ಬೆಂಗಳೂರು, ಅ.6- ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಯನ್ನು ಪರಿಗಣಿಸಿ ಭೂದಾಖಲೆಗಳ ಇಲಾಖೆಯ ಮೋಜಣಿ ವ್ಯವಸ್ಥೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ವಿವಿಧ ಅಳತೆ ಅರ್ಜಿಗಳ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಡಿಸಿಎಂ ಡಾ. ಜಿ. ಪರಮೇಶ್ವರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೆ. 19ರ ಸರ್ಕಾರದ ಆದೇಶದ ಅನ್ವಯ ಮೋಜಿಣಿ ವ್ಯವಸ್ಥೆಯಡಿ ಸ್ವೀಕರಿಸಲಾಗುವ ವಿವಿಧ ರೀತಿಯ ಭೂ ಅಳತೆ ಅರ್ಜಿಗಳ ಶುಲ್ಕ ಹಾಗೂ ಪರವಾನಗಿ ಪಡೆದ ಭೂಮಾಪಕರ ಸೇವಾ ಶುಲ್ಕವನ್ನು ಪರಿಷ್ಕರಿಸಿ ಅಕ್ಟೋಬರ್ ಒಂದರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು.
ಆದರೆ, ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ರೈತರು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭೂಮಾಪನ ಮತ್ತು ಕಂದಾಯ ಸೇವೆಗಳ ಶುಲ್ಕ ಹೆಚ್ಚಳದಿಂದ ರೈತರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಾರದು ಎಂಬ ಉದ್ದೇಶದಿಂದ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಆದೇಶ ಹೊರಡಿಸುವವರೆಗೆ ಮೋಜಿಣಿ ಸೇವೆಗಳಿಗೆ ಸಂಬಂಧಿಸಿದಂತೆ ಅ.1ಕ್ಕೂ ಮೊದಲು ಚಾಲ್ತಿಯಲ್ಲಿದ್ದ ಶುಲ್ಕವೇ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬರದಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ಹಿತಾಸಕ್ತಿಯೇ ಸರ್ಕಾರದ ಮೊದಲ ಆದ್ಯತೆ. ಈಗಾಗಲೇ ಹಲವು ರೀತಿಯ ಆರ್ಥಿಕ ಒತ್ತಡ ಎದುರಿಸುತ್ತಿರುವ ರೈತರ ಮೇಲೆ ಕಂದಾಯ ಇಲಾಖೆಯ ಸೇವೆಗಳ ಮೂಲಕ ಹೆಚ್ಚುವರಿ ಹೊರೆ ಬೀಳಬಾರದು.
ಅದಕ್ಕಾಗಿ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಸೂಕ್ತ ಸಮಯದಲ್ಲಿ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮರು ಆದೇಶ ಹೊರಡಿಸಲಾಗುವುದು. ರೈತರ ಹಿತಾಸಕ್ತಿ ಮತ್ತು ಸಾರ್ವಜನಿಕ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡೇ ಕಂದಾಯ ಇಲಾಖೆಯ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
