ಬೆಂಗಳೂರು,ಅ.6- ರಾಜ್ಯಾದ್ಯಂತ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ವೇಳೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದು, ಸೂಕ್ತ ನಿರ್ದೇಶನ ನೀಡಬೇಕೆಂದು ಎನ್‌ಡಿಎ ನಾಯಕರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಲೋಕಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಪಿ.ಸಿ.ಮೋಹನ್, ಮಲ್ಲೇಶ್ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಶಾಸಕರಾದ ಶ್ರೀವತ್ಸ, ವಿಠಲ್ ಹಲಗೆಕರ್, ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ, ಟಿ.ಎ.ಶರವಣ ಸೇರಿದಂತೆ ಮತ್ತಿತರಿದ್ದ ನಿಯೋಗವು ನಾಲ್ಕು ಪುಟಗಳ ದೂರು ನೀಡಿದೆ.
ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಪ್ರಮುಖವಾಗಿ ಅನರ್ಹ ಮತದಾರರ ಸೇರ್ಪಡೆಯನ್ನು ತಡೆಯಲು ಮತ್ತು ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಪಾಡಲು ಆಕ್ಷೇಪಣೆ ಸಲ್ಲಿಸುವುದು ಕಾನೂನುಬದ್ಧ ಸಾಂವಿಧಾನಿಕ ಹಕ್ಕಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಮತದಾರರ ನೋಂದಣಿ ನಿಯಮಗಳು, 1960ೞರ ನಿಯಮ 13(2) ಹಾಗೂ ಭಾರತೀಯ ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ ನಮೂನೆ-7ರ ಮೂಲಕ ಆಕ್ಷೇಪಣೆಗಳನ್ನು ಹಾಗೂ ಸಾಮೂಹಿಕ ಅರ್ಜಿಗಳನ್ನು ಸಲ್ಲಿಸಲು ಮುಕ್ತ ಅವಕಾಶವಿದೆ. ಬೂತ್ ಮಟ್ಟದ ಏಜೆಂಟರು ಮತ್ತು ಮತದಾರರು ಈ ಹಕ್ಕನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನಿಯೋಗವು ಪತ್ರದಲ್ಲಿ ವಿವರಿಸಿದೆ.
ಆಕ್ಷೇಪಣೆ ಸಲ್ಲಿಸುವ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿದೆ. ಜನತಾ ಪ್ರಾತಿನಿಧ್ಯ ಕಾಯ್ದೆ, 1950 ಸೆಕ್ಷನ್ 31ರಡಿ ಅಪರಾಧಗಳು ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲದ ಸ್ವರೂಪದ್ದಾಗಿದ್ದರೂ, ಅದನ್ನು ಬದಿಗೊತ್ತಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯಡಿ ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಬೆದರಿಕೆಯಂತಹ ಗಂಭೀರ ಅಪರಾಧಗಳಡಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆಕ್ಷೇಪಿಸಿದೆ.
ಈಗಾಗಲೇ ಭಾಲ್ಕಿ (ಬೀದರ್), ಮಾರ್ಕೆಟ್ ಏರಿಯಾ (ಬೆಳಗಾವಿ), ವ್ಯಾಲಿಕಾವಲ್ (ಬೆಂಗಳೂರು), ಬಳ್ಳಾರಿ ಮತ್ತು ಮೈಸೂರಿನ ನರಸಿಂಹರಾಜ ಕ್ಷೇತ್ರಗಳಲ್ಲಿ ಆರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗಿದೆ. ಕಳೆದ ಅಕ್ಟೋಬರ್ 1ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಮತ್ತು ಸಚಿವರು ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸಿದ್ದು, ಚುನಾವಣಾ ಯಂತ್ರಾಂಗದ ಮೇಲೆ ಅನಗತ್ಯ ಪ್ರಭಾವ ಬೀರಿದ್ದಾರೆ ಎಂದು ದೂರಿದ್ದಾರೆ.
ಈ ರಾಜಕೀಯ ಒತ್ತಡದ ಪರಿಣಾಮವಾಗಿಯೇ ಅಂದೇ (01.10.2026) ಸೆಕ್ಷನ್ 31ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, ಇದು ಆಕ್ಷೇಪಣೆ ಸಲ್ಲಿಸುವವರಲ್ಲಿ ಭಯ ವಾತಾವರಣವನ್ನು ನಿರ್ಮಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸ್ವತಂತ್ರ ಮತ್ತು ನಿಷ್ಪಕ್ಷಪಾತ ಸಂಸ್ಥೆಯಾದ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಈ ಹಸ್ತಕ್ಷೇಪವನ್ನು ತಕ್ಷಣವೇ ತಡೆಯಬೇಕು ಮತ್ತು ಎಸ್‌ಐಆರ್ ಪ್ರಕ್ರಿಯೆಯು ಯಾವುದೇ ಭಯವಿಲ್ಲದೆ ನ್ಯಾಯಸಮತವಾಗಿ ನಡೆಯಲು ಸೂಕ್ತ ನಿರ್ದೇಶನ ನೀಡಬೇಕೆಂದು ಬಿಜೆಪಿ-ಜಡ್‌ಡಿಎಸ್ ನಾಯಕರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಇದೇ ವೇಳೆ ಚುನಾವಣಾ ಆಯೋಗವು 2026ರ ಜನವರಿ 16ರಂದು ಹೊರಡಿಸಿರುವ ಸಂವಹನ ಹಾಗೂ ಮತದಾರರ ಪಟ್ಟಿಗಳ ಕೈಪಿಡಿ-2023ರ ಮಾರ್ಗಸೂಚಿಗಳನ್ನು ಉಲ್ಲೇಖಿಸಿರುವ ಎನ್‌ಡಿಎ, ಇಆರ್‌ಒ/ಎಇಆರ್‌ಒಗಳಿಗೆ ಸಲ್ಲಿಸಬಹುದಾದ ನಮೂನೆ 7ರ ಅರ್ಜಿಗಳ ಸಂಖ್ಯೆಗೆ ಮಿತಿ ಇಲ್ಲ ಎಂದು ಹೇಳಿದೆ. ಬೂತ್ ಮಟ್ಟದ ಏಜೆಂಟ್‌ಗಳು ಸಹ ಹಲವು ನಮೂನೆ 7 ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
