ನವದೆಹಲಿ, ಅ. 6 (ಪಿಟಿಐ)- ಜಂಟಿ ಉದ್ಯಮದ ಮೂಲಕ ಭಾರತವು ಎರಡು ವರ್ಷಗಳೊಳಗೆ ತನ್ನದೇ ಆದ ಮೊದಲ ಸ್ವದೇಶಿ ನಾಗರಿಕ ವಿಮಾನವನ್ನು ಹೊಂದಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಆಶಯ ವ್ಯಕ್ತಪಡಿಸಿದರು.
ದೇಶದ ನಾಗರಿಕ ವಿಮಾನಯಾನ ವಲಯದ ಬೆಳವಣಿಗೆಯ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಸಚಿವರು, ವಿಮಾನಯಾನ ಸಂಸ್ಥೆಗಳು ಸುಮಾರು 100 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ 1,600ಕ್ಕೂ ಹೆಚ್ಚು ವಿಮಾನಗಳಿಗೆ ಆರ್ಡರ್ ನೀಡಿವೆ. ಮುಂದಿನ 10 ವರ್ಷಗಳಲ್ಲಿ 100ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾಗಲಿವೆ ಎಂದು ಹೇಳಿದರು.
ಪ್ರಸ್ತುತ ದೇಶದಲ್ಲಿ 165 ವಿಮಾನ ನಿಲ್ದಾಣಗಳಿದ್ದು, ದೇಶೀಯ ವಿಮಾನಯಾನ ಸಂಸ್ಥೆಗಳ ಬಳಿ ಸುಮಾರು 850 ವಿಮಾನಗಳಿವೆ. ಜಂಟಿ ಉದ್ಯಮದ ಮೂಲಕ ಎರಡು ವರ್ಷಗಳೊಳಗೆ ‘ಮೇಡ್ ಇನ್ ಇಂಡಿಯಾ’ ನಾಗರಿಕ ವಿಮಾನವನ್ನು ಹೊಂದಲು ಸಾಧ್ಯವಾಗಲಿದೆ ಎಂದು ನಾಯ್ಡು ಹೇಳಿದರು. ಈ ವಲಯಕ್ಕೆ ಅಗತ್ಯವಿರುವ ಪೂರಕ ವ್ಯವಸ್ಥೆಯೂ ಬೆಳೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಈ ಕುರಿತು ನಿರ್ದಿಷ್ಟ ವಿವರಗಳನ್ನು ಸಚಿವರು ಬಹಿರಂಗಪಡಿಸಲಿಲ್ಲ. ಅತ್ಯುತ್ತಮ ನೀತಿಗಳನ್ನು ರೂಪಿಸುವುದರ ಜೊತೆಗೆ, ವಿಮಾನಯಾನ ಕ್ಷೇತ್ರದಲ್ಲಿನ ಉನ್ನತ ಮಟ್ಟದ ಉತ್ಪಾದನಾ ಚಟುವಟಿಕೆಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಗುಣಮಟ್ಟ ಹಾಗೂ ಮಾನವ ಸಂಪನ್ಮೂಲದ ಕೌಶಲ್ಯ ಅಭಿವೃದ್ಧಿಯತ್ತ ಗಮನಹರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಪ್ರಸ್ತುತ ವಿಮಾನ ತಯಾರಕ ಕಂಪನಿಗಳಾದ ಬೋಯಿಂಗ್ ಮತ್ತು ಏರ್‌ಬಸ್, ಭಾರತದಿಂದ ಸುಮಾರು 4 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಬಿಡಿಭಾಗಗಳು ಮತ್ತು ಸೇವೆಗಳನ್ನು ಪಡೆಯುತ್ತಿವೆ. ಈ ದಶಕದ ಅಂತ್ಯದ ವೇಳೆಗೆ ಈ ಮೊತ್ತವು 10 ಶತಕೋಟಿ ಅಮೆರಿಕನ್ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ರಾಜಧಾನಿಯಲ್ಲಿ ನಡೆದ ಇಂಡಿಯನ್ ಫೌಂಡೇಶನ್ ಫಾರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ವಿಚಾರ ಸಂಕಿರಣದಲ್ಲಿ ಮಾತನಾಡಿದ ನಾಯ್ಡು, ದೇಶದಲ್ಲೇ ಜೆಟ್ ಎಂಜಿನ್‌ಗಳನ್ನು ತಯಾರಿಸುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸಲಿದೆ. ಆದರೆ, ಅದು ದೀರ್ಘಾವಧಿಯ ಪ್ರಕ್ರಿಯೆಯಾಗಲಿದೆ ಎಂದು ಹೇಳಿದರು.
ಟಾಟಾ ಸ್ಟೀಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಟಿ.ವಿ. ನರೇಂದ್ರನ್ ಅವರೊಂದಿಗಿನ ಅಧಿವೇಶನದಲ್ಲೂ ಸಚಿವರು ಭಾಗವಹಿಸಿದ್ದರು. ಸುಸ್ಥಿರತೆಯ ಪ್ರಯತ್ನಗಳ ಕುರಿತು ಮಾತನಾಡಿದ ಸಚಿವರು, ಭಾರತವು ಸುಸ್ಥಿರ ವಿಮಾನಯಾನ ಇಂಧನದ ರಫ್ತುದಾರನಾಗುವ ಸಾಮರ್ಥ್ಯ ಹೊಂದಿದೆ. ಕೈಗಾರಿಕೆಗಳಿಗೆ ಸಹಾಯವಾಗುವಂತಹ ಇಂಗಾಲದ ಕ್ರೆಡಿಟ್ ಕಾರ್ಯವಿಧಾನವನ್ನು ರೂಪಿಸಲು ಸರ್ಕಾರ ಕೆಲಸ ಮಾಡಲಿದೆ ಎಂದು ಹೇಳಿದರು.
