸುವ ಅಗತ್ಯವಿದೆ. ಈ ಕುರಿತು ಗೃಹ ಸಚಿವರೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ಎಸ್ ಐ ಟಿ ರಚಿಸಲಾಗುವುದು. ಅಲ್ಲಿಯವರೆಗೆ ರಾಮನಗರ ಎಸ್ಪಿ ನೇತೃತ್ವದಲ್ಲಿ ನಮ ಪೊಲೀಸರು ಉತ್ತಮ ತನಿಖೆ ನಡೆಸುತ್ತಿದ್ದಾರೆ ಎಂದರು.
ಸುಮಾರು ಆರು ಬಹುರಾಷ್ಟ್ರೀಯ ಕಂಪನಿಗಳ ಔಷಧಗಳನ್ನು ನಕಲಿ ಲೇಬಲ್ ಬಳಸಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಔಷಧಗಳ ಸಾಗಣೆ ಹಾಗೂ ವಿತರಣೆಯಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳ ವಿರುದ್ಧ ಸಾವಿಗೆ ಪ್ರೇರಣೆ ನೀಡುವಂತಹ ಕಠಿಣ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.ನಕಲಿ ಔಷಧಗಳ ಪತ್ತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ.
10 ಸಾವಿರ ರೂಪಾಯಿ ಮೌಲ್ಯದ ಔಷಧವನ್ನು ಐದು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದರೆ ಸಾರ್ವಜನಿಕರು ಅನುಮಾನಗೊಂಡು ಪ್ರಶ್ನಿಸಬೇಕು ಹಾಗೂ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.ಇದೇ ವೇಳೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವತಿಯಿಂದ ರೈಲ್ವೆ ಇಲಾಖೆಯ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಲಾಗುವುದು.
ಈವರೆಗೆ ನಡೆದ ತಪಾಸಣೆಯಲ್ಲಿ ಪತ್ತೆಯಾದ ಲೋಪಗಳ ಕುರಿತು ಸಂಬಂಧಪಟ್ಟವರಿಗೆ ಮೊದಲ ಹಂತದಲ್ಲಿ ನೋಟಿಸ್ ನೀಡಿ ವಿವರಣೆ ಪಡೆಯಲಾಗುವುದು. ತಕ್ಷಣ ಕಠಿಣ ಕ್ರಮ ಕೈಗೊಂಡರೆ ವ್ಯಾಪಾರ-ವಹಿವಾಟಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಮೊದಲು ನೋಟಿಸ್ ನೀಡಲಾಗುತ್ತದೆ. ತಪ್ಪುಗಳು ಪುನರಾವರ್ತನೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಹೋಟೆಲ್‌ಗಳು ಮತ್ತು ಔಷಧ ಅಂಗಡಿಗಳ ಮುಂಭಾಗ ಅಳವಡಿಸಿರುವ ಕ್ಯೂಆರ್ ಕೋಡ್‌ಗಳ ಮೂಲಕ ಮೊದಲ ದಿನವೇ 350ಕ್ಕೂ ಹೆಚ್ಚು ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೂರುಗಳು ದಾಖಲಾಗುವ ಸಾಧ್ಯತೆ ಇದೆ. ಜನರಲ್ಲಿ ಜಾಗೃತಿ ಹೆಚ್ಚಾಗಿದ್ದು, ಭವಿಷ್ಯದಲ್ಲಿಯೂ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಮುಂದುವರಿಸಲಾಗುವುದು ಎಂದು ಯು.ಟಿ. ಖಾದರ್ ತಿಳಿಸಿದರು.
