ವಾಷಿಂಗ್ಟನ್, ಅ. 6- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಎರಡನೇ ಅವಧಿಯಲ್ಲಿ ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಅಮೆರಿಕಕ್ಕೆ ಕಾನೂನುಬದ್ಧವಾಗಿ ಆಗಮಿಸುವ ವಲಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಬರುವ ವಲಸಿಗರ ಸಂಖ್ಯೆ ಶೇ.96ರಷ್ಟು ಕುಸಿದಿದೆ ಎಂದು ಕ್ಯಾಟೊ ಸಂಸ್ಥೆಯ ವಿಶ್ಲೇಷಣೆ ತಿಳಿಸಿದೆ.
ಅಮೆರಿಕದ ವಿದೇಶಾಂಗ ಇಲಾಖೆಯ ಅಂಕಿಅಂಶಗಳನ್ನು ಆಧರಿಸಿ ನಡೆಸಿರುವ ವಿಶ್ಲೇಷಣೆಯ ಪ್ರಕಾರ, 45 ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ನೀಡಲಾಗುತ್ತಿದ್ದ ಮಾಸಿಕ ವಲಸೆ ವೀಸಾಗಳು ಹಾಗೂ ಕಾನೂನುಬದ್ಧ ಶಾಶ್ವತ ನಿವಾಸಿಗಳ ಪ್ರವೇಶ ಡಿಸೆಂಬರ್ 2024ರಲ್ಲಿ 21,096 ಇದ್ದದ್ದು, ಫೆಬ್ರವರಿಯಲ್ಲಿ ಕೇವಲ 808ಕ್ಕೆ ಇಳಿದಿದೆ.ಈ ಕುಸಿತವು ಸಾಮಾನ್ಯ ಋತುಮಾನ ಬದಲಾವಣೆಯಿಂದ ಉಂಟಾಗಿದ್ದಲ್ಲ ಎಂದು ವರದಿ ಹೇಳಿದೆ. ಕುಟುಂಬ ಸದಸ್ಯರಿಗೆ ನೀಡಲಾಗುತ್ತಿದ್ದ ವಲಸೆ ವೀಸಾಗಳ ಸಂಖ್ಯೆಯಲ್ಲಿಯೂ ಶೇ.95ರಷ್ಟು ಇಳಿಕೆಯಾಗಿದೆ.
ವಿದೇಶಗಳಲ್ಲಿ ಹಿಂಸೆ ಅಥವಾ ಕಿರುಕುಳದ ಬೆದರಿಕೆ ಎದುರಿಸುತ್ತಿರುವವರನ್ನು ಕಾನೂನುಬದ್ಧವಾಗಿ ಅಮೆರಿಕಕ್ಕೆ ಪುನರ್ವಸತಿ ಮಾಡುವ ನಿರಾಶ್ರಿತರ ಪ್ರವೇಶವು ಮುಸ್ಲಿಂ ಬಹುಸಂಖ್ಯಾತ ದೇಶಗಳ ವಿಚಾರದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಡಿಸೆಂಬರ್ 2024ರಲ್ಲಿ 5,157 ಮಂದಿ ನಿರಾಶ್ರಿತರಾಗಿ ಅಮೆರಿಕ ಪ್ರವೇಶಿಸಿದ್ದರೆ, ಫೆಬ್ರವರಿಯಲ್ಲಿ ಈ ಸಂಖ್ಯೆ ಶೂನ್ಯಕ್ಕೆ ಇಳಿದಿದೆ ಎಂದು ವಿಶ್ಲೇಷಣೆ ತಿಳಿಸಿದೆ.
ವಿಶ್ವದ ಬಹುತೇಕ ಮುಸ್ಲಿಂ ಬಹುಸಂಖ್ಯಾತ ದೇಶಗಳ ನಾಗರಿಕರ ಮೇಲೂ ಈ ಕುಸಿತದ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ. ಅಫ್ಘಾನಿಸ್ತಾನದಿಂದ ಫೆಬ್ರವರಿಯಲ್ಲಿ ಕೇವಲ ಒಂಬತ್ತು ಮಂದಿಗೆ ಮಾತ್ರ ಕಾನೂನುಬದ್ಧವಾಗಿ ಅಮೆರಿಕ ಪ್ರವೇಶಿಸಲು ಅವಕಾಶ ದೊರೆತಿದ್ದು, ಡಿಸೆಂಬರ್ 2024ರಲ್ಲಿ ಈ ಸಂಖ್ಯೆ 5,563 ಇತ್ತು.
ಕತಾರ್, ಇಂಡೋನೇಷ್ಯಾ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ಮಾತ್ರ ವಲಸೆ ಪ್ರವೇಶದಲ್ಲಿ ಹೆಚ್ಚಳ ಕಂಡ ಮೂರು ದೇಶಗಳಾಗಿವೆ ಎಂದು ವರದಿ ತಿಳಿಸಿದೆ. ಈ ಪ್ರವೃತ್ತಿ ಮುಂದುವರಿದರೆ, 2026ರ ಹಣಕಾಸು ವರ್ಷದಲ್ಲಿ ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಅಮೆರಿಕಕ್ಕೆ ಬರುವ ವಲಸಿಗರು ಮತ್ತು ನಿರಾಶ್ರಿತರ ಸಂಖ್ಯೆ ಕನಿಷ್ಠ 30 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಯಬಹುದು ಎಂದು ಕ್ಯಾಟೊ ಸಂಸ್ಥೆ ಅಂದಾಜಿಸಿದೆ.
ಅಮೆರಿಕದ ವಲಸೆ ನಿರ್ಬಂಧಗಳಿಂದ ತಡೆಯಲ್ಪಟ್ಟವರಲ್ಲಿ ಸುಮಾರು ಅರ್ಧದಷ್ಟು ಮಂದಿ ಅಮೆರಿಕ ನಾಗರಿಕರ ಪತಿ ಅಥವಾ ಪತ್ನಿ, ಅಪ್ರಾಪ್ತ ಮಕ್ಕಳು ಹಾಗೂ ಇತರ ಆಪ್ತ ಕುಟುಂಬ ಸದಸ್ಯರಾಗಿದ್ದಾರೆ ಎಂದು ವರದಿ ತಿಳಿಸಿದೆ. ಡೊನಾಲ್ಡ್ ಟ್ರಂಪ್ 2025ರ ಜನವರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ನಿರಾಶ್ರಿತರ ಪ್ರವೇಶವನ್ನು 120 ದಿನಗಳ ಕಾಲ ಸ್ಥಗಿತಗೊಳಿಸುವ ಆದೇಶ ಹೊರಡಿಸಿದ್ದರು. ಬಳಿಕ ಡಿಸೆಂಬರ್ನಲ್ಲಿ 40 ದೇಶಗಳ ನಾಗರಿಕರ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ಆದೇಶ ಹೊರಡಿಸಲಾಗಿದ್ದು, ಈ ಪೈಕಿ 10 ದೇಶಗಳು ಮುಸ್ಲಿಂ ಬಹುಸಂಖ್ಯಾತ ದೇಶಗಳಾಗಿವೆ.
ಅಧಿಕಾರಕ್ಕೆ ಬಂದ ನಂತರ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಕಾನೂನುಬದ್ಧ ವಲಸಿಗರ ಅಮೆರಿಕ ಪ್ರವೇಶವನ್ನು ಸ್ಥಗಿತಗೊಳಿಸುವ ಹಲವು ನಿರ್ದೇಶನಗಳನ್ನು ಟ್ರಂಪ್ ಆಡಳಿತ ಹೊರಡಿಸಿದೆ ಎಂದು ವರದಿ ಹೇಳಿದೆ.
ಇತರ ದೇಶಗಳ ವಲಸಿಗರ ಮೇಲೂ ಈ ನೀತಿಗಳ ಪರಿಣಾಮ ಬೀರಿದ್ದರೂ, ಮುಸ್ಲಿಂ ಬಹುಸಂಖ್ಯಾತ ದೇಶಗಳ ಮೇಲಿನ ನಿರ್ಬಂಧಗಳು ಹೆಚ್ಚು ತೀವ್ರವಾಗಿವೆ. ಇತರ ದೇಶಗಳಿಗೆ ಸಂಬಂಧಿಸಿದ ವಲಸೆ ಶೇ.36ರಷ್ಟು ಕುಸಿದಿದ್ದರೆ, ಮುಸ್ಲಿಂ ಬಹುಸಂಖ್ಯಾತ ದೇಶಗಳ ವಲಸೆ ಶೇ.96ರಷ್ಟು ಕುಸಿದಿದೆ ಎಂದು ಕ್ಯಾಟೊ ಸಂಸ್ಥೆ ತಿಳಿಸಿದೆ.
